ಗೌರಿ-ಗಣೇಶ ಹಬ್ಬ : ಬೆಂಗಳೂರಿನಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.29- ಈ ಬಾರಿಯ ಗೌರಿ-ಗಣೇಶ ಹಬ್ಬದ ಆಚರಣೆಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಎಲ್ಲಾ ರೀತಿಯ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಸುಳ್ಳುವದಂತಿಗಳಿಗೆ ಕಿವಿಗೊಡಬಾರದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರತಿ ವರ್ಷ ಯಾವ ರೀತಿ ಗಣಪತಿ ಉತ್ಸವ ನಡೆಯುತ್ತಿತ್ತೋ ಅದೇ ರೀತಿ ಈ ಬಾರಿಯೂ ನಡೆಯಲಿದೆ. ಪೊಲೀಸರು ಯಾವುದೇ ರೀತಿಯ ಹೊಸ ನಿಯಮಗಳನ್ನು ರೂಪಿಸಿಲ್ಲ. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ಕೆಲವು ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದೇವೆ ಎಂದರು. ಶಾಂತ ರೀತಿಯಲ್ಲಿ ಉತ್ಸವಗಳು ನಡೆಯಲು ಎಲ್ಲಾ ರೀತಿಯ ಬಿಗಿ ಕ್ರಮಗಳನ್ನು ಕೈಗೊಂಡಿರುವುದಾಗಿ ಅವರು ತಿಳಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸಂಜೆ 4 ಗಂಟೆಗೆ ರವೀಂದ್ರ ಕಲಾಕ್ಷೇತ್ರ ಇಲ್ಲವೇ ಟೌನ್‍ಹಾಲ್‍ನಲ್ಲಿ ಶಾಂತಿಸಭೆಯನ್ನು ಕರೆಯಲಾಗಿದೆ. ಬೆಂಗಳೂರು ನಗರ ಪೊಲೀಸರು, ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂಎಸ್‍ಎಸ್‍ಬಿ ಸೇರಿದಂತೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸುಧಾರಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಶಾಂತಿಯುತವಾಗಿ ಗೌರಿ-ಗಣೇಶ ಹಬ್ಬ ಆಚರಣೆ ಮಾಡಲು ಒಮ್ಮತದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈಗಾಗಲೇ ಬಿಬಿಎಂಪಿ ಅಧಿಕಾರಿಗಳು, ಆಯುಕ್ತರು, ಬಿಡಬ್ಲ್ಯೂಎಸ್‍ಎಸ್‍ಬಿ, ಬಿಡಿಎ ಸೇರಿದಂತೆ ಮತ್ತಿತರ ಸಂಘ-ಸಂಸ್ಥೆಗಳ ಜತೆ ಔಪಚಾರಿಕವಾಗಿ ಸಭೆ ನಡೆಸಲಾಗಿದೆ. ಸೆ.2ರಿಂದ ಆರಂಭವಾಗಲಿರುವ ಗಣಪತಿ ಉತ್ಸವಕ್ಕೆ ಯಾವುದೇ ರೀತಿಯ ಅಡ್ಡಿಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ಕೆಲವು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಮಾತ್ರ ಗಣಪತಿ ಮೂರ್ತಿ ಕೂರಿಸಲು ಕೆಲವು ನಿಯಮಗಳನ್ನು ಪಾಲನೆ ಮಾಡುವಂತೆ ಮಂಡಳಿಯವರಿಗೆ ಸೂಚಿಸಿದ್ದೇವೆ. ಆದರೆ, ಎಲ್ಲಿಯೂ ಗಣಪತಿ ಮೂರ್ತಿ ಕೂರಿಸಲು ನಾವು ಅಡ್ಡಿಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಬಾರಿ ಗಣೇಶ ಉತ್ಸವ ಮತ್ತು ಮೊಹರಂ ಏಕಕಾಲದಲ್ಲಿ ಬಂದಿದ್ದು, ಎಲ್ಲರೂ ಶಾಂತಿಯುತವಾಗಿ ಉತ್ಸವವನ್ನು ಆಚರಣೆ ಮಾಡಬೇಕು.

ಅತಿಯಾದ ನಿಯಮಗಳನ್ನು ವಿಧಿಸಬಾರದು ಎಂದು ನಾನು ಈಗಾಗಲೇ ಸಂಬಂಧಪಟ್ಟವರಿಗೂ ಸೂಚನೆ ಕೊಟ್ಟಿದ್ದೇನೆ. ನಮಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರ ಜತೆಗೆ ಸಾರ್ವಜನಿಕರ ಹಿತ ಕಾಪಾಡುವುದು ಅಷ್ಟೇ ಮುಖ್ಯ ಎಂದರು.

ಕೆಲವರು ಆಧಾರ ರಹಿತವಾಗಿ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಾರೆ. ಇದಕ್ಕೆ ಯಾರೂ ಕಿವಿಗೊಡಬಾರದು. ಶಾಂತಿಯುತವಾಗಿ ಗಣೇಶ ಹಬ್ಬ ಆಚರಣೆ ಮಾಡಲು ಯಾವುದೇ ಅಡ್ಡಿ ಆತಂಕವಿಲ್ಲ. ಎಂದಿನಂತೆ ಈ ಬಾರಿಯೂ ಸುಗಮವಾಗಿ ಹಬ್ಬ ನಡೆಯಲಿದೆ ಎಂದು ಭಾಸ್ಕರ್ ರಾವ್ ವಿಶ್ವಾಸ ವ್ಯಕ್ತಪಡಿಸಿದರು.

ಸಂಘ-ಸಂಸ್ಥೆಗಳು, ಸಾರ್ವಜನಿಕರು, ಗಣಪತಿ ಮಂಡಳಿಯವರು ಶಾಂತಿಯುತವಾಗಿ ವರ್ತಿಸಬೇಕು. ಪೊಲೀಸರು ಏನೇ ಕ್ರಮ ಕೈಗೊಂಡರೂ ಅದು ಸಮಾಜದ ಹಿತರಕ್ಷಣೆಗೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಆಯುಕ್ತರು ಮನವಿ ಮಾಡಿದರು.

Facebook Comments