ಸಂಸತ್ ಕಲಾಪ ಮತ್ತೆ ಅಸ್ತವ್ಯಸ್ಥ, ಚರ್ಚೆಯಾಗದೆ ಮಸೂದೆಗಳ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.3- ಕಳೆದ ಜುಲೈ 19ರಿಂದ ಆರಂಭವಾದ ಸಂಸತ್ ಕಲಾಪದಲ್ಲಿ ಇಂದೂ ಕೂಡ ಗದ್ದಲ, ಗಲಾಟೆ, ವಾಗ್ವಾದ, ಧರಣಿ, ಪ್ರತಿಭಟನೆಗಳು ನಡೆದು ಹಲವಾರು ಬಾರಿ ಮುಂದೂಡಲ್ಪಟ್ಟಿತ್ತು. ಆದರೆ ಇಂದು ರಾಜ್ಯಸಭೆಯಲ್ಲಿ ಸಭಾಧ್ಯಕ್ಷರು ಸಂಸದರ ನಡವಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದರೆ, ಕೇಂದ್ರ ಸಚಿವರು ಪ್ರತಿಪಕ್ಷದ ಸದಸ್ಯರ ಹೇಳಿಕೆಯನ್ನು ಖಂಡಿಸಿ ಕ್ಷಮೆಯಾಚನೆಗೆ ಪಟ್ಟು ಹಿಡಿದರು.

ಇಸ್ರೆಲ್ ಮೂಲದ ಕಂಪೆನಿಯೊಂದು ತಯಾರಿಸಿರುವ ಪೆಗಾಸಸ್ ಸಾಫ್ಟವೇರ್ ಬಳಕೆ ಮಾಡಿ ದೇಶದಲ್ಲಿ ಪ್ರತಿಪಕ್ಷಗಳ ನಾಯಕರು, ನ್ಯಾಯಾಧೀಶರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರನ್ನು ಬೇಹುಗಾರಿಕೆ ಮಾಡುತ್ತಿರುವ ಕುರಿತು ಎಂದಿನಂತೆ ಆಕ್ರೋಶ ವ್ಯಕ್ತ ಪಡಿಸಿದ್ದಲ್ಲದೆ ಧರಣಿ ನಡೆಸಿ ಘೋಷಣೆಗಳನ್ನು ಕೂಗಿದರು.

ಇದಕ್ಕೂ ಮುನ್ನಾ ಸಮಾಜವಾದಿ ಪಕ್ಷದ ರಾಮ್‍ಗೋಪಾಲ್ ಯಾದವ್, ಎಎಪಿಯ ಸಂಜಯ್ ಸಿಂಗ್, ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೊಪಾಲ್, ಟಿಎಂಸಿಯ ಸುಖೇಂದು ಶೇಖರ್‍ರಾಯ್, ಸಿಪಿಐ(ಎಂ)ನ ಎಲ್ಮರಾಮ್ ಕರೀಂ, ಸಿಪಿಐನ ವಿ.ಶಿವಸದನ್ ಮತ್ತು ಬಿನೋಯ್ ವಿಶ್ವಂ ಅವರು ನಿಯಮ 267ರ ಅಡಿ ನೋಟಿಸ್ ನೀಡಿ ಎಲ್ಲಾ ಕಲಾಪಗಳನ್ನು ಬದಿಗೆ ಒತ್ತಿ ಆಧ್ಯತೆ ಮೇರೆಗೆ ಬೇಹುಗಾರಿಕೆ ಹಗರಣವನ್ನು ಚರ್ಚೆಗೆ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪರಾಷ್ಟ್ರಪತಿಗಳೂ ಆದ ಸಭಾಪತಿ ವೆಂಕಯ್ಯನಾಯ್ಡು ಅವರು, ನೋಟಿಸ್ ಅಂಗೀಕಾರಗೊಂಡಿಲ್ಲ ಎಂದು ರೂಲಿಂಗ್ ನೀಡಿದರು.

ರೂಲಿಂಗ್‍ಗೆ ಆಕ್ಷೇಪ ವ್ಯಕ್ತ ಪಡಿಸಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಎಡಪಕ್ಷಗಳ ಸದಸ್ಯರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದ್ದಲ್ಲದೆ, ಘೋಷಣೆ ಕೂಗಲಾರಂಭಿಸಿದರು. ಧರಣಿ ಕೈ ಬಿಟ್ಟು ಸ್ವಸ್ಥಾನಗಳಿಗೆ ತೆರಳಿ ಚರ್ಚೆಯಲ್ಲಿ ಭಾಗವಹಿಸುವಂತೆ ಸಭಾಧ್ಯಕ್ಷರು ಹಲವು ಬಾರಿ ಮನವಿ ಮಾಡಿದರು.

ಈ ನಡುವೆ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಮಾತನಾಡಿ, ಈ ಮನೆಯ ಸದಸ್ಯರೊಬ್ಬರು ಅಧಿವೇಶನದಲ್ಲಿ ಮಸೂದೆಗಳು ಯಾವುದೇ ಚರ್ಚೆ ಇಲ್ಲದೆ ಪಾನಿಪೂರಿಯಂತೆ ಮಾರಾಟವಾಗುತ್ತಿವೆ ಎಂದು ಹೇಳಿದ್ದಾರೆ. ಇದು ಸಂಸತ್‍ಗೆ ಮಾಡಿದ ಅಪಮಾನ, ವಿರೋಧ ಪಕ್ಷದಲ್ಲಿರುವ ಹಿರಿಯ ಸದಸ್ಯರಾದ ಅವರು ಕೂಡಲೇ ಸದನದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಆದರೆ ಸದಸ್ಯರ ಹೆಸರನ್ನು ಅವರು ನೇರವಾಗಿ ಪ್ರಸ್ತಾಪಿಸಲಿಲ್ಲ.

ಟಿಎಂಸಿಯ ಸದಸ್ಯ ದೆರೆಕ್ ಒಬ್ರೆಹೆನ್ ಅವರು ನಿನ್ನೆ ಟ್ವಿಟ್ ಮಾಡಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಪ್ರತಿ ಮಸೂದೆಯೂ ಕನಿಷ್ಟ ಏಳು ನಿಮಿಗಳ ಕಾಲದಲ್ಲಿ ಅಂಗೀಕಾರಗೊಂಡಿದೆ. ಯಾವುದೇ ಚರ್ಚೆ ಇಲ್ಲದೆ ಕಳೆದ 10 ದಿನಗಳಿಂದ ಮಸೂದೆಗಳನ್ನು ಅಂಗೀಕಾರ ಪಡೆದುಕೊಳ್ಳಲಾಗುತ್ತಿದೆ. ಪಾಪ್ರಿ ಚಾಟ್ ರೀತಿ ಬಿಕರಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ನಕ್ವಿ ಅವರು ಸದನಕ್ಕೆ ಅಗೌರವ ತೋರಿಸಿರುವ ಸದಸ್ಯರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಅದಕ್ಕೆ ಧ್ವನಿಗೂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು, ಸದಸ್‍ಯರ ಹೇಳಿಕೆ ಸದನಕ್ಕೆ ಮತ್ತು ದೇಶದ ಜನರಿಗೆ ಮಾಡಿದ ಅಪಮಾನ ಎಂದು ವ್ಯಾಖ್ಯಾನಿಸಿದರು. ಇದು ದುರಾದೃಷ್ಟಕರ ಹೇಳಿಕೆ ಎಂದು ಆಕ್ಷೇಪಿಸಿ, ನಾವು ಮಸೂದೆಗಳ ಮೇಲೆ ಚರ್ಚೆಗೆ ಸಿದ್ದರಿದ್ದೇವೆ ಎಂದರು.

ಈ ನಡುವೆ ಗದ್ದಲ ಹೆಚ್ಚಾದಾಗ ನಾಯ್ಡು ಅವರು, ಪದೇ ಪದೇ ಕಲಾಪ ಮುಂದೂಡಿಕೆಯಾಗುತ್ತಿರುವುದರಿಂದ ದೇಶದ ಜನ ನೋಂದುಕೊಳ್ಳುತ್ತಿದ್ದಾರೆ. ಇಲ್ಲಿರುವ ಬಹಳಷ್ಟು ಜನ ಕಲಾಪ ನಡೆಯಬೇಕು ಎಂದು ಬಯಸುತ್ತಿದ್ದಾರೆ. ಚರ್ಚೆಗೆ ಅವಕಾಶ ನೀಡಲು ನಮಗೂ ಆಸಕ್ತಿ ಇದೆ. ಆದರೆ ನೀವು ಪೀಠದ ಮೇಲೆ ಬಲವಂತದಿಂದ ಒತ್ತಡ ಹೇರುವಂತಿಲ್ಲ. ಏನು ಮಾಡಬೇಕು, ಏನು ಮಾಡಬಾರದು ಎಂದು ತಾಕೀತು ಮಾಡುವಂತಿಲ್ಲ ಎಂದು ಹೇಳಿದರು.

ಮಕ್ಕಳು ನೋಡುತ್ತಿದ್ದಾರೆ, ಜನ ಕೂಡ ಗಮನಿಸುತ್ತಿದ್ದಾರೆ. ಇಲ್ಲಿ ಚರ್ಚೆ ಮಾಡಬೇಕು, ಸಂವಾದಗಳಾಗಬೇಕು, ನಂತರ ನಿರ್ಧರಿಸಬೇಕು. ಬದಲಾಗಿ ಅಡ್ಡಿ ಪಡಿಸಬಾರದು (ಡಿಸ್ಕಸ್, ಡಿಬೇಟ್, ಡಿಸೈಟ್. ಡುನಾಟ್ ಡಿಸ್ಟರ್ಬ್) ಎಂದು ಹೇಳಿದರು. ಧರಣಿ ನಿರತ ಸದಸ್ಯ ಶಕ್ತಿಶಿನ್ಹಾ ಗೋಹಿಲ್ ಅವರು ಏರಿದ ಧ್ವನಿಯಲ್ಲಿ ಮಾತನಾಡಿದಾಗ, ಗೋಹಿಲ್ ಪೀಠದ ಕಡೆ ಬೆರಳು ತೋರಿಸಿ ಮಾತನಾಡಬಾರದು. ಈ ರೀತಿ ಮಾತನಾಡುವುದರಿಂದ ನಿಮಗೆ ನೀವೆ ತೊಂದರೆ ಮಾಡಿಕೊಳ್ಳುತ್ತಿದ್ದಾರೆ. ತಿದ್ದಿಕೊಳ್ಳದೆ ಇದ್ದರೆ ನಾನು ನಿಮ್ಮ ಹೆಸರನ್ನು ಉಲ್ಲೇಖಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಎಚ್ಚರಿಸಿದರು.

ಪ್ರತಿಭಟನೆ ಮುಂದುವರೆದಾಗ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು. ಮತ್ತೆ ಅಧೀವೇಶನ ಸಮಾವೇಶಗೊಂಡಾಗಲೂ ಗದ್ದಲ ಮುಂದುವರೆದಿದ್ದರಿಂದ ಮತ್ತೆ 2 ಗಂಟೆಗೆ ಮುಂದೂಡಲಾಯಿತು. ಇತ್ತ ಲೋಕಸಭೆಯಲ್ಲೂ ಗದ್ದಲಗಳಿಂದಾಗಿ ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆಯಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ಓಂ ಬಿರ್ಲಾ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡರು. ಆದರೆ ಚರ್ಚೆಗೆ ಅವಕಾಶವಾಗದಂತೆ ಪ್ರತಿಪಕ್ಷಗಳ ಸದಸ್ಯರು ಪೆಗಾಸಸ್ ಬೇಹುಗಾರಿಕೆ ಮತ್ತು ರೈತರ ಪ್ರತಿಭಟನೆ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು.

ಪ್ರಶ್ನೋತ್ತರ ಅವಧಿಯಲ್ಲಿ ರೈತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಬದಲಾಗಿ ಸಂಬಂಧ ಇಲ್ಲದ ಘೋಷಣೆಗಳನ್ನು ಕೂಗಬೇಡಿ ಎಂದು ಸಭಾಧ್ಯಕ್ಷರು ಸಲಹೆ ನೀಡಿದರು. ಆದರೂ ಗದ್ದಲ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಿದರು.

Facebook Comments