BREAKING : ಬೈಎಲೆಕ್ಷನ್ ಮಾಸ್ಟರ್ ಡಿಕೆಶಿಗೆ ಬಿಗ್ ರಿಲೀಫ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.15-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಬೇಕು ಎಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಡಿ.ಕೆ.ಶಿವಕುಮಾರ್ ವಿರುದ್ಧ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ತಾಕೀತು ಮಾಡಿದೆ.

ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ಡಿ.ಕೆ.ಶಿವಕುಮಾರ್ ಅವರನ್ನು ಸೆ.3 ರಂದು ಬಂಧಿಸಿತ್ತು. ಸುಮಾರು 48 ದಿನಗಳ ಕಾಲ ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಕಳೆದ ತಿಂಗಳಷ್ಟೆ ಜಾಮೀನು ನೀಡಿತ್ತು.

ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಲ್ಲದೆ, ಡಿಕೆಶಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿತ್ತು. ಆದರೆ ಸುಪ್ರೀಂಕೋರ್ಟ್‍ನ ರೋಹಿಂಗ್‍ಟನ್ ನಾರಿಮನ್ ಅವರ ನ್ಯಾಯ ಪೀಠ ಜಾರಿ ನಿರ್ದೇಶನಾಲಯದ ಮನವಿಯನ್ನು ತಿರಸ್ಕರಿಸಿದೆ.  ದೇಶದ ಜನಸಾಮಾನ್ಯರ ಜೊತೆ ವರ್ತಿಸುವ ರೀತಿ ಇದಲ್ಲ ಎಂದು ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯದ ಕ್ರಮಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಮೂಲಕ ಡಿ.ಕೆ.ಶಿವಕುಮಾರ್ ಅವರ ಕಾನೂನು ಹೋರಾಟಕ್ಕೆ ಮತ್ತಷ್ಟು ನೈತಿಕ ಬೆಂಬಲ ಸಿಕ್ಕಂತಾಗಿದೆ.

ಗುಜರಾತ್‍ನ ಕಾಂಗ್ರೆಸ್ ಶಾಸಕರನ್ನು ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತು. ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಎಲ್ಲರನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿತ್ತು. ಆ ಶಾಸಕರಿಗೆ ರಕ್ಷಣೆ ಹಾಗೂ ಆತಿಥ್ಯ ನೀಡುತ್ತಿದ್ದ ವೇಳೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಕಚೇರಿ ಹಾಗೂ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು.

ನಂತರ ಆದಾಯ ತೆರಿಗೆ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿತು. ವಿಚಾರಣೆಗಾಗಿ ಕರೆದು ನಾಲ್ಕು ದಿನ ವಿಚಾರಣೆ ನಡೆಸಿದ ಬಳಿಕ ಬಂಧಿಸಿ ಜೈಲಿನಲ್ಲಿಟ್ಟಿತ್ತು. ಈ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಈಗ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯದ ಕ್ರಮಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ. ದೇಶದ ಜನರೊಂದಿಗೆ ನಡೆದುಕೊಳ್ಳುವ ರೀತಿ ಇದಲ್ಲ ಎಂದು ತಿಳಿ ಹೇಳಿದೆ.

ಜಾಮೀನು ರದ್ಧತಿಗಾಗಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸುವುದರಿಂದ ಡಿ.ಕೆ.ಶಿವಕುಮಾರ್ ನಿಟ್ಟುಸಿರು ಬಿಡುವಂತಾಗಿದೆ. ಪ್ರಕರಣದ ವಿಚಾರಣೆ ಮುಗಿಯುವವರೆಗೂ ಅನಗತ್ಯವಾಗಿ ವಿಚಾರಣೆ ನಡೆಸುವುದು, ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವುದಾಗಲೀ, ಅವರ ಕುಟುಂಬದವರನ್ನಾಗಲಿ ಬಂಧಿಸಬಾರದು ಎಂದು ಸೂಚನೆ ನೀಡಿದೆ.

ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಅವರು, ಜಾಮೀನು ರದ್ದು ಮಾಡುವಂತೆ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಸರಾಸಗಟಾಗಿ ತಳ್ಳಿ ಹಾಕಿದೆ. ಪ್ರಕರಣದ ವಿಚಾರಣೆಗೆ ನಮಗೂ ಸಹಕರಿ ಎಂದು ಸಲಹೆ ನೀಡಿದೆ. ವಿಚಾರಣೆ ವೇಳೆ ಅನಗತ್ಯವಾಗಿ ಬಂಧಿಸಬಾರದು ಎಂದು ಸೂಚನೆ ನೀಡಿದೆ ಎಂದರು.

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 120(ಬಿ)ಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೆಚ್ಚು ಪ್ರಶ್ನಿಸುತ್ತಿದ್ದಾರೆ. ನಾವು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ನ್ಯಾಯ ನಮ್ಮ ಪರವಾಗಿ ಬರಲಿದೆ ಎಂಬ ವಿಶ್ವಾಸವಿದೆ ಎಂದರು.

Facebook Comments

Sri Raghav

Admin