ಕೇಂದ್ರದಲ್ಲಿ ಕಿಚಿಡಿ ಸರ್ಕಾರ ರಚಿಸಲು ಸರ್ಕಸ್ ಮಾಡಿದ್ದ ನಾಯ್ಡುಗೆ ಭಾರೀ ಮುಖಭಂಗ..!

ಈ ಸುದ್ದಿಯನ್ನು ಶೇರ್ ಮಾಡಿ

ಅಮರಾವತಿ,ಮೇ 23- ಮೋದಿ ವಿರೋಧಿ ಪಾಳೆಯವನ್ನು ಒಗ್ಗೂಡಿಸಿ ಕೇಂದ್ರದಲ್ಲಿ ಮಹಾಘಟ್ ಬಂಧನ್ ಸರ್ಕಾರ ರಚಿಸುವ ಉಮೇದಿನಲ್ಲಿದ್ದ ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಭಾರೀ ಮುಖಭಂಗವಾಗಿದೆ.

ಆಂಧ್ರಪ್ರದೇಶ ವಿಧಾನಸಭೆಯ 175 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ವೈಎಸ್‍ಆರ್ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿದ್ದು, 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸುವತ್ತ ದಾಪುಗಾಲಿಟ್ಟಿದೆ. [ LOKSABHA ELECTIONS 2019 RESULT – Live Updates]

ಆಂಧ್ರದ 25 ಲೋಕಸಭಾ ಕ್ಷೇತ್ರಗಳಲ್ಲೂ ವೈಎಸ್‍ಆರ್ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕುಪ್ಪಂ ಕ್ಷೇತ್ರದಲ್ಲಿ ಭಾರೀ ಹಿನ್ನಡೆಯಲ್ಲಿದ್ದಾರೆ.  ಆಂಧ್ರ ವಿಭಜನೆಗೂ ಮುನ್ನ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ವಿಭಜನೆ ನಂತರವೂ ಆಂಧ್ರ ಮುಖ್ಯಮಂತ್ರಿಯಾಗುವಲ್ಲಿ ಯಶಸ್ವಿಯಾಗಿದ್ದರು.

ಈ ಬಾರಿಯೂ ಗೆಲುವು ಸಾಧಿಸಿ ಹ್ಯಾಟ್ರಿಕ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕನಸು ಹೊತ್ತಿದ್ದ ನಾಯ್ಡು ಅವರಿಗೆ ಅಲ್ಲಿನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟದಲ್ಲಿ ಕಾಣಿಸಿಕೊಂಡಿದ್ದ ನಾಯ್ಡು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎಹೊರಬಂದು ಮೋದಿ ವಿರೋಧಿ ಗುಂಪನ್ನು ಒಗ್ಗೂಡಿಸಿ ಕೇಂದ್ರದಲ್ಲಿ ಮೋದಿಯೇತರ ಸರ್ಕಾರ ರಚಿಸುವ ಕಸರತ್ತಿಗೆ ಕೈ ಹಾಕಿದ್ದರು.

ಹೀಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ, ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಮತ್ತಿತರರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರು. [ LOKSABHA ELECTIONS 2019 RESULT – Live Updates]

ಸಮೀಕ್ಷೆಗಳಲ್ಲಿ ಎನ್‍ಡಿಎ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ಮಾಹಿತಿ ಹೊರಬರುತ್ತಿದ್ದಂತೆ ಇವಿಎಂ ಕಾರ್ಯ ವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ನಾಯ್ಡು 21 ಪ್ರತಿಪಕ್ಷಗಳ ಸಹಮತದಲ್ಲಿ ಎಲ್ಲ ವಿವಿಪ್ಯಾಟ್‍ಗಳನ್ನು ಇವಿಎಂ ಮತ ಯಂತ್ರಗಳೊಂದಿಗೆ ತಾಳೆ ಹಾಕುವಂತೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

ಆದರೆ ಪ್ರತಿಪಕ್ಷಗಳ ಬೇಡಿಕೆಯನ್ನು ಸುಪ್ರೀಂಕೋರ್ಟ್ ಸಾರಸಗಟಾಗಿ ತಿರಸ್ಕರಿಸಿದ್ದರಿಂದ ನಾಯ್ಡು ಮತ್ತು ಅವರ ಬೆಂಬಲಿಗರಿಗೆ ಭಾರೀ ಹಿನ್ನಡೆಯಾಗಿತ್ತು. ಇದೀಗ ಫಲಿತಾಂಶ ಹೊರಬಂದಿದ್ದು, ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲೂ ಹೀನಾಯ ಸೋಲು ಅನುಭವಿಸುವಂತಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin