“ರೈಲು ನಿಲ್ದಾಣದಿಂದ ಪರಾರಿಯಾದವರ ವಿರುದ್ಧ ಕ್ರಿಮಿನಲ್ ಕೇಸ್”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.2- ಮುಂಬೈನಿಂದ ರೈಲಿನಲ್ಲಿ ಬಂದು ತಪಾಸಣೆಗೊಳಗಾಗದೆ ಪರಾರಿಯಾಗಿರುವವರು ಕೂಡಲೇ ಬಂದು ಆರೋಗ್ಯಾಧಿಕಾರಿಗಳ ಎದುರು ಹಾಜರಾಗಿ ತಪಾಸಣೆ ಗೊಳಗಾಗಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ ರಾವ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಸಾಂಕ್ರಾಮಿಕ ರೋಗವಾಗಿದೆ. ಈ ರೋಗ ಹರಡದಂತೆ ಸೋಂಕಿತ ಪ್ರದೇಶದಿಂದ ಬಂದವರನ್ನು ಕ್ವಾರಂಟೈನ್ ಮಾಡಲು ಸರ್ಕಾರದ ಆದೇಶವಿದೆ. ಈ ಆದೇಶವನ್ನು ಉಲ್ಲಂಘಿಸಿ ಇಂದು ಮುಂಬೈನಿಂದ ಬಂದ ಹಲವರು ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪರಾರಿಯಾಗಿದ್ದಾರೆ.

ಅವರು ಕೂಡಲೇ ಬಂದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಎದುರು ಹಾಜರಾಗಿ ತಪಾಸಣೆ ಮಾಡಿಸಿಕೊಂಡು ಕ್ವಾರಂಟೈನ್‍ಗೆ ತೆರಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಹೇಳಿದರು.

ಅವರು ಪ್ರಯಾಣಿಸಿದ ಸಂಪೂರ್ಣ ವಿವರಗಳು ಲಭ್ಯವಿವೆ. ಈಗಾಗಲೇ ನಮ್ಮ ಸಿಬ್ಬಂದಿ ಅವರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರಾಗಿಯೇ ಬಂದು ತಪಾಸಣೆ ಮಾಡಿಸಿಕೊಂಡು ಕ್ವಾರಂಟೈನ್‍ಗೆ ತೆರಳಿದರೆ ಯಾವುದೇ ಅಭ್ಯಂತರವಿಲ್ಲ. ಆದೇಶ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

#ರೈಲು ನಿಲ್ದಾಣದಿಂದ ಐವರು ಪರಾರಿ..
ಬೆಂಗಳೂರು, ಜೂ.2- ಮುಂಬೈನಿಂದ ಬೆಂಗಳೂರಿಗೆ ರೈಲಿನಿಂದ ಬಂದಿಳಿದ ಐವರು ಪ್ರಯಾಣಿಕರು ಕ್ವಾರಂಟೈನ್‍ಗೆ ತೆರಳದೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಉದ್ಯಾನ್ ಎಕ್ಸ್‍ಪ್ರೆಸ್‍ನಲ್ಲಿ 1734 ಜನ ಆಗಮಿಸಿದ ಸಂದರ್ಭದಲ್ಲಿ ಎಲ್ಲರೂ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ವಾರಂಟೈನ್‍ಗೆ ತೆರಳಬೇಕಿತ್ತು. ಆದರೆ, ಇವರ ಕಣ್ತಪ್ಪಿಸಿ ಐವರು ಆಟೋದಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇವರನ್ನು ಪತ್ತೆಹಚ್ಚಿ ಕ್ವಾರಂಟೈನ್ ಸೆಂಟರ್‍ಗೆ ಕಳುಹಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಮುಂಬೈನಿಂದ ಉದ್ಯಾನ್ ಎಕ್ಸ್‍ಪ್ರೆಸ್ ನಗರ ರೈಲ್ವೆ ನಿಲ್ದಾಣಕ್ಕೆ ಬಂದಾಗ ಎಲ್ಲರ ಮೇಲೆ ನಿಗಾ ವಹಿಸಲಾಗಿತ್ತು. ಈ ಐವರು ಸಾಮಾನ್ಯರಂತೆ ರೈಲ್ವೆ ನಿಲ್ದಾಣದಿಂದ ಹೊರತೆರಳಿ ಆಟೋದಲ್ಲಿ ಮನೆಗೆ ಹೋಗಿದ್ದಾರೆಂದು ತಿಳಿದುಬಂದಿದೆ.

ಇವರು ರೈಲಿನಲ್ಲಿ ಪ್ರಯಾಣಿಸಿದ್ದ ವಿವರಗಳು ಲಭ್ಯವಿದ್ದು, ಈ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಯಾಣಿಕರೆಲ್ಲ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಾಗಿದ್ದು, ಇವರನ್ನು ಪತ್ತೆಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ. ಅಕಸ್ಮಾತ್ ಇವರಿಗೇನಾದರೂ ಕೊರೊನಾ ಸೋಂಕಿದ್ದರೆ ರೋಗ ಹರಡುವ ಆತಂಕ ಹೆಚ್ಚಾಗಿದೆ.

Facebook Comments