ಬೆಂಗಳೂರು ಪೊಲೀಸರ ಬೆನ್ನುಬಿದ್ದ ಮಹಾಮಾರಿ, 36 ಮಂದಿಗೆ ಕೊರೊನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.19- ಬೆಂಗಳೂರು ನಗರದಲ್ಲಿ ಕೆಲಸ ಮಾಡುವ ಸುಮಾರು 36 ಮಂದಿ ಪೊಲೀಸರಿಗೆ ಕೋವಿಡ್ ಸೋಂಕು ತಗುಲಿದ್ದು, ಒಬ್ಬರು ಮೃತಪಟ್ಟಿದ್ದಾರೆ. 6 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ 15 ದಿನಗಳಿಂದ 36 ಮಂದಿಗೆ ಸೋಂಕು ತಗುಲಿದೆ. ಹೀಗಾಗಿ ಹೆಚ್ಚಿನ ಮುತುವರ್ಜಿ ಮತ್ತು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ.

ಯಾವುದೇ ಆರೋಪಿಯನ್ನು ವಿಚಾರಣೆಗಾಗಿ ಕರೆತರುವಾಗ ಅವರಿಗೆ ಸ್ನಾನ ಮಾಡಿಸಿ ಬೇರೆ ಬಟ್ಟೆ ಹಾಕಿಸಿ, ಉಗುರು ಕತ್ತರಿಸಿ ಠಾಣೆಗೆ ಕರೆತರಬೇಕು ಮತ್ತು ಗಂಟಲು ದ್ರವ ಪರೀಕ್ಷೆ ಮಾಡಿಸಿ ಸೋಂಕು ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಹೀಗಾಗಿ ಇನ್ನು ಮುಂದೆ ಅತ್ಯಂತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

ಅಪರಾಧ ನಡೆಯದಂತೆ ನಿಯಂತ್ರಿಸಲು ಹೆಚ್ಚಿನ ಗಮನ ನೀಡಬೇಕು, ಪತ್ತೆ ಕಾರ್ಯ ವಿಳಂಬವಾದರೂ ಚಿಂತೆಯಿಲ್ಲ. ಸುರಕ್ಷತೆಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.ಪೊಲೀಸರು ಕೆಲಸ ಮಾಡದೇ ಮನೆಯಲ್ಲಿ ಕೂರಲು ಸಾಧ್ಯವಿಲ್ಲ. ರಣಭೂಮಿಗೆ ಇಳಿದಾಗಿದೆ. ಜನರ ಮಧ್ಯೆಯೇ ಇದ್ದು ಕೆಲಸ ಮಾಡಲೇಬೇಕು. ಈ ನಡುವೆಯೂ ಸುರಕ್ಷತೆಯತ್ತ ಹೆಚ್ಚಿನ ಗಮನ ನೀಡಬೇಕು.

ಸರ್ಕಾರ ಪೊಲೀಸರ ಬೆಂಗಾವಲಿದೆ. ಯಾವಾಗಲು ಅಗತ್ಯ ಸಾಮಾಗ್ರಿಗಳನ್ನು ಪೂರೈಕೆ ಮಾಡಿದ್ದೇವೆ. ಸೋಂಕು ತಗುಲಿದವರಿಗೆ ವಿಶೇಷ ವಾರ್ಡ್‍ನಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಕ್ವಾರಂಟೈನ್ ಅವಧಿಯಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದೇವೆ. ಸಿಬ್ಬಂದಿಗಳು, ಅಧಿಕಾರಿಗಳು ಧೈರ್ಯ ಕಳೆದುಕೊಳ್ಳಬಾರದು.

ಇತ್ತೀಚೆಗೆ ಮಾರತ್ತಹಳ್ಳಿ, ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆ ಠಾಣೆಗಳ ಸಿಬ್ಬಂದಿಗಳಲ್ಲಿ ಕೊರೊನಾ ಕಂಡುಬಂದಿದೆ. ಮುಖ್ಯಮಂತ್ರಿ ಕಚೇರಿಯ ಮಹಿಳಾ ಪೊಲೀಸ್ ಪೇದೆಯೊಬ್ಬರ ಪತಿಗೆ ಸೋಂಕು ಇರುವುದು ಖಚಿತವಾಗಿದೆ. ಹೀಗಾಗಿ ಆಕೆಯನ್ನು ಕ್ವಾರಂಟೈನ್‍ಗೆ ಸೂಚಿಸಲಾಗಿದೆ. ಕೃಷ್ಣಾವನ್ನು ಸಾನಿಟೈಸ್ ಮಾಡಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಎಎಸ್‍ಐ ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಕುಟುಂಬ ಸದಸ್ಯರು ಮುಂದೆ ಬರಲಿಲ್ಲ. ಕೊನೆಗೆ ಪೊಲೀಸ್ ಅಧಿಕಾರಿಗಳೇ 20 ಆಳದ ಗುಂಡಿ ತೆಗೆದು ಅಂತ್ಯಸಂಸ್ಕಾರ ಮಾಡಿದ್ದಾರೆ.

ಕೋವಿಡ್ ನಿಯಂತ್ರಣದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ 50 ಲಕ್ಷ ವಿಮಾ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಅದನ್ನು ಆಧರಿಸಿ ಎಲ್ಲ ಸಿಬ್ಬಂದಿಗಳಿಗೂ ವಿಮಾ ಸೌಲಭ್ಯ ದೊರಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಮೃತಪಟ್ಟಿರುವ ಎಎಸ್‍ಐ ಗೆ ವಿಮೆ ಸೌಲಭ್ಯ ದೊರಕಿಸಲು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

Facebook Comments