ಡಿವೈಡರ್‍ಗೆ ಗುದ್ದಿದ ಬೈಕ್,  ಯುವಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ದೇವನಹಳ್ಳಿ, ಜೂ. 9- ಕ್ಯಾಂಟರ್‍ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ಡಿವೈಡರ್‍ಗೆ ಗುದ್ದಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಏರ್‍ಪೆಫೋರ್ಟ್ ಸಂಚಾರಿ ಫೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದ ವೈದ್ಯರಾದ ಡಾ. ಸಿದ್ದಲಿಂಗಪ್ಪ ಅವರ ಪುತ್ರ ಅನಂತ್(24) ಮೃತಪಟ್ಟ ಬೈಕ್ ಸವಾರ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರ ರಾಣಿ ಕ್ರಾಸ್ ಬಳಿ ಬೆಳ್ಳಿಗೆ ಸುಮಾರು 9.30ರಲ್ಲಿ ಈ ಘಟನೆ ನಡೆದಿದೆ.
ಅನಂತ್ ಬೈಕ್‍ನಲ್ಲಿ ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ ಕಡೆ ಬರುತ್ತಿದ್ದ.

ಈ ವೇಳೆ ಸಂಚಾರಿ ಪೊಲೀಸರು ಮುಂದೆ ಹೋಗುತ್ತಿದ್ದ ಕ್ಯಾಂಟರ್‍ನ್ನು ತಪಾಸಣೆಗೆ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ತಕ್ಷಣ ಕ್ಯಾಂಟರ್ ಎಡಕ್ಕೆ ಚಲಿಸಿದೆ. ಇದರ ಹಿಂದೆಯೇ ಬರುತ್ತಿದ್ದ ಅನಂತ್ ಕ್ಯಾಂಟರ್‍ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಬೈಕ್ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ.

ಹೆಲ್ಮೆಟ್ ಧರಿಸಿದ್ದರೂ ಕೂಡ ಅನಂತ್ ದುರ್ಮರಣಕ್ಕೆ ಈಡಾಗಿದ್ದಾನೆ. ಅನಂತ್‍ನೊಂದಿಗೆ ಬರುತ್ತಿದ್ದ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಏರ್‍ಪೆಫೋರ್ಟ್ ಸಂಚಾರಿ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments