ಕರ್ನಾಟಕ ಬಂದ್ ಬೆನ್ನಲ್ಲೇ, ಡಿ.8ರಂದು ಭಾರತ್ ಬಂದ್‍..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.6- ಕೃಷಿ ಕಾಯ್ದೆಗಳನ್ನು ವಿರೋಧಿಸಿ ಡಿ.8ರಂದು ರೈತ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್‍ಗೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಡಿ.8ರಂದು ಭಾರತ್ ಬಂದ್‍ಗೆ ರೈತ ಸಂಘಟನೆಗಳು ಕರೆ ಕೊಟ್ಟಿವೆ.

ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುವ ಮೂಲಕ ಕರ್ನಾಟಕ ಬಂದ್ ಮಾಡಿ ಕೃಷಿಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಅಂದು ರಾಜ್ಯ ರೈತ ಸಂಘಟನೆಗಳ ಕಾರ್ಯಕರ್ತರು, ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ರಸ್ತೆಗಳನ್ನು ತಡೆದು ಪ್ರತಿಭಟನೆ ನಡಸಲಿದ್ದೇವೆ. ನಮ್ಮ ಪ್ರತಿಭಟನೆ ಹಿಂಸಾತ್ಮಕವಾಗಿರುವುದಿಲ್ಲ. ಶಾಂತಿಯುತವಾಗಿರುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಂದ್ ತಡೆಯುವಂತಹ ಪ್ರಯತ್ನ ಮಾಡಬಾರದು ಎಂದು ತಿಳಿಸಿದರು.

ಕೃಷಿ ಕ್ಷೇತ್ರಕ್ಕೆ ಮಾರಕವಾಗಿರುವ ಎಪಿಎಂಸಿ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇವುಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ದೆಹಲಿಯ ಹೊರ ವಲಯದಲ್ಲಿ ಲಕ್ಷಾಂತರ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಭಾರತ್‍ಬಂದ್‍ಗೆ ಕರೆ ಕೊಡಲಾಗಿದ್ದು, ದೇಶಾದ್ಯಂತ ಇರುವ ಎಲ್ಲಾ ರೈತ ಸಮುದಾಯ, ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆ.

ರಾಜ್ಯದಲ್ಲಿ ನಮ್ಮ ರೈತ ಸಂಘಟನೆ ಕೂಡ ಬಂದ್ ನಡೆಸುತ್ತಿದ್ದು, ರಾಜ್ಯದಲ್ಲಿ ಇರುವ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ರಾಜಕೀಯೇತರವಾಗಿ ಬಂದ್‍ಗೆ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದರು.

ಡಿ.8ರಂದು ನಾವು ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳನ್ನು ಕೇಂದ್ರೀಕರಿಸಿ ಭಾರತ್ ಬಂದ್‍ನಲ್ಲಿ ಪಾಲ್ಗೊಳ್ಳುತ್ತೇವೆ. ಡಿ.9ರಂದು ಬಾರ್‍ಕೋಲ್ ಚಳವಳಿ ನಡೆಸಿ ಭಾರೀ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಬೆಂಗಳೂರಿನಲ್ಲಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.

# ಭಾರತ್ ಬಂದ್‍ಗೆ ವಿವಿಧ ಸಂಘಟನೆಗಳ ಬೆಂಬಲ :
ಕೆಚ್ಚೆದೆಯ ಹೋರಾಟದ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿರುವ ರೈತ ಸಮುದಾಯವನ್ನು ನಾವು ಹೃತ್ಪೂರ್ವಕವಾಗಿ ಗೌರವಿಸುತ್ತೇವೆ ಹಾಗೂ ಡಿ.8 ರಂದು ಭಾರತ್ ಬಂದ್ ನಡೆಸಬೇಕು ಎಂಬ ಅವರ ನಿರ್ಧಾರವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ.

ಇಡೀ ದೇಶದ ಜನರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಹಾಗೂ ಮಹಾಮಾರಿ ತಂದೊಡ್ಡಿದ ದುಃಖ ದುಮ್ಮಾನಗಳು ಅವರನ್ನು ಕಾಡುತ್ತಿರುವ ಹೊತ್ತಿನಲ್ಲಿ, ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದನ್ನು ಗಮನಿಸಿದರೆ, ಈ ಸರ್ಕಾರ ನಿಜವಾಗಿಯೂ ಯಾರ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಎಐಎಸ್‍ಎಫ್, ಎಸ್‍ಎಫ್‍ಐ, ಎಐಡಿಎಸ್‍ಒ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ನ್ಯಾಯಯುತ ಬೇಡಿಕೆಗಳನ್ನಿಟ್ಟು ಕೊಂಡು ಬೀದಿಗಿಳಿದಿರುವ ರೈತರ ವಿಷಯದಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಕೇಂದ್ರ ಸರ್ಕಾರದ ಉದ್ದೇಶವನ್ನು ಇನ್ನಷ ಸ್ಪಷಪಡಿಸಿದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣದ ಪೆಡಂಭೂತ ಎಲ್ಲಾ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಹುರಿದು ಮುಕ್ಕಿದ ಮೇಲೆ, ಈಗ ಕೃಷಿ ಕ್ಷೇತ್ರಕ್ಕೂ ದಾಂಗುಡಿ ಇಟ್ಟಿದೆ ಎಂದು ತೀವ್ರವಾಗಿ ಖಂಡಿಸಿದೆ.

ಈಗಿನ ಮೂರು ಕರಾಳ ರೈತ ವಿರೋಧಿ ನೀತಿಗಳೂ ಸಹ ಕಾಪೆರ್ರೇಟ್ ಮನೆತನಗಳನ್ನು ಉದ್ಧಾರ ಮಾಡುತ್ತದೆಯೇ ಹೊರತು, ಜನಸಾಮಾನ್ಯರಿಗೆ ಯಾವ ಲಾಭವೂ ಆಗುವುದಿಲ್ಲ. ಇದನ್ನು ಮನದಟ್ಟು ಮಾಡಿಕೊಂಡು, ಹೋರಾಟಕ್ಕೆ ರೈತರು ಧುಮುಕಿದ್ದಾರೆ.  ಮೇಲ್ಕಂಡ ಎಲ್ಲಾ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ಇಡೀ ವಿದ್ಯಾರ್ಥಿ ಸಮೂಹ, ರೈತರ ಈ ಅವಿಸ್ಮರಣೀಯ ಹೋರಾಟಕ್ಕೆ ಬೆಂಬಲ ಸೂಚಿಸುತ್ತವೆ ಹಾಗೂ ಈ ಕರಾಳ ಕಾನೂನುಗಳನ್ನು ಶೀಘ್ರವೇ ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತವೆ.

ರೈತರ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಜನವಿರೋಧಿ ಮತ್ತು ಕಾಪೆರ್Çರೇಟ್ ಪರ ನೀತಿಗಳನ್ನು ಹಿಮ್ಮೆಟ್ಟಿಸಲು ಪ್ರಬಲ ಹೋರಾಟ ಕಟ್ಟಬೇಕೆಂದು ನಾವು ದೇಶದ ಜನರಲ್ಲಿ ಮನವಿ ಮಾಡುತ್ತೇವೆ.

Facebook Comments