BIG NEWS : ಸಹಕಾರಿ ಸಂಘ, ಬ್ಯಾಂಕುಗಳ 50ಸಾವಿರ ರೂ.ವರೆಗಿನ ರೈತರ ಸಾಲ ಮನ್ನಾ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಜೂ.21– ಸಹಕಾರಿ ಸಂಘಗಳು ಮತ್ತು ಸಹಕಾರಿ ಬ್ಯಾಂಕುಗಳ ಮೂಲಕ ರೈತರು ಮಾಡಿರುವ ಬೆಳೆ ಸಾಲ ಮತ್ತು ಅಲ್ಪಾವಧಿ ಸಾಲವನ್ನು 50ಸಾವಿರ ರೂ.ವರೆಗೆ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಪ್ರಕಟಿಸಿದರು. 2017 -18ನೇ ಸಾಲಿನ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ, ರೈತರ ಹಾಗೂ ಕೃಷಿಕರ ಹಿತದೃಷ್ಟಿಯಿಂದ ನಿನ್ನೆಯವರೆಗೆ ಬಾಕಿ ಇರುವ ಎಲ್ಲ ರೈತರ 50ಸಾವಿರದವರೆಗಿನ ಸಾಲ ಮನ್ನಾ ಮಾಡುವುದಾಗಿ ತಿಳಿಸಿದರು.


ಇದರಿಂದ ರಾಜ್ಯದ 22,27,506 ರೈತರಿಗೆ ಅನುಕೂಲವಾಗಲಿದೆ. ಬಿಜೆಪಿ ಅವರಿಗೆ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲು ಹಾಗೂ ರೈತರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಸಹಕಾರಿ ಬ್ಯಾಂಕುಗಳ ಮೂಲಕ 10,736 ಕೋಟಿ ರೂ . ಸಾಲ ನೀಡಲಾಗಿದೆ. ಸಾಲ ಮನ್ನಾ ಮಾಡಿರುವ ಆದೇಶವನ್ನು ಕೂಡಲೇ ಹೊರಡಿಸಲಾಗುವುದು ಎಂದು ಹೇಳಿದರು.  ರಾಷ್ಟೀಕೃತ ಹಾಗೂ ವಾಣಿಜ್ಯ ಬ್ಯಾಂಕುಗಳ ಮೂಲಕ ಶೇ.80ರಷ್ಟು ಸಾಲವನ್ನು ರೈತರು ಮಾಡಿದ್ದಾರೆ. ಆ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡುವಂತೆ ಪತ್ರವನ್ನು ಕೂಡ ಬರೆಯಲಾಗಿತ್ತು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದಾಗಲು ಮನವಿ ಮಾಡಲಾಗಿತ್ತು. ಆದರೂ ಕೂಡ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಜೂ.13ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಬಿಡಿಗಾಸು ಕೊಡುವುದಿಲ್ಲ. ರಾಜ್ಯಗಳು ನಿಮ್ಮ ಸಂಪನ್ಮೂಲದಿಂದಲೇ ಭರಸಬೇಕು ಎಂದು ಹೇಳಿದ್ದರು. ನಾವು ಪ್ರಣಾಳಿಕೆ ಹಾಗೂ ಬಜೆಟ್‍ನಲ್ಲೂ ಕೂಡ ಸಾಲ ಮನ್ನಾ ಮಾಡುವ ಘೋಷಣೆ ಮಾಡಿರಲಿಲ್ಲ. ಆದರೂ ಸತತ ಬರಗಾಲದಿಂದ ಸಾಕಷ್ಟದಲ್ಲಿರುವ ರೈತರ ಹಿತಕಾಪಾಡುವ ದೃಷ್ಟಿಯಿಂದ ಈ ತೀರ್ಮಾನ ಮಾಡಲಾಗಿದೆ.

ನಮ್ಮ ಸರ್ಕಾರ ರೈತರು, ಹಿಂದುಳಿದವರು, ಬಡವರು, ಶೋಷಿತರು, ದಲಿತರೂ ಆಗಿದ್ದಾರೆ, ಈಗಾಗಲೇ ರೈರತರಿಗೆ ಕೃಷಿ ಭಾಗ್ಯದಂತಹ ಹಲವು ಸೌಲಭ್ಯ ಕೊಟ್ಟಿದ್ದರೂ ಅವರ ಕಷ್ಟಕ್ಕೆ ಸ್ಪಂದಿಸಬೇಕೆಂಬ ಉದ್ದೇಶದಿಂದ ಸಾಲ ಮನ್ನಾ ಮಾಡಲಾಗುತ್ತಿದೆ ಎಂದು ಹೇಳಿದರು.  ರಾಜ್ಯದಲ್ಲಿ ಒಟ್ಟು 1,16,006ಕೋಟಿ ರೂ.ಗಳನ್ನು ರೈತರು ಸಾಲ ಮಾಡಿದ್ದಾರೆ. ಇದರಲ್ಲಿ ಅಲ್ಪಾವಧಿ ಸಾಲ 52ಸಾವಿರ ಕೋಟಿ ರೂ. ಇದೆ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ 1600ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 3600 ಕೋಟಿ ರೂ. ಸಾಲ ಮನ್ನಾ ಮಾಡುವ ಘೋಷಣೆ ಮಾಡಿ 960ಕೋಟಿ ರೂ. ಮಾತ್ರ ನೀಡಿದ್ದರು. ಉಳಿದ 2ಸಾವಿರ ಕೋಟಿಯಷ್ಟು ಹಣವನ್ನು ನಾವು ತೀರಿಸಿದ್ದೆವು. ಎಲ್ಲಾ ಕಡೆ ರೈತರಿಂದ ಸಾಲ ಮನ್ನಾ ಮಾಡುವ ಒತ್ತಾಯ ಬರುತ್ತಿತ್ತು. ನಮ್ಮ ಶಾಸಕರು ಕೂಡ ಸಾಲ ಮನ್ನಾ ಮಾಡುವಂತೆ ಒತ್ತಡ ಹೇರುತ್ತಿದ್ದರು.

ಅಲ್ಲದೆ, ಕುಮಾರಸ್ವಾಮಿ, ಶೆಟ್ಟರ್ , ಕೋನರೆಡ್ಡಿ ಸೇರಿದಂತೆ ಹಲವು ಶಾಸಕರು ಸದನದಲ್ಲಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು. ಈ ನಡುವೆ ರಿಸರ್ವ್ ಬ್ಯಾಂಕ್‍ನ ಗೌರ್ನರ್ ಊರ್ಜಿತ್ ಪಟೇಲ್ ರೈತರ ಸಾಲ ಮನ್ನಾ ಮಾಡಿದರೆ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದು ಹೇಳಿದರು. ಆದರೆ, ಕಾರ್ಪೊರೇಟ್  ಸಂಸ್ಥೆಯ ಎನ್‍ಪಿಎ ಸಾವಿರಾರು ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ ಇದು ಕೇಂದ್ರ ಸರ್ಕಾರ ರೈತರ ಬಗ್ಗೆ ತಳೆದಿರುವ ಧೋರಣೆ ಎಂದು ಟೀಕಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ 72ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿತ್ತು, ಯುಪಿ ಸಿಂಗ್ ಪ್ರಧಾನಿಯಾಗಿದ್ದಾಗ ತಲಾ 10ಸಾವಿರ ಸಾಲ ಮನ್ನಾ ಮಾಡಲಾಗಿತ್ತು. ಉತ್ತರ ಪ್ರದೇಶದ ಚುನಾವಣೆಯಲ್ಲಿ ಸಾಲ ಮನ್ನ್ನಾ ಮಾಡುವ ಭರವಸೆಯನ್ನು ಪ್ರಣಾಳಿಕೆಯನ್ನೂ ನೀಡಲಾಗಿತ್ತು. ಪ್ರಧಾನಿಯವರೂ ಹೇಳಿದ್ದರು. ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. 2016ರ ಮಾರ್ಚ್ ಅಂತ್ಯದವರೆಗೆ ಬಾಕಿಇರುವ 36ಸಾವಿರ ಕೋಟಿ ರೂ. ಸಣ್ಣ ಮತ್ತು ಅತಿಸಣ್ಣ ರೈತರ ಸಾಲ ಮನ್ನಾ ್ನ ಮಾಡುವುದಾಗಿ ಅಲ್ಲಿನ ಮು ಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಣೆ ಮಾಡಿದ್ದಾರೆ. ಆದರೆ, ಆದೇಶ ಹೊರಬಂದಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರಪಡ್ನಿವೀಸ್ ಸಾಲ ಮನ್ನಾ ಮಾಡುವ ಘೋಷಣೆ ಮಾಡಿ ಅದಕ್ಕೊಂದು ಸಮಿತಿ ರಚಿಸಿದಾರೆ. ಆದೇಶ ಮಾತ್ರ ಎರಡೂ ರಾಜ್ಯಗಳಿಂದ ಹೊರ ಬಿದ್ದಿಲ್ಲ. ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಘೋಷಿಸಿದಂತೆ 10 ಲಕ್ಷ ರೈತರಿಗೆ ಸಹಾಯವಾಗುವಂತೆ ಸಾಲ ಮನ್ನ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ ಎಂದು ಹೇಳಿದರು.

ಸಾಲ ಮನ್ನಾ ಘೋಷಣೆ ಮಾಡುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು. ಸಾಲ ಮನ್ನ ಘೋಷಣೆಯಾದ ಬಳಿಕ ಪ್ರಸಕ್ತ ಸಾಲಿನ ಆಯವ್ಯಯಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಅನುಮೋದನೆ ದೊರೆಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin