ಡಿಕೆಶಿ ತಾಯಿ ಮತ್ತು ಪತ್ನಿಗೆ ಬಿಗ್ ರಿಲೀಫ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.16- ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ ಅವರ ತಾಯಿ ಮತ್ತು ಪತ್ನಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್‍ಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅ.17ರಂದು ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್‍ರವರ ತಾಯಿ ಗೌರಮ್ಮ , ಪತ್ನಿ ಉಷಾ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು.

ಹೈಕೋರ್ಟ್‍ನ ತಾತ್ಕಾಲಿಕ ತಡೆಯಿಂದಾಗಿ ಇಬ್ಬರಿಗೂ ರಿಲೀಫ್ ಸಿಕ್ಕಿದ್ದು, ನಾಳೆ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ಸಿಕ್ಕಂತಾಗಿದೆ. ಮುಂದಿನ ವಿಚಾರಣೆಯನ್ನು ಹೈಕೋರ್ಟ್‍ನ ಏಕಸದಸ್ಯ ಪೀಠ ಅ.21 ಮಧ್ಯಾಹ್ನ 12.30ಕ್ಕೆ ಮುಂದೂಡಿದೆ. ಹೈಕೋರ್ಟ್ ತಡೆಯಿಂದಾಗಿ ಜಾರಿ ನಿರ್ದೇಶನಾಲಯ ಹೊಸದಾಗಿ ಸಮನ್ಸ್ ನೀಡಬೇಕಿದೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ ಬಳಿಕ ಅವರ ಕುಟುಂಬದ ಸದಸ್ಯರು, ಆಪ್ತ ಬಳಗ ಮತ್ತು ಸ್ನೇಹಿತರುಗಳಿಗೆ ಸಮನ್ಸ್ ನೀಡಿ ಒಬ್ಬೊಬ್ಬರನ್ನಾಗಿ ವಿಚಾರಣೆ ನಡೆಸುತ್ತಿದ್ದರು. ಅದೇ ರೀತಿ ತಾಯಿ ಗೌರಮ್ಮ ಮತ್ತು ಪತ್ನಿಉಷಾ ಅವರಿಗೂ ಸಮನ್ಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಇಬ್ಬರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ಅವರ ಏಕಸದಸ್ಯ ಪೀಠದ ಮುಂದೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದಯಾನ್ ಕೃಷ್ಣನ್ ಅವರು, 15 ವರ್ಷದೊಳಗಿನ ಮಕ್ಕಳಿಗೆ, 65 ವರ್ಷ ಮೇಲ್ಪಟ್ಟ ಹಿರಿಯರನ್ನು ವಿಚಾರಣೆಗಾಗಿ ಠಾಣೆಗೆ ಕರೆತರುವಂತಿಲ್ಲ.

ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಅವರಿಗೆ 85 ವರ್ಷ ವಯಸ್ಸಾಗಿದ್ದು, ಅತ್ಯಂತ ಹಿರಿಯರಾಗಿದ್ದಾರೆ. ಆರೋಗ್ಯ ಸಮಸ್ಯೆ ಕೂಡ ಕಾಡುತ್ತಿದೆ. ಅವರು ದೆಹಲಿಗೆ ಬಂದು ವಿಚಾರಣೆ ಎದುರಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಸಿದ್ದರಿದ್ದಾರೆ ಎಂದು ವಾದಿಸಿದರು.

ಜಾರಿ ನಿರ್ದೇಶನಾಲಯದ ಪರ ವಕೀಲ ಅಮಿತ್ ಮಹಾಜನ್ ಅವರು ಕೋರ್ಟ್‍ಗೆ ಗೈರು ಹಾಜರಾಗಿದ್ದರಿಂದ ಎರಡು ಬಾರಿ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮುಂದೂಡಿದರು.
ಮಧ್ಯಾಹ್ನದ ನಂತರ ಕಲಾಪಕ್ಕೆ ಹಾಜರಾಗುವುದಾಗಿ ಅಮಿತ್ ಮಹಾಜನ್ ಹೇಳಿದ್ದರಿಂದ ವಿಚಾರಣೆಯನ್ನು ಮಧ್ಯಾಹ್ನದ ನಂತರ ಕೈಗೆತ್ತಿಕೊಂಡರು. ಈ ಸಂದರ್ಭದಲ್ಲಿ ಅರ್ಜಿದಾರರ ವಕೀಲರ ವಾದವನ್ನು ಪರಿಗಣಿಸಿದ ನ್ಯಾಯಮೂರ್ತಿಗಳು ಜಾರಿ ನಿರ್ದೇಶನಾಲಯದ ಸಮನ್ಸ್‍ಗೆ ತಾತ್ಕಾಲಿಕ ತಡೆ ನೀಡಿದರು.

Facebook Comments

Sri Raghav

Admin