BIG NEWS : ಇಬ್ಬರು ಶಂಕಿತ ಗೌರಿ ಹಂತಕರು ವಶಕ್ಕೆ, ಹತ್ಯೆಗೆ ಬಳಸಿದ್ದು ವಿಜಯಪುರದ ಪಿಸ್ತೂಲ್

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-Shot-Dead

ಹುಬ್ಬಳ್ಳಿ, ಅ.1- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಗೌರಿ ಹತ್ಯೆಗೆ ಬಳಸಲಾದ ಪಿಸ್ತೂಲ್ ವಿಜಯಪುರದಿಂದ ರವಾನೆಯಾಗಿದೆ ಎಂಬ ಮಾಹಿತಿ ದೊರೆತಿದ್ದು, ಗುಮ್ಮಟ್ಟನಗರಿಗೆ ದೌಡಾಯಿಸಿರುವ ಎಸ್‍ಐಟಿ ತಂಡದ ವಿಶೇಷ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ವಿಜಯಪುರದಿಂದ ಪಿಸ್ತೂಲ್ ರವಾನೆಯಾಗಿದೆ ಎಂಬ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಹತ್ಯೆ ಹಿಂದೆ ಕಲಬುರ್ಗಿ ಹಂತಕರ ಕೈವಾಡವಿರಬಹುದೆಂಬ ಶಂಕೆ ತೀವ್ರಗೊಂಡಿದೆ. ವಿಜಯಪುರದಲ್ಲಿ ಬೀಡು ಬಿಟ್ಟಿರುವ ಎಸ್‍ಐಟಿಯ ಒಂದು ತಂಡ ಪಿಸ್ತೂಲು ರಾವಾನೆಯಾದ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕುತ್ತಿದೆ. ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ ಜೀನೇಂದ್ರ ಖನಗಾವಿ ನೇತೃತ್ವದ ತಂಡ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದೆ.
ತಮ್ಮ ಪತ್ರಿಕಾ ಕಚೇರಿಯಿಂದ ರಾಜರಾಜೇಶ್ವರಿನಗರದಲ್ಲಿರುವ ನಿವಾಸಕ್ಕೆ ತೆರಳುತ್ತಿದ್ದ ಗೌರಿಲಂಕೇಶ್ ಅವರನ್ನು ಕಳೆದ ಸೆ.5ರಂದು ಕಪ್ಪುಜಾಕೆಟ್ ಹಾಗೂ ಹೆಲ್ಮೆಟ್ ಧರಿಸಿದ್ದ ಇಬ್ಬರು ಹಂತಕರು ಗೌರಿ ಅವರ ನಿವಾಸದ ಸಮೀಪವೇ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದರು. ಎಸ್‍ಐಟಿಯ ನಾಲ್ಕು ವಿಶೇಷ ಪೊಲೀಸ್ ತಂಡಗಳು ಹೈದರಾಬಾದ್, ಮಹಾರಾಷ್ಟ್ರ, ಒಡಿಶಾ ಮತ್ತಿತರ ರಾಜ್ಯಗಳಿಗೆ ತೆರಳಿ ಹಂತಕರಿಗಾಗಿ ಶೋಧ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಗೌರಿಲಂಕೇಶ್ ಹತ್ಯೆಯ ಹಿಂದೆ ನಕ್ಸಲರು ಇಲ್ಲವೇ ಕೋಮುವಾದಿಗಳ ಕೈವಾಡ ಇರಬಹುದು ಎಂಬ ನಿಟ್ಟಿನಲ್ಲಿ ತನಿಖೆ ನಡೆಸಿದ್ದರೂ ಈ ಕುರಿತಂತೆ ಯಾವುದೇ ಸಮರ್ಪಕ ಸಾಕ್ಷ್ಯ ಲಭ್ಯವಾಗದಿರುವ ಹಿನ್ನೆಲೆಯಲ್ಲಿ ಗೌರಿ ಹತ್ಯಾ ಪ್ರಕರಣವು ಎಂ.ಎಂ.ಕಲಬುರ್ಗಿ ಪ್ರಕರಣದಂತೆ ಹಳ್ಳ ಹಿಡಿಯುವ ಸಾಧ್ಯತೆಗಳು ಗೋಚರಿಸಿತು.
ಆದರೆ, ಇದೀಗ ಗೌರಿ ಹತ್ಯೆಗೆ ವಿಜಯಪುರದ ಲಿಂಕ್ ದೊರೆತಿದ್ದು, ಗೌರಿ ಹತ್ಯೆಗೆ ಬಳಸಿದ್ದ ಪಿಸ್ತೂಲ್ ಅಲ್ಲಿಂದಲೇ ರವಾನೆಯಾಗಿತ್ತು ಎಂಬ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಗೌರಿ ಪ್ರಕರಣವನ್ನು ಪೊಲೀಸರು ಭೇದಿಸುವರೇ ಎಂಬುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin