ನಾಳೆ ತೆರೆಗಪ್ಪಳಿಸುತ್ತಿದೆ ಬಹು ನಿರೀಕ್ಷೆಯ ‘ಭರಾಟೆ’ ಸಿನಿಮಾ

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷೆಯ ಅದ್ಧೂರಿ ತಾರಾಗಣದ ಚಿತ್ರ ಭರಾಟೆ ಈ ವಾರ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತನ್ನ ಆರ್ಭಟ ಪ್ರದರ್ಶಿಸಲು ಸಿದ್ಧವಾಗಿದೆ. ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ಭರಾಟೆ ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

ಭರ್ಜರಿ, ಬಹದ್ದೂರ್ ಖ್ಯಾತಿಯ ಚೇತನ್‍ಕುಮಾರ್ ನಿರ್ದೇಶನದ 3ನೆ ಸಿನಿಮಾ ಇದಾಗಿದ್ದು, ಹಲವಾರು ವಿಶೇಷತೆಗಳ ಮೂಲಕ ಸದಾ ಸುದ್ದಿಯಲ್ಲಿದೆ. ಕಿಸ್ ಖ್ಯಾತಿಯ ನಟಿ ಶ್ರೀಲೀಲಾ ಈ ಚಿತ್ರದ ನಾಯಕಿ. ವಿಶೇಷವೆಂದರೆ ತ್ರಿವಳಿ ಸಹೋದರರಾದ ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಈ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ.

ಮೊನ್ನೆ ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ನಡೆಯಿತು. ನಾಯಕ ಶ್ರೀಮುರುಳಿ, ನಾಯಕಿ ಶ್ರೀಲೀಲಾ, ನಟಿ ತಾರಾ, ಸಾಯಿಕುಮಾರ್, ಅಯ್ಯಪ್ಪ ಶರ್ಮ, ನಿರ್ದೇಶಕ ಚೇತನ್, ನಿರ್ಮಾಪಕ ಸುಪ್ರೀತ್ ಹಾಗೂ ಚಿತ್ರದ ಬೆನ್ನೆಲುಬಾಗಿ ನಿಂತಿರುವ ಮತ್ತೊಬ್ಬ ನಿರ್ದೇಶಕ ಮಹೇಶ್ ಕೂಡ ಹಾಜರಿದ್ದು ಚಿತ್ರದ ಕುರಿತಂತೆ ಮಾತನಾಡಿದರು.

ನಿರ್ದೇಶಕ ಚೇತನ್ ಮಾತನಾಡಿ, ಭರ್ಜರಿ ಚಿತ್ರದ ನಂತರ ಮುರುಳಿ ಅವರೇ ನನ್ನನ್ನು ಈ ಸಿನಿಮಾ ಮಾಡಲು ಧೈರ್ಯ ತುಂಬಿದರು. ಒಂದೇ ಸಿನಿಮಾದಲ್ಲಿ ಇಷ್ಟೊಂದು ಜನ ಕಲಾವಿದರನ್ನು ಸೇರಿಸಲು ಪ್ರತಿಯೊಬ್ಬರೂ ನೀಡಿದ ಸಹಕಾರವೇ ಕಾರಣ. ಸೋಷಿಯಲ್ ರೀಸನ್ ಇರುವಂಥ ಸಿನಿಮಾ. ಹಾಡುಗಳು, ಫೈಟ್ಸ್, ಎಮೋಷನ್ಸ್ ಎಲ್ಲಾ ಥರದ ಭರಾಟೆ ಈ ಚಿತ್ರದಲ್ಲಿದೆ. ಇಡೀ ಚಿತ್ರವನ್ನು 97 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಆಯುರ್ವೇದದ ಎಳೆ ಕೂಡ ಈ ಚಿತ್ರದಲ್ಲಿದೆ ಎಂದು ಹೇಳಿದರು.

ನಾಯಕ ನಟ ಶ್ರೀಮುರುಳಿ ಮಾತನಾಡಿ, ಉಗ್ರಂ ಚಿತ್ರದ ನಂತರ ನಾನು ಅತಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ ಇದು. ಈಗ ಕನ್ನಡದಲ್ಲಿ ಒಂದಷ್ಟು ರೆಕಾರ್ಡ್ ಬ್ರೇಕಿಂಗ್ ಸಿನಿಮಾಗಳು ಬಂದಿವೆ. ಅದೇ ರೀತಿ ಭರಾಟೆ ಕೂಡ ಮತ್ತೊಂದು ಬ್ರೇಕಿಂಗ್ ಸಿನಿಮಾ ಆಗಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ನಟಿ ತಾರಾ ಮಾತನಾಡಿ, ನಿರ್ದೇಶಕ ಚೇತನ ಜೊತೆ ನನ್ನ 2ನೆ ಸಿನಿಮಾ ಇದು. ನಾಯಕ ಶ್ರೀಮುರುಳಿ ಎಲ್ಲದರಲ್ಲೂ ಪಾಸಿಟಿವ್ ಹುಡುಕುವಂಥ ಗುಣವುಳ್ಳವನು. ನಾಯಕನಾಗಿ ಇಡೀ ಟೀಮ್‍ನ್ನು ಕ್ಯಾರಿ ಮಾಡುತ್ತಾನೆ. ನಾಯಕಿ ಶ್ರೀಲೀಲಾ ಈಗಷ್ಟೇ ಅರಳಿದ ಕಮಲದಂತೆ ಕಾಣಿಸ್ತಾಳೆ. ಆಕೆ ಒಂದು ಸೀನ್‍ನಲ್ಲಿ ಗ್ಲಿಸರಿನ್ ಇಲ್ಲದೆಯೇ ಅತ್ತುಬಿಟ್ಟಳು ಎಂದು ಹೇಳಿದರು.

ನಾಯಕಿ ಶ್ರೀಲೀಲಾ ಮಾತನಾಡಿ, ಇದು ನನ್ನ ಎರಡನೆ ಸಿನಿಮಾ. ಕಿಸ್ ಸಿನಿಮಾದಲ್ಲಿ ಈ ನಿರ್ದೇಶಕರು ನನ್ನನ್ನು ನೋಡಿ ಆಯ್ಕೆ ಮಾಡಿಕೊಂಡರು. ಈ ಚಿತ್ರವು ನನಗೆ ಬಹಳ ವಿಶೇಷ. ನಿಮ್ಮೆಲ್ಲರ ಪ್ರೀತಿ-ಸಹಕಾರ ನೀಡಿ ಚಿತ್ರವನ್ನು ಗೆಲ್ಲಿಸಿ ಎಂದು ಕೇಳಿಕೊಂಡರು. ನಟ ಸಾಯಿಕುಮಾರ್ ಮಾತನಾಡಿ, ಈ ಚಿತ್ರದಲ್ಲಿ ಬಹಳಷ್ಟು ವಿಶೇಷತೆಗಳಿವೆ. ನಾನು ನಾಯಕಿಯ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಅದ್ಧೂರಿಯೊಂದಿಗೆ ಮನರಂಜನೆ ನೀಡಲಿದೆ ಎಂದು ಹೇಳಿದರು.

ನಟ ಅಯ್ಯಪ್ಪ ಮಾತನಾಡಿ, ತೆರೆ ಮೇಲೆ ಇಡೀ ಚಿತ್ರದ ಶ್ರಮ ಕಾಣುತ್ತದೆ. ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ. ಎಲ್ಲರಿಗೂ ಈ ಚಿತ್ರ ಇಷ್ಟವಾಗಲಿದೆ. ನಿಮ್ಮೆಲ್ಲರ ಪ್ರೀತಿ ಚಿತ್ರದ ಮೇಲಿರಲಿ ಎಂದರು.

ನಿರ್ಮಾಪಕ ಸುಪ್ರೀತ್, ಯುವ ನಿರ್ದೇಶಕ ಮಹೇಶ್ ಚುಟುಕ್ಕಾಗಿ ಮಾತನಾಡಿದರು. ಒಟ್ಟಾರೆ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿರುವ ಭರಾಟೆ ಅದ್ಧೂರಿ ಪ್ರಚಾರದ ಮೂಲಕ ಬೆಳ್ಳಿ ಪರದೆ ಮೇಲೆ ರಾರಾಜಿಸಲು ಸನ್ನದ್ಧವಾಗಿದೆ.

Facebook Comments