ನಾಳೆ ಒಗ್ಗಟ್ಟಿಲ್ಲದ “ಭಾರತ್ ಬಂದ್‍”..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.26- ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಾಳೆ ಕರೆ ಕೊಟ್ಟಿರುವ ಭಾರತ್ ಬಂದ್‍ಗೆ ಬೆಂಬಲ ನೀಡುವ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ, ದಲಿತ, ಕಾರ್ಮಿಕ ಸಂಘಟನೆಗಳು ಬಂದ್ ಯಶಸ್ವಿಗೊಳಿಸಲು ಮನವಿ ಮಾಡಿವೆ. ಬಹುತೇಕ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆಯಾದರೂ ಸಾಕಷ್ಟು ಸಂಘಟನೆಗಳು ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿದೆ.

ವಿವಿಧ ಕನ್ನಡಪರ ಸಂಘಟನೆಗಳು ಬಂದ್‍ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿವೆ. ಹಲವು ಕನ್ನಡಪರ ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿವೆ. ರಾಜ್ಯ ರೈತ ಸಂಘ, ಹಸಿರುಸೇನೆ, ಕಬ್ಬು ಬೆಳೆಗಾರರ ಸಂಘ, ಪ್ರಾಂತ್ಯ ರೈತ ಸಂಘ ಸೇರಿದಂತೆ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಎಲ್ಲಾ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳನ್ನು ತಡೆಯುವ ಯೋಜನೆ ರೂಪಿಸಿದ್ದಾರೆ. ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಅತ್ತಿಬೆಲೆ ಗಡಿಬಂದ್ ಮಾಡಿ ಭಾರತ್ ಬಂದ್‍ಗೆ ಬೆಂಬಲ ಘೋಷಿಸಿದ್ದಾರೆ. ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ನಾಳಿನ ಬಂದ್‍ಗೆ ಬೆಂಬಲ ನೀಡಿದ್ದು, ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಲಿದ್ದಾರೆ.

ಕರವೇಯ ಪ್ರವೀಣ್‍ಕುಮಾರ್ ಶೆಟ್ಟಿ, ಶಿವರಾಮೇಗೌಡ ಅವರು ಕೂq ಬಂದ್‍ಗೆ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಬಣ ಬಂದ್‍ಗೆ ನೈತಿಕ ಬೆಂಬಲ ಘೋಷಿಸಿವೆ. ಆಟೋ, ಟ್ಯಾಕ್ಸಿ, ಚಾಲಕರ ಸಂಘ, ಸಿಐಟಿಯು ಬಂದ್‍ಗೆ ಬೆಂಬಲ ನೀಡಿವೆ. ಆದರ್ಶ ಆಟೋ ಚಾಲಕರ ಸಂಘ ಮತ್ತಿತರ ಸಂಘಟನೆಗಳು ನೈತಿಕ ಬೆಂಬಲ ನೀಡಿವೆ.

ಲಾರಿ, ಮ್ಯಾಕ್ಸಿಕ್ಯಾಬ್ ಸಂಘಟನೆಗಳು ನಾಳಿನ ಪರಿಸ್ಥಿತಿಯನ್ನು ಆಧರಿಸಿ ಲಾರಿಗಳನ್ನು ರಸ್ತೆಗಿಳಿಸಲು ನಿರ್ಧರಿಸಿವೆ. ರಸ್ತೆ ಸಾರಿಗೆ ಸಂಸ್ಥೆ ಬಿಎಂಟಿಸಿ ಚಾಲಕರು ಬಂದ್‍ನಲ್ಲಿ ಪಾಲ್ಗೊಳ್ಳುತ್ತಿಲ್ಲ. ರೈತರು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಪ್ರಗತಿಪರರು, ಸಾಹಿತಿಗಳು, ಕೃಷಿ ಕಾಯ್ದೆಗಳನ್ನು ವಿರೋಸಿ ವಿವಿಧೆಡೆ ಪ್ರತಿಭಟನೆ ರಸ್ತೆ ತಡೆ ನಡೆಸುತ್ತಿರುವುದರಿಂದ ಹಲವೆಡೆ ಟ್ರಾಫಿಕ್‍ಜಾಮ್ ಆಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರಿನಲ್ಲಿ ಬಳ್ಳಾರಿ ರಸ್ತೆ, ತುಮಕೂರು, ಮೈಸೂರು ರಸ್ತೆ, ಸುಮನಹಳ್ಳಿ ಜಂಕ್ಷನ್, ಹೊಸೂರು ರಸ್ತೆ ಸೇರಿದಂತೆ ಒಂಭತ್ತು ಕಡೆ ರಸ್ತೆ ತಡೆ ನಡೆಸಲು ರೈತ ಸಂಘಟನೆಯವರು ನಿರ್ಧರಿಸಿದ್ದಾರೆ. ಕೆಪಿಸಿಸಿ ಕಿಸಾನ್ ಘಟಕ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಕೆ.ಆರ್.ಪುರ, ಹೊಸೂರು, ಹೆಬ್ಬಾಳ ಹಲವೆಡೆ ರಸ್ತೆ ತಡೆ ನಡೆಸಲು ನಿರ್ಧರಿಸಿದೆ.

ಹೋಟೆಲ್ ಮಾಲೀಕರು, ಮಾಲ್‍ಗಳು, ವರ್ತಕರು, ಶಾಲಾ-ಕಾಲೇಜುಗಳವರು, ಬಂದ್‍ಗೆ ಸಾಥ್ ನೀಡಿಲ್ಲ. ಕೊರನಾ ಸಂಕಷ್ಟದಿಂದ ಈಗಷ್ಟೇ ಹೊರಬಂದಿದ್ದೇವೆ. ಮತ್ತೆ ಬಂದ್ ಮಾಡುವುದರಿಂದ ಸಾಕಷ್ಟು ಹಾನಿಯಾಗಲಿದೆ. ರೈತರಿಗೆ ಯಾವತ್ತು ನಮ್ಮ ಬೆಂಬಲವಿದೆ.ನೈತಿಕವಾಗಿ ಅವರನ್ನು ಬೆಂಬಲ ನೀಡಿ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.

ಖಾಸಗಿ ಬಸ್ ಮಾಲೀಕರು ಕೂಡ ನಾಳಿನ ಬಂದ್‍ಗೆ ಬೆಂಬಲ ನೀಡಿಲ್ಲ. ಕಲ್ಬುರ್ಗಿ , ಬಳ್ಳಾರಿ, ರಾಯಚೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಹಾಸನ, ಚಾಮರಾಜನಗರ, ಮಂಡ್ಯ, ಮೈಸೂರು, ಶಿವಮೊಗ್ಗ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ರೈತ ಸಂಘಟನೆಯವರು ಸಭೆ ಸೇರಿ ನಾಳಿನ ಬಂದ್ ಯಶಸ್ವಿಗೆ ಮನವಿ ಮಾಡಿದ್ದಾರೆ.

ಬಸ್ ಸಂಚಾರದಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಯಾವುದೇ ಸರ್ಕಾರಿ ವಾಹನಗಳಿಗಾಗಲಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿದರೆ ಪ್ರತಿಭಟನಾ ಆಯೋಜಕರನ್ನೇ ಹೊಣೆ ಮಾಡುವ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಹೆದ್ದಾರಿ, ಪ್ರತಿಭಟನೆ ನಡೆಯುವ ಸ್ಥಳ ಸೇರಿದಂತೆ ವಿವಿಧೆಡೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Facebook Comments