ಪೌರತ್ವ ಕಾಯ್ದೆ ವಿರೋಧಿಸಿ ಬಿಹಾರ್ ಬಂದ್ ವೇಳೆ ಗಲಭೆ, ಲಾಠಿ ಪ್ರಹಾರ
ಪಾಟ್ನಾ,ಡಿ.21- ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ವಿರೋಧಿಸಿ ಇಂದು ಕರೆ ನೀಡಲಾಗಿದ್ದ ಬಿಹಾರ್ ಬಂದ್ ವೇಳೆ ಅಲ್ಲಲ್ಲಿ ಗಲಭೆಗಳು ಭುಗಿಲೆದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಕಲ್ಲು ತೂರಾಟದಲ್ಲಿ ಪೊಲೀಸರಿಗೂ ಗಾಯಗಳಾಗಿವೆ.
ಲಾಲೂಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳ(ಆರ್ಜೆಡಿ) ಇಂದು ಕರೆ ನೀಡಲಾಗಿದ್ದ ಬಿಹಾರ್ ಬಂದ್ನಿಂದಾಗಿ ರಾಜಧಾನಿ ಪಾಟ್ನಾ ಸೇರಿದಂತೆ ಹಲವೆಡೆ ರೈಲು ಮತ್ತು ಇತರ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಪಾಟ್ನಾದ ಹಾಜಿಪುರ, ಪಾಟ್ನಾಗಾಂಧಿ ಸೇತು ರಸ್ತೆ, ಎನ್ಎಚ್87, ಎನ್ಎಚ್ 71 ಮತ್ತು ಎನ್ಎಚ್ 110 ಹೆದ್ದಾರಿಗಳು ಸೇರಿದಂತೆ ಹಲವು ರಸ್ತೆಗಳು ಆರ್ಜೆಡಿ ಕಾರ್ಯಕರ್ತರು ರಸ್ತೆತಡೆ ನಡೆಸಿ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದರು.
ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಕೆಲವು ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಾಕಾರರು ದರ್ಬಾಂಗ ಮತ್ತಿತರ ಸ್ಥಳಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಪಡಿಸಿದ ಕಾರಣ ಕೆಲ ಮಾರ್ಗಗಳ ರೈಲು ಪ್ರಯಾಣ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡುವಂತಾಯಿತು. ವಿಶಾಲಶೀಲ ಇಸಾನ್ ಪಾರ್ಟಿ(ವಿಐಪಿ) ಕಾರ್ಯಕರ್ತರು ಕೆಲವೆಡೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಬೇಧಿಸಿ ಪ್ರತಿಭಟನೆಗೆ ಮುಂದಾದಾಗ ಅವರನ್ನು ಚದುರಿಸಲು ಲಾಠಿ ಪ್ರಹಾರ ಮಾಡಬೇಕಾಯಿತು.
ಈ ಘಟನೆಯಲ್ಲಿ ಕೆಲವು ಪ್ರತಿಭಟನಾಕಾರರಿಗೆ ಗಾಯಗಳಾಗಿವೆ. ಪಾಟ್ನಾ ಸೇರಿದಂತೆ ಕೆಲವೆಡೆ ದುಷ್ಕರ್ಮಿಗಳ ಗುಂಪು ಪೊಲೀಸರತ್ತ ಕಲ್ಲು ಮತ್ತು ಇಟ್ಟಿಗೆ ಚೂರುಗಳನ್ನು ತೂರಿದ್ದರಿಂದ ಗಾಯಗಳಾಗಿವೆ. ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಭುಗಿಲೆದ್ದ ಪ್ರತಿಭಟನೆಗಳ ರೋಷಾಗ್ನಿ ಈಗ ಬಿಹಾರಕ್ಕೂ ವ್ಯಾಪಿಸಿದ್ದು, ಪರಿಸ್ಥಿತಿ ಕೈ ಮೀರದಂತೆ ತಡೆಯಲು ಕಟ್ಟೆಚ್ಚರ ವಹಿಸಲಾಗಿದೆ.