ಭರತ್ ಬಂದ್ : ಎಲ್ಲೆಲ್ಲಿ ಏನೇನಾಯ್ತು..? ಬಂದ್’ಗೆ ಪ್ರತಿಕ್ರಿಯೆ ಹೇಗಿದೆ..?

ಈ ಸುದ್ದಿಯನ್ನು ಶೇರ್ ಮಾಡಿ

Bharat-Bandh-Live

ಬೆಂಗಳೂರು,ಜ.8- ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಸ್ತೆ ಸುರಕ್ಷತಾ ಕಾಯ್ದೆ ಹಿಂಪಡೆಯುವುದು, ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಎಡಪಕ್ಷಗಳ ಸಂಘಟನೆಯ ನೇತೃತ್ವದಲ್ಲಿ ಇಂದು ಕರೆ ನೀಡಲಾಗಿದ್ದ ಭಾರತ್ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜಧಾನಿ ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.ಕೆಲವು ಕಡೆ ಬಸ್ ಸಂಚಾರ ಎಂದಿನಂತೆ ಸಹಜ ಸ್ಥಿತಿಯಲ್ಲಿತ್ತು. ಆದರೆ ಕೆಲವು ಕಡೆ ಮುಂಜಾಗೃತಾ ಕ್ರಮವಾಗಿ ಬೆಳಗ್ಗೆ 6 ಗಂಟೆಯಿಂದಲೇ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಖಾಸಗಿ ಮತ್ತು ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಹುತೇಕ ಕಡೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೆ , ಕೆಲವು ಕಡೆ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಗ್ರಾಹಕರು ಪರದಾಡುವ ಪರಿಸ್ಥಿತಿ ಅಲ್ಲಲ್ಲಿ ಕಂಡು ಬಂದಿತು.

ಕೆಲವು ಕಡೆ ಕಿಡಿಗೇಡಿಗಳು ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಇನ್ನು ಕೆಲವು ಕಡೆ ರಸ್ತೆ ತಡೆದು ಟೈರ್‍ಗೆ ಬೆಂಕಿ ಹಚ್ಚಿ ಬಂದ್ ಮಾಡಲಾಗಿದ್ದರೆ, ಅಲ್ಲಲ್ಲಿ ಬಲವಂತವಾಗಿ ಬಂದ್ ಮಾಡಿದ್ದರೆ, ಉಳಿದೆಡೆ ಪ್ರತಿಭಟನಾ ನಿರತರು ಅಂಗಡಿ, ಹೊಟೇಲ್‍ಗಳ ಬಾಗಿಲು ಹಾಕಿಸಿರುವ ಬಗ್ಗೆ ವರದಿಯಾಗಿದೆ.

# ಬಸ್‍ಗೆ ಕಲ್ಲು:
ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಹಾವೇರಿ, ಹುಬ್ಬಳ್ಳಿ ಸೇರಿದಂತೆ ಮತ್ತಿತರ ಕಡೆ ಕೆಲವು ಕಿಡಿಗೇಡಿಗಳು ಬಸ್‍ಗಳ ಮೇಲೆ ಕಲ್ಲು ಎಸೆದಿದ್ದಾರೆ. ಪರಿಣಾಮ ಹಲವು ಬಸ್‍ಗಳು ಜಖಂಗೊಂಡಿವೆ. ತುಮಕೂರಿನಲ್ಲಿ ಬಸ್ ತಡೆದು ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದರು.

ಚಿಕ್ಕಮಗಳೂರಿನಲ್ಲೂ ಕೂಡ ಬೆಳಗ್ಗಿನಿಂದಲೇ ನಗರದ ಬಸ್ ನಿಲ್ಧಾಣದಲ್ಲಿ ಪ್ರಯಾಣಿಕರಿಲ್ಲದೇ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು. ಬಂದ್‍ಗೆ ಎಐಟಿಯುಸಿ, ಐಎನ್‍ಟಿಯುಸಿ, ಕಳಸಾ-ಬಂಡೂರಿ ಹೋರಾಟ ಸಮಿತಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘದವರು ಬಂದ್‍ಗೆ ಬೆಂಬಲ ಸೂಚಿಸಿದ್ದರಿಂದ ಬೆಳಗ್ಗಿನಿಂದಲೇ ವಾಣಿಜ್ಯ ವಹಿವಾಟುಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು.

ಆಸ್ಪತ್ರೆಗಳು, ಮೆಡಿಕಲ್ ಶಾಪ್, ತರಕಾರಿ, ಹಾಲಿನ ವಾಹನ, ಆಂಬ್ಯುಲೆನ್ಸ್ ಗಳಿಗೆ ಮಾತ್ರ ವಿನಾಯ್ತಿ ಪಡೆದಿದ್ದವು. ಹಾವೇರಿ, ಗದಗ, ಬೆಳಗಾವಿ ಸೇರಿದಂತೆ ಮುಂಬೈ ಕರ್ನಾಟಕ ಭಾಗದಲ್ಲಿ ಬಂದ್‍ಗೆ ಪರ ಮತ್ತು ವಿರೋಧ ವ್ಯಕ್ತವಾಗಿದೆ.  ಕೆಲವು ಭಾಗದಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು. ಹಾವೇರಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಶಾಲಾ ಕಾಲೇಜುಗಳು, ಹೊಟೇಲ್‍ಗಳು, ವಾಣಿಜ್ಯ ವಹಿವಾಟು ಎಂದಿನಂತೆ ಸುಗಮವಾಗಿ ನಡೆಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ದಾವಣಗೆರೆ, ಶಿವಮೊಗ್ಗದಲ್ಲೂ ಬಂದ್ ಬೆಂಬಲಿಸಿ ಅನೇಕ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದವು. ಹಾಸನ ಜಿಲ್ಲೆಯಲ್ಲಿ ಕಾರ್ಮಿಕರ ಒಕ್ಕೂಟ ಕರೆ ನೀಡಿದ್ದ ಭಾರತ್ ಬಂದ್ ನಿರೀಕ್ಷೆಗೂ ಮೀರಿದ ಬೆಂಬಲ ಕಂಡು ಬಂದಿತು.

ಮೊದಲ ಒಂದು ಗಂಟೆ ಅವಧಿಯಲ್ಲಿ ಬಸ್‍ಗಳು ನಗರದಿಂದ ಬೇರೆ ಬೇರೆ ಸ್ಥಳಗಳಿಗೆ ಹೊರಟವು.ಆದರೆ ನಂತರ ಪ್ರತಿಭಟನೆ ಕಾವು ಹೆಚ್ಚಾಗಿದ್ದರಿಂದ ಸಂಚಾರ ಸ್ಥಗಿತಗೊಳಿಸಿದವು. ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರದಲ್ಲೂ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಯಾದಗಿರಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರೂ ಇದನ್ನು ಅರಿಯದ ವಿದ್ಯಾರ್ಥಿಗಳು ಬೆಳಗ್ಗಿನಿಂದಲೇ ಶಾಲಾ ಕಾಲೇಜುಗಳಿಗೆ ಬಂದಿದ್ದರು. ಕಾರವಾರದಲ್ಲಿ ಬಲವಂತವಾಗಿ ಸರ್ಕಾರಿ ಬಸ್‍ಗಳನ್ನು ತಡೆಯಲಾಯಿತು. ಇದರಿಂದ ಕೆಎಸ್‍ಆರ್‍ಟಿಸಿ ನೌಕರರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಗಣಿ ಜಿಲ್ಲೆ ಬಳ್ಳಾರಿ, ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಗಡಿ ಜಿಲ್ಲೆ ಚಾಮರಾಜನಗರ ಸೇರಿದಂತೆ ಮತ್ತಿತರ ಕಡೆಯೂ ಬಂದ್‍ಗೆ ಉತ್ತಮ ಬೆಂಬಲ ವ್ಯಕ್ತವಾಯಿತು.

# ಶಾಲಾ ಕಾಲೇಜುಗಳಿಗೆ ರಜೆ:
ಭಾರತ್ ಬಂದ್ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಹಾಸನ, ಮಡಿಕೇರಿ, ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿದರೆ ಉಳಿದೆಡೆ ರಜೆ ನೀಡಲಾಗಿತ್ತು.

# ಪರೀಕ್ಷೆಗಳು ಮುಂದೂಡಿಕೆ:
ಎರಡು ದಿನ ಭಾರತ್ ಬಂದ್ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಕೆಲವು ವಿವಿಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬೆಂಗಳೂರು ವಿವಿಯ ಕಾನೂನು ದೈಹಿಕ ಪರೀಕ್ಷೆ, ರಾಣಿ ಚನ್ನಮ್ಮ ವಿವಿಯ ಎಲ್ಲಾ ಪರೀಕ್ಷೆಗಳು, ಹಂಪಿ ಕನ್ನಡ ವಿವಿ ಪರೀಕ್ಷೆ, ಕರ್ನಾಟಕ ವಿವಿಯ ಎಂಎ, ಎಂಕಾಂ, ಎಂಎಸ್ಸಿ ಸ್ನಾತಕೋತ್ತರ ಪರೀಕ್ಷೆಗಳು, ಕುವೆಂಪು ವಿವಿಯ ಬಿಎಡ್, ತುಮಕೂರು ವಿವಿಯ ಎಂಬಿಎ, ಎಂಕಾಂ, ಎಂಎ ಪರೀಕ್ಷೆ, ದಾವಣಗೆರೆ ಮತ್ತು ಗಂಗೂಬಾಯಿ ಹಾನಗಲ್ ವಿವಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.

Facebook Comments

Sri Raghav

Admin