ಬಿಹಾರದಲ್ಲಿ ಎನ್‍ಡಿಎ ಒಗ್ಗಟ್ಟಿನ ಹೋರಾಟ, ನಿತೀಶ್ ನಾಯಕತ್ವದಲ್ಲಿ ಚುನಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ, ಸೆ.5- ಬಿಜೆಪಿ ಸಂಸದೀಯ ಮಂಡಳಿ ಸದ್ಯದಲ್ಲಿಯೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜತೆ ಸಭೆ ನಡೆಸಿ ಸೀಟು ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಹಾರ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟ ಜತೆಯಾಗಿ ಸೆಣೆಸಲಿದೆ ಮತ್ತು ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಮಿತ್ರ ಪಕ್ಷಗಳು ಒಗ್ಗಟ್ಟಿನಿಂದ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಮತ್ತು ನಿತೀಶ್‍ಕುಮಾರ್ ಅವರಿಗೆ ನಮ್ಮೆಲ್ಲಾ ಬೆಂಬಲ ನೀಡಿ ಮತ್ತೊಮ್ಮೆ ಅವರು ಮುಖ್ಯಮಂತ್ರಿಯಾಗಲು ಶ್ರಮಿಸುತ್ತೇವೆ ಎಂದು ತಿಳಿಸಿದ್ದಾರೆ.

ಅರಹಾ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯ ಹಾಗೂ ಕೇಂದ್ರ ಸಚಿವರಾಗಿರುವ ಆರ್.ಕೆ.ಸಿಂಗ್ ಅವರು ಬಿಜೆಪಿ ಏಕಾಂಗಿಯಾಗಿಯೇ ಸರ್ಕಾರ ರಚಿಸುವಷ್ಟು ಸ್ಥಾನ ಈ ಬಾರಿ ಲಭಿಸಲಿದೆ ಎಂದು ಹೇಳಿದ್ದರು. ಆದರೂ, ನಾವು ಜೆಡಿಯುನೊಂದಿಗೆ ಬಾಂಧವ್ಯವನ್ನು ಮುಂದುವರೆಸುತ್ತೇವೆ ಎಂದು ನಿನ್ನೆ ಹೇಳಿದ್ದರು.

ಇದರ ಬೆನ್ನ ಹಿಂದೆಯೇ ಇಂದು ಜೈ ಸ್ವಾಲ್ ಪತ್ರಿಕಾಗೋಷ್ಠಿ ನಡೆಸಿ ಒಗ್ಗಟ್ಟಿನ ಜಪ ಮಾಡುವ ಮೂಲಕ ನಿತೀಶ್‍ಗೆ ನಮ್ಮ ಬೆಂಬಲ ಎಂದು ತಿಳಿಸಿದ್ದಾರೆ. ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ-ಜೆಡಿಯು ಮೈತ್ರಿ ಕೂಟಕ್ಕೆ ಈಗ ಮಾಜಿ ಮುಖ್ಯಮಂತ್ರಿ ಜಿತೇನ್‍ರಾಮ್ ಮಂಜಾಹಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೇರಿಕೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಮುಂದಿನ ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಎನ್‍ಡಿಎ ವಿರುದ್ಧ ಹೋರಾಡಲು ಆರ್‍ಜೆಡಿ – ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

Facebook Comments