ನಾಳೆ ಬಿಹಾರ 2ನೇ ಹಂತದ ಚುನಾವಣೆ : 1,463 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ಬಿಹಾರ, ನ.2- ಹೈವೋಲ್ಟೇಜ್ ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಾಳೆ ನಡೆಯಲಿದ್ದು, ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಕೊನೆ ಗಳಿಗೆಯ ಸಿದ್ದತೆಗಳು ನಡೆಯಲಿವೆ.  ಬಿಹಾರದ 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆಯಲಿದ್ದು, 146 ಮಹಿಳೆಯರು ಮತ್ತು ಒಬ್ಬ ತೃತೀಯ ಲಿಂಗಿ ಸೇರಿದಂಎ 1,463 ಅಭ್ಯರ್ಥಿಗಳ ಭವಿಷ್ಯವನ್ನು 2.86 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.

ನಕ್ಸಲ್ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯುವುದರಿಂದ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಂಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.  ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

ಮಾವೋವಾದಿಗಳ ಉಪಟಳ ಹೆಚ್ಚಾಗಿರುವ ರಾಘೋಪುರ್, ಪರು, ಮೀನಾಪುರ್ ಮತ್ತು ಅಲೌಳಿ ಸೇರಿದಂತೆ ಎಂಟು ನಕ್ಸಲ್ ಪೀಡಿತ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಜೆ 4 ಗಂಟೆವರೆಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಚ್.ಆರ್.ಶ್ರೀನಿವಾಸ ತಿಳಿಸಿದ್ದಾರೆ.

ಬಹಿರಂಗ ಪ್ರಚಾರಕ್ಕೆ ನಿನ್ನೆ ಸಂಜೆ ಅಂತಿಮ ತೆರೆ ಬಿದ್ದಿದ್ದು, ಮತದಾರರನ್ನು ಓಲೈಸಲು ಜೆಡಿಯು-ಬಿಜೆಪಿ ನೇತೃತ್ವದ ಎನ್‍ಡಿಎ ಹಾಗೂ ಆರ್‍ಜೆಡಿ ಮತ್ತು ಕಾಂಗ್ರೆಸ್ ಮಿತ್ರಕೂಟದ ಅಭ್ಯರ್ಥಿಗಳು ಕೊನೆ ಕ್ಷಣಗಳ ಕಸರತ್ತು ನಡೆಸಿದರು.  ವೆಸ್ಟ್ ಚಂಪಾರಣ್, ಈಸ್ಟ್ ಚಂಪಾರಣ್, ದರ್ಭಾಂಗ, ಅರಾರಿಯಾ, ಮಧು ಬನಿ, ಪುರ್ನಿಯಾ, ಕಿಶನ್‍ಗಂಜ್, ಸಮಷ್ಟಿಪುರ್, ಸೀತಾಮರಿ, ವೈಶಾಲಿ, ಪಾಟ್ನಾ, ಮೋತಿಹರಿ, ಛಾತ್ರಾ, ಮುಜಫರ್‍ಪುರ್ ಸೇರಿದಂತೆ 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಕ್ಕೆ ನ.3ರಂದು ಮತದಾನ ನಡೆಯಲಿದೆ.

ಎರಡನೇ ಹಂತದ ಚುನಾವಣೆಯಲ್ಲಿ ಬಿಜೆಪಿ 45 ಕ್ಷೇತ್ರಗಳು, ಜೆಡಿಯು 43 ಹಾಗೂ ವಿಕಾಶಶೀಲ ಇನ್ಸಾನ್ ಪಾರ್ಟಿ (ವಿಐಪಿ) ಆರು ಸ್ಥಣಗಳಲ್ಲಿ ಸ್ಪರ್ಧಿಸಲಿದೆ. ಇವು ಎನ್‍ಡಿಎಗೆ ಸೇರಿದ ಪಕ್ಷಗಳು.  ಆರ್‍ಜೆಡಿ 56 ಮತ್ತು ಕಾಂಗ್ರೆಸ್ 24 ಕ್ಷೇತ್ರಗಳಲ್ಲಿ ತನ್ನ ಉಮೇದುವಾರರನ್ನು ಕಣಕ್ಕಿಳಿಸಿದೆ. ಎಲ್‍ಜೆಪಿ 52 ಕ್ಷೇತ್ರಗಳು, ಆರ್‍ಎಲ್‍ಎಸ್‍ಪಿ 36, ಬಿಎಸ್‍ಪಿ 33 ಹಾಗೂ ಎನ್‍ಸಿಪಿ 29 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದೆ.

ಅ.28ರಂದು ನಡೆದ ಮೊದಲ ಹಂತದಲ್ಲಿ 16 ಜಿಲ್ಲೆಗಳ 71 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ನ.7ರಂದು ಮೂರನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯಲಿದೆ. 243 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ನ.10ರಂದು ಪ್ರಕಟವಾಗಲಿದೆ.

Facebook Comments