ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿವಾದಾತ್ಮಕ ಹೇಳಿಕೆ..! ಸಿಎಂ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.21-ನಾಳೆ ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬಂದರೆ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿರುವುದು ಭಾರೀ ವಿವಾದ ಸೃಷ್ಟಿಸಿದೆ.  ಕರ್ನಾಟಕ ಪೊಲೀಸ್ ಕಾಯ್ದೆ 21ರಡಿ ಮನೆಯಿಂದ ಆಚೆಬಂದರೆ ಬಲವಂತವಾಗಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿರುವುದಕ್ಕೆ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇದಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಪ್ರಧಾನಿ ನರೇಂದ್ರಮೋದಿ ಅವರು ಮೊನ್ನೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ವೇಳೆ ಜನರು ಸ್ವಯಂಪ್ರೇರಿತರಾಗಿ ಜನತಾ ಕಫ್ರ್ಯೂಗೆ ಒಳಗಾಗಬೇಕೆಂದು ಹೇಳಿದ್ದರೇ ವಿನಃ ಎಲ್ಲಿಯೂ ಕೂಡ ಬಲವಂತವಾಗಿ ಮನೆಯಲ್ಲೇ ಇರಬೇಕೆಂದು ಕಟ್ಟಾಜ್ಞೆ ವಿಧಿಸಿರಲಿಲ್ಲ.  ಸೋಂಕು ಹರಡದಂತೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ನಿರ್ಬಂಧ ಹಾಕಿಕೊಳ್ಳಬೇಕೆಂದು ಪ್ರಧಾನಿ ಅವರೇ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಹಾಗೂ ಸಂಪುಟ ಸಹೋದ್ಯೋಗಿಗಳು ಕಳೆದ ಮೂರು ದಿಗಳಿಂದ ಸ್ವಯಂಪ್ರೇರಿತರಾಗಿ ಜನತಾ ಕಫ್ರ್ಯೂ ಯಶಸ್ವಿಗೊಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದಕ್ಕಿದ್ದಂತೆ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರು ಹೊರಬಂದರೆ ಬಂಧಿಸಲಾಗುವುದು ಎಂಬ ಅರ್ಥದಲ್ಲಿ ಹೇಳಿಕೆ ನೀಡಿರುವುದು ವಿವಾದದ ಕಿಡಿ ಹೊತ್ತಿಸಿದೆ. ಭಾಸ್ಕರ್‍ರಾವ್ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಟ್ವಿಟರ್‍ನಲ್ಲಿ ಖಂಡಿಸಿದ್ದಾರೆ.

# ಕುಮಾರಸ್ವಾಮಿ ಟ್ವೀಟ್:
ಜನತಾ ಕಫ್ರ್ಯೂ ವೇಳೆ ಜನತೆ ಹೊರಗೆ ಬಂದರೆ ಕೇಸ್ ಜಡಿದು ಒಳಗೆ ಹಾಕುತ್ತೇನೆ ಎಂಬ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅವರ ಹೇಳಿಕೆ ಉದ್ದಟತನದ್ದು. ಇದನ್ನು ನಾನು ಖಂಡಿಸುತ್ತೇನೆ.  ಜನತೆ ಆರೋಗ್ಯ ವಿಷಯದಲ್ಲಿ ಚೆಲ್ಲಾಟವಾಡಲಾರರು ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಪೊಲೀಸ್ ಕಮೀಷನರ್ ಅವರಿಗೆ ಜನರನ್ನು ಒಳಗೆ ಹಾಕುವ ಅಧಿಕಾರ ಕೊಟ್ಟವರು ಯಾರು?

ಪ್ರಧಾನಿ ಕೂಡ ರಾಷ್ಟ್ರದ ಜನತೆಯಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆಯೇ ಹೊರತು ಜನತೆ ಹೊರಗೆ ಬಂದರೆ ಬಂಧಿಸಿ ಎಂದು ಯಾರಿಗೂ ಸೂಚನೆ ಕೊಟ್ಟಿಲ್ಲ. ಸ್ವಯಂಪ್ರೇರಿತರಾಗಿ ಜನತೆ ಹೊರಗೆ ಬಂದರೆ ಹುಷಾರ್ ಎಂದು ಸಂಯಮ ಮೀರಿ ಮಾತನಾಡಲು ಹೇಳುವ ಅಧಿಕಾರ ಪೊಲೀಸ್ ಆಯುಕ್ತರಿಗೆ ಇದೆಯೇ? ಯಾರನ್ನು ಓಲೈಸಲು ಇಂತಹ ಅತಿರೇಕ ಹಾಗೂ ಅವಿವೇಕದ ಹೇಳಿಕೆಗಳನ್ನು ನೀಡಿದ್ದೀರಿ?

ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯಲು ಪ್ರಧಾನಿ ಕರೆ ನೀಡಿರುವ ಜನತಾ ಕಫ್ರ್ಯೂಗೆ ನನ್ನ ಸಹಮತವಿದೆ. ಜನತೆಯು ಸಂಪೂರ್ಣ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ಇದೆ.

Facebook Comments