ಬೈಕ್ ವೀಲ್ಹಿಂಗ್ ಮಾಡುತ್ತಿದ್ದ 9 ಮಂದಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ನ.13-ದ್ವಿಚಕ್ರ ವಾಹನಗಳಲ್ಲಿ ಸವಾರರು ವೇಗ ಹಾಗೂ ಅಜಾಗರೂಕತೆಯಿಂದ ಅಪಾಯಕಾರಿ ರೀತಿಯಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಾ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದ ಒಂಭತ್ತು ಮಂದಿಯನ್ನು ಸಂಚಾರ ಠಾಣೆ ಪೊಲೀಸರು ಬಂಧಿಸಿ ನಾಲ್ಕು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ ಅಬ್ದುಲ್ ಅಜೀಜ್, ಇಮ್ರಾನ್, ಅಬ್ದುಲ್ ಗೌಸ್, ಸಲ್ಮಾನ್, ರಿಯಾಜ್, ಸೋಹೆಲ್ ಅಹಮ್ಮದ್, ರಿಹಾನ್, ಹರಭಾಜ್, ಯಾಕೂಬ್ ಎಂಬಾತನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.  ನಗರದ ಕುಣಿಗಲ್ ಮುಖ್ಯರಸ್ತೆಯಲ್ಲಿ ನಾಲ್ಕು ದ್ವಿಚಕ್ರ ವಾಹನಗಳ ಸವಾರರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಾ ಹಿಂಬದಿ ಸವಾರರು ಸೀಟಿನ ಮೇಲೆ ನಿಂತು ಸಾರ್ವಜನಿಕ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಾ ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ತುಮಕೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದಂತೆ ಸವಾರರಿಗಾಗಿ ತನಿಖೆ ಕೈಗೊಂಡಿದ್ದರು.
ಕುಣಿಗಲ್ ರಸ್ತೆಯಲ್ಲಿನ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಡಿವೈಎಸ್‍ಪಿ ತಿಪ್ಪೇಸ್ವಾಮಿ ಸಿಪಿಐ ನವೀನ್, ಪಿಎಸ್‍ಐಗಳಾದ ಜ್ಞಾನಮೂರ್ತಿ, ಮಂಗಳಮ್ಮ ಹಾಗೂ ಸಂಚಾರಿ ಠಾಣೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಜಿಲ್ಲೆ ಹಾಗೂ ನಗರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿಯಾಗುವ ರೀತಿಯಲ್ಲಿ ವಾಹನಗಳಲ್ಲಿ ವೀಲ್ಹಿಂಗ್ ಮಾಡುವುದಾಗಲಿ, ವಾಹನಗಳಲ್ಲಿ ಕರ್ಕಶ ಶಬ್ಧ ಮಾಲಿನ್ಯ ಉಂಟು ಮಾಡುವುದು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಸ್‍ಪಿ ಎಚ್ಚರಿಕೆ ನೀಡಿದ್ದಾರೆ.

Facebook Comments