ಬೈಕ್ ವ್ಹೀಲಿಂಗ್‍ಗೆ ಯುವಕ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬಂಗಾರಪೇಟೆ, ಜೂ.29- ಯುವಕರಿಗೆ ಫ್ಯಾಷನ್ ಆಗಿರುವ ಬೈಕ್ ವ್ಹೀಲಿಂಗ್‍ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಪಟ್ಟಣದ ಕಾಮಸಮುದ್ರಂ ರಸ್ತೆಯಲ್ಲಿ ನಡೆದಿದೆ. ಪಟ್ಟಣದ ಸೀರಹೀಂ ಗಾರ್ಡನ್ ನಿವಾಸಿ ತಾಹೀದ್ (32) ಮೃತಪಟ್ಟಿರುವ ಯುವಕ ಎಂದು ಗುರುತಿಸಲಾಗಿದೆ.

ಕಾಮಸಮುದ್ರಂ ರಸ್ತೆಯಲ್ಲಿ ಬೈಕ್‍ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ವೇಳೆ ಆಯ ತಪ್ಪಿ ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ತಾಹೀದ್ ಸಾವನ್ನೊಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ಯಾಷನ್ ಆಗಿರುವ ಬೈಕ್ ವ್ಹೀಲಿಂಗ್ ಎಷ್ಟು ಪ್ರಮಾದ ಎಂಬುದು ಗೊತ್ತಿದ್ದರೂ ಜೀವದ ಮೇಲೆ ಹಂಗಿಲ್ಲದೆ ವ್ಹೀಲಿಂಗ್ ಮಾಡುವ ಮೂಲಕ ತಮ್ಮ ಅಮೂಲ್ಯ ಜೀವನಗಳನ್ನು ಕಳೆದುಕೊಳ್ಳುತ್ತಿರುವುದು ದುರಾದೃಷ್ಟಕರ.

ಕೋಲಾರ ಮುಖ್ಯ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವಕರ ಮೇಲೆ ಪೊಲೀಸರು ನಿಗಾ ವಹಿಸಿ ಅಂತಹವರನ್ನು ಗುರುತಿಸಿ ಪತ್ತೆ ಹಚ್ಚಿ ಎಚ್ಚರಿಕೆ ನೀಡಿದ್ದರು.
ಪೊಲೀಸರ ಕಣ್ಣು ತಪ್ಪಿಸಿ ವ್ಹೀಲಿಂಗ್ ಮಾಡುವ ಚಟಕ್ಕೆ ಬಿದ್ದಿದ್ದ ಯುವಕರಿಗೆ ಖಡಕ್ ಎಚ್ಚರಿಕೆ ನೀಡಿದ ನಂತರ ಕೋಲಾರ ಮುಖ್ಯ ರಸ್ತೆಯಲ್ಲಿ ವ್ಹೀಲಿಂಗ್ ಹತೋಟಿಗೆ ಬಂದಿತ್ತು.

ಈಗ ಗ್ರಾಮೀಣ ಮುಖ್ಯ ರಸ್ತೆಗಳ ಕಡೆ ಮುಖ ಮಾಡಿದ್ದಾರೆ. ಆದರೆ ವ್ಹೀಲಿಂಗ್ ಮಾಡುವುದರಿಂದ ಜೀವಕ್ಕೆ ಇರುವ ಅಪಾಯದ ಬಗ್ಗೆ ಪೊಲೀಸರು, ನಾಗರೀಕರು ಎಷ್ಟೇ ಎಚ್ಚರಿಕೆಗಳನ್ನು ನೀಡುತ್ತಿದ್ದರೂ, ವ್ಹೀಲಿಂಗ್ ಮೂಲಕ ಯುವಕರ ಪ್ರಾಣ ಹಾರಿ ಹೋಗುತ್ತಿರುವುದು ಮಾತ್ರ ದುರಾದೃಷ್ಟಕರ.
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Facebook Comments