ವಿಪಕ್ಷಗಳ ಗದ್ದಲ, ಧರಣಿ ನಡುವೆ ಕೃಷಿ ಮಸೂದೆಗಳು ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.29- ವಿವಾದಿತ ಕೃಷಿ ಮಸೂದೆಗಳ ಹಿಂಪಡೆಯುವ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು ಗದ್ದಲ ಮಾಡಿದ್ದರಿಂದ ಬಹುನಿರೀಕ್ಷಿತ ಚಳಿಗಾಲದ ಅವೇಶನ ಮೊದಲ ದಿನವೇ ಕೆಲ ಕಾಲ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಈ ನಡುವೆ ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನು ಹಿಂಪಡೆಯಲು ಕೆಳ ಮನೆಯಲ್ಲಿ ಧ್ವನಿಮತದ ಅಂಗೀಕಾರ ಪಡೆದುಕೊಂಡಿದೆ.ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಮತ್ತು ಅವುಗಳ ಮೇಲೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಗದ್ದಲವೆಬ್ಬಿಸಿದವು. ಉಭಯ ಸದನಗಳಲ್ಲಿ ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು.

ಲೋಕಸಭೆಯಲ್ಲಿ ಅಧ್ಯಕ್ಷ ಓಂ ಬಿರ್ಲಾ ಅವರು ಪರಿಸ್ಥಿತಿ ನಿಯಂತ್ರಿಸಲು ಸತತ ಪ್ರಯತ್ನ ಪಟ್ಟರು ಪ್ರಯೋಜನವಾಗಲಿಲ್ಲ. ಹಾಗಾಗಿ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಂದೂಡಿದರು.

ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿಪಕ್ಷಗಳು ಗದ್ದಲ ಮಾಡಿ ಕಲಾಪಕ್ಕೆ ಅಡ್ಡಿಯಾಯಿತು. ಸಭಾಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರು ಹಲವು ಬಾರಿ ಮನವಿ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದಗ ಕಲಾಪವನ್ನು ಒಂದು ಗಂಟೆ ಕಾಲ ಮುಂದೂಡಿದರು.

ಲೋಕಸಭೆ ಮತ್ತೆ ಸಮಾವೇಶಗೊಂಡಾಗಲು ಪ್ರತಿಪಕ್ಷಗಳು ಗದ್ದಲ ಆರಂಭಿಸಿ ಘೋಷಣೆ ಕೂಗಿದವು. ಗದ್ದಲದ ನಡುವೆಯೇ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಕಾನೂನು ತಿದ್ದುಪಡಿಗಳನ್ನು ನಿರಶನಗೊಳಿಸುವ ಮಸೂದೆಗಳನ್ನು ಮಂಡಿಸಿದರು. ಗದ್ದಲದ ನಡುವೆಯೇ ಮಸೂದೆಗಳನ್ನು ಹಿಂಪಡೆಯಲು ಸಂಸತ್ ಧ್ವನಿಮತದ ಅನುಮತಿ ನೀಡಿತು. ಗದ್ದಲ ಮುಂದುವರೆದಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೂ ಮುಂದೂಡಲಾಯಿತು.

ಅವೇಶನಕ್ಕೂ ಮುನ್ನಾ ಸಂಸತ್ ಆವರಣದಲ್ಲಿ ಇರುವ ಗಾಂ ಪ್ರತಿಮೆ ಬಳಿ ಕಾಂಗ್ರೆಸ್ನ ಅಧ್ಯಕ್ಷೆ ಸೋನಿಯಾ ಗಾಂ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷದ ಸಂಸದರು, ಕೃಷಿ ಕಾನೂನುಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ವಿವಾದಿತ ಕೃಷಿ ಕಾನೂನುಗಳಿಗೆ ತಿದ್ದುಪಡಿ ತಂದಿದ್ದು ಮತ್ತು ಈಗ ಅವನ್ನು ಹಿಂಪಡೆಯುವ ಘೋಷಣೆಯ ಬಗ್ಗೆ ಚರ್ಚೆಯಾಗಬೇಕು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲಯ ಬೆಲೆ ಖಾತ್ರಿ ನೀಡಬೇಕು, ಮಸೂದೆಗಳನ್ನು ಬೆಂಬಲಿಸಿ ನಡೆದ ಪ್ರತಿಭಟನೆ ವೇಳೆ ಮೃತಪಟ್ಟ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದವು.
ತೃಣಮೂಲ ಕಾಂಗ್ರೆಸ್ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಧಾನಿ ಅವರು ಚರ್ಚೆಗೆ ಅವಕಾಶ ನೀಡದೆ ಫಲಾಯನವಾದ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿತ್ತು.

ಆದರೆ ಸರ್ಕಾರದ ವತಿಯಿಂದ ಸಮರ್ಥನಿಯ ವಾದಗಳು ಕೇಳಿ ಬಂದಿವೆ. ಕೃಷಿ ಮಸೂದೆಗಳನ್ನು ಹಿಂಪಡೆಯುವ ಕುರಿತು ಸಂಸತ್ನಲ್ಲಿ ಚರ್ಚೆ ನಡೆಸಲು ಸರ್ಕಾರ ಸಿದ್ಧವಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ. ಮಸೂದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿಯೇ ಹೇಳಿದ್ದಾರೆ, ಖುದ್ಧು ಅವರೇ ಕ್ಷಮೆ ಕೇಳಿದ್ದಾರೆ. ಇದಕ್ಕಿಂತಲೂ ಹೆಚ್ಚಿನದಾಗಿ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಕೇಂದ್ರ ಸಚಿವರು ಸಮರ್ಥಿಸಿಕೊಂಡಿದ್ದಾರೆ.

ವಿವಾದಿತ ಕೃಷಿ ಮಸೂದೆಗಳನ್ನು ಹಿಂಪಡೆಯಲು ಮೊದಲ ದಿನವೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನಿನ್ನೆ ಹೇಳಿದ್ದರು. ಮಸೂದೆಗಳನ್ನು ನೇರವಾಗಿ ಹಿಂಪಡೆಯುವ ಬದಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

ಇದರಿಂದ ಮತ್ತೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಪ್ರತಿಷ್ಠೆ ಎದುರಾಗಿದೆ. ಸುಗಮ ಕಲಾಪಕ್ಕೆ ಮೊದಲ ದಿನವೇ ವಿಘ್ನ ಎದುರಾಗಿದ್ದು, ಅರ್ಧ ದಿನದ ಕಲಾಪ ಬಲಿಯಾಗಿದೆ. ಕಳೆದ ಬಾರಿಯ ಅವೇಶನದಲ್ಲಿ ಪೆಗಾಸಸ್ ಬೇಹುಗಾರಿಕೆ ಹಗರಣ ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಒಟ್ಟು ಕಲಾಪದಲ್ಲಿ ಗುಣಮಟ್ಟದ ಚರ್ಚೆಗೆ ಅಡ್ಡಿಯಾಗಿತ್ತು.

ಈ ಅವೇಶನದಲ್ಲಿ ಕ್ರಿಫ್ಟೋ ಕರೆನ್ಸಿ ಮತ್ತು ಅಕೃತ ಡಿಜಿಟಲ್ ಕರೆನ್ಸಿ ಮಸೂದೆ, ವೈಯಕ್ತಿಕ ದತ್ತಾಂಶ ರಕ್ಷಣೆ ಕುರಿತು ಜಂಟಿ ಸದನ ಸಮಿತಿಯ ವರದಿ ಆಧರಿಸಿ ರಚಿಸಲಾಗಿರುವ 2019ರ ಮಸೂದೆಗಳು ಮಂಡನೆಯಾಗಲಿವೆ. ಮಹತ್ವದ ಈ ಮಸೂದೆಗಳ ಮೇಲೆ ಚರ್ಚೆಯಾಗದೆ ಅಂಗೀಕಾರಗೊಳ್ಳಬಹುದೇ ಎಂಬ ಆತಂಕ ಕಾಡಲಾರಂಭಿಸಿದೆ.

ಸುಗಮ ಕಲಾಪಕ್ಕಾಗಿ ನಾನಾ ರೀತಿಯ ಕಸರತ್ತುಗಳು ನಡೆಯುತ್ತಿವೆ. ಸದನ ಆರಂಭಕ್ಕೂ ಮುನ್ನಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಹಿರಿಯ ಸಚಿವರ ಸಭೆ ನಡೆಸಿದರು. ಅವೇಶನ ಮುಂದೂಡಿಕೆಯಾದ ಬಳಿಕ ಪ್ರತಿಪಕ್ಷಗಳು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆ ನಡೆಸಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದವು.

Facebook Comments

Sri Raghav

Admin