SHOKING : ಕಳ್ಳರ ಗ್ಯಾಂಗ್‌ಗೆ ಕ್ಯಾಪ್ಟನ್ ಆಗಿದ್ದ ಪೊಲೀಸ್ ಅಂದರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.24- ಬೈಕ್‍ಗಳನ್ನು ಹುಡುಗರಿಂದ ಕಳವು ಮಾಡಿಸಿ ಅದರ ನಂಬರ್ ಪ್ಲೇಟ್ ಬದಲಿಸಿ ನಕಲಿ ಆರ್‍ಸಿ ಕಾರ್ಡ್ ಮಾಡಿ ಮಾರಾಟ ಮಾಡುತ್ತಿದ್ದ ಪೊಲೀಸ್ ಕಾನ್ಸ್‍ಟೇಬಲ್ ಸೇರಿದಂತೆ ಇಬ್ಬರನ್ನು ಮಾಗಡಿ ರಸ್ತ್ತೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾರಣ್ಯಪುರ ಠಾಣೆಯ ಸಿಬ್ಬಂದಿ ಹೊನ್ನಪ್ಪ ದುರದಪ್ಪ ಮಾಳಗಿ ಅಲಿಯಾಸ್ ರವಿ(26) ಮತ್ತು ರಾಜಸ್ತಾನ ಮೂಲದ ರಮೇಶ್(25) ಬಂಧಿತ ಆರೋಪಿಗಳು.

ಬಂಧಿತರಿಂದ ಬರೋಬ್ಬರಿ 75 ಲಕ್ಷ ರೂ. ಮೌಲ್ಯದ 52 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಮಾಗಡಿ ರಸ್ತೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹೊನ್ನಪ್ಪ ಓಓಡಿ ಆಧಾರದ ಮೇಲೆ ಈಶಾನ್ಯ ವಿಭಾಗದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ.
ಮೂಲತಃ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಕಾಕೋಳ ನಿವಾಸಿಯಾದ ಹೊನ್ನಪ್ಪ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಬೈಕ್‍ಗಳನ್ನು ಕಳ್ಳತನ ಮಾಡಿಸುತ್ತಿದ್ದುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಅ.28ರಂದು ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬಜಾಜ್ ಪಲ್ಸರ್ ಬೈಕ್ ಕಳ್ಳತನವಾಗಿದ್ದ ಬಗ್ಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಂಜುಂಡೆ ಗೌಡ ಅವರ ನೇತೃತ್ವದ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

ಡಿ.21ರಂದು ಇಬ್ಬರು ಹುಡುಗರು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅವರನ್ನು ತಡೆದು ವಿಚಾರಣೆ ನಡೆಸಿದಾಗ ಹೊನ್ನಪ್ಪ ಮತ್ತು ರಮೇಶ್‍ನ ಹೆಸರನ್ನು ಹೇಳಿದ್ದಾರೆ. ತಕ್ಷಣ ತನಿಖೆ ಚುರುಕುಗೊಳಿಸಿ ಕಾರ್ಯೋನ್ಮುಖರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಆರೋಪಿಗಳು ಹುಡುಗರಿಂದ ಬೈಕ್‍ಗಳನ್ನು ಕಳ್ಳತನ ಮಾಡಿಸಿ ನಂತರ ವಾಹನಗಳ ನಂಬರ್ ಪ್ಲೇಟ್‍ಗಳನ್ನು ಬದಲಿಸಿ ನಕಲಿ ಆರ್‍ಸಿ ಕಾರ್ಡ್‍ಗಳನ್ನು ಮಾಡಿ ಬೆಂಗಳೂರು, ರಾಣಿಬೆನ್ನೂರು, ಹಾವೇರಿ ಇನ್ನಿತರ ಕಡೆಗಳಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳ ಮಾಹಿತಿ ಮೇರೆಗೆ 75 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪೆನಿಗಳ 52 ದ್ವಿಕಚ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನದಿಂದ ಮಾಗಡಿ ರಸ್ತೆ ಪೊಲೀಸ್ ಠಾಣೆಯ ಒಂದು ಬೈಕ್ ಕಳವು ಪ್ರಕರಣ, ವಿಜಯನಗರ ಠಾಣೆಯ 2, ಜ್ಞಾನಭಾರತಿ ಠಾಣೆಯ ಒಂದು ಪ್ರಕರಣ ಪೀಣ್ಯ ಪೊಲೀಸ್ ಠಾಣೆಯ ಒಂದು, ಮಹಾಲಕ್ಷ್ಮೀ ಲೇಔಟ್ ಠಾಣೆಯ ಎರಡು, ಆರ್‍ಎಂಸಿ ಯಾರ್ಡ್ ಠಾಣೆಯ ಒಂದು ಪ್ರಕರಣ, ಮೈಸೂರು ಜಿಲ್ಲೆ ಅಲದನಹಳ್ಳಿ ಪೊಲೀಸ್ ಠಾಣೆಯ ಒಂದು ಪ್ರಕರಣ ಪತ್ತೆಯಾಗಿವೆ.

ಇನ್ನೂ ಸುಮಾರು 42 ದ್ವಿಚಕ್ರ ವಾಹನಗಳ ಮಾಲೀಕರುಗಳನ್ನು ಪತ್ತೆ ಮಾಡಬೇಕಾಗಿರುತ್ತದೆ. ಒಟ್ಟಾರೆ ಆರೋಪಿಗಳಿಂದ ದುಬಾರಿ ಬೆಲೆಯ ನಾಲ್ಕು ರಾಯಲ್ ಎನ್‍ಪೀಲ್ಡ್ ಬೈಕ್, ಯಮಹಾ ಆರ್-15, 10 ಬಜಾಜ್ ಪಲ್ಸರ್, 4 ಡ್ಯೂಕ್ ಬೈಕ್, ಟಿವಿಎಸ್ ಅಪ್ಪಾಚಿ, 15 ಹೊಂಡಾ ಡಿಯೋ, 3 ಹೊಂಡಾ ಆಕ್ಟೀವಾ, 4 ಯಮಹಾ ಆರ್‍ಎಕ್ಸ್ ಮತ್ತು ಇತರೆ ಕಂಪೆನಿಯ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ.ಸಂಜೀವ್ ಎಂ. ಪಾಟೀಲ್ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಶ್ರೀನಿವಾಸ್ ನೇತೃತ್ವದ ಸಿಬ್ಬಂದಿ ತಂಡ ಇಬ್ಬರನ್ನು ಬಂಸಿ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Facebook Comments