ಮಳೆ ಹಾನಿ ಪ್ರದೇಶಗಳಿಗೆ ಪೊಲೀಸ್ ಆಯುಕ್ತ ಭಾಸ್ಕರರಾವ್ ಭೇಟಿ ಪರಿಶೀಲನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.10-ನಗರದಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಕೆಲವು ಕಡೆ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಕೊಚ್ಚಿ ಹೋಗಿದ್ದು, ಮನೆಗಳಿಗೆ ನೀರು ನುಗ್ಗಿದ ಪ್ರದೇಶ ಗಳಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು ಮುಂಜಾನೆ 2.30ರ ಸಮಯದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಮುಖವಾಗಿ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಭವಾನಿನಗರ, ಅನ್ನಪೂರ್ಣೇಶ್ವರಿ ನಗರ, ದಾಸರಹಳ್ಳಿ, ಪೀಣ್ಯ 2ನೇ ಹಂತ ಹಾಗೂ ಚಿಕ್ಕಬಿದರಕಲ್ಲು, ಬಾಗಲಗುಂಟೆ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ಆಯುಕ್ತರು ಖುದ್ದು ಈ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು.

ಕೆಲವು ಕಡೆ ಭಾರೀ ಮಳೆಯಿಂದಾಗಿ ಮನೆ ಮುಂದೆ ನಿಲ್ಲಿಸಿದಂತಹ ವಾಹನಗಳು ಕೊಚ್ಚಿ ಹೋಗಿದ್ದು, ಅವುಗಳನ್ನು ಹುಡುಕಿ ವಾರಸುದಾರರಿಗೆ ಒಪ್ಪಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.  ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಪಂಪ್‍ಗಳಿಂದ ನೀರು ಹೊರಗೆ ಹಾಕುವ ಮೂಲಕ ಕುಟುಂಬಗಳಿಗೆ ನೆರವಾಗುವಂತೆ ಸೂಚಿಸಿದರು.

ಈ ಪ್ರದೇಶದ ಏಳಕ್ಕೂ ಹೆಚ್ಚು ಕಡೆ ಭಾರೀ ಮಳೆಯಿಂದಾಗಿ ರಸ್ತೆಯ ಮೋರಿಗಳು ತುಂಬಿ ಹರಿಯುತ್ತಿದ್ದುದನ್ನು ಆಯುಕ್ತರು ಗಮನಿಸಿದರು. ಈ ಸಂದರ್ಭದಲ್ಲಿ ಆಯುಕ್ತರೊಂದಿಗೆ ಉಪವಿಭಾಗದ ಡಿಸಿಪಿ ಶಶಿಕುಮಾರ್ ಮತ್ತು ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಜೊತೆಗಿದ್ದರು.

Facebook Comments