ಡ್ರಗ್ ಸ್ಮಗ್ಲರ್ ಖಾತೆಗೆ ಭಾರೀ ಹಣ ವರ್ಗಾಯಿಸಿದ ಮಾಜಿ ಸಚಿವರ ಪುತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು/ನವದೆಹಲಿ,ಅ.30-ಭಾರೀ ಕುತೂಹಲ ಕೆರಳಿಸಿರುವ ಬೆಂಗಳೂರಿನ ಡ್ರಗ್ಸ್ ಜಾಲಕ್ಕೆ ಸಂಬಂಧಪಟ್ಟಂತೆ ನಿನ್ನೆ ಬಂಧಿಸಲ್ಪಟ್ಟ ಕೇರಳದ ಮಾಜಿ ಸಚಿವ ಮತ್ತು ಸಿಪಿಐ(ಎಂ) ಮುಖಂಡ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ವಿಚಾರಣೆ ನಡೆಸಿದ ಜಾರಿನಿರ್ದೇಶನಾಲಯದ ಅಧಿಕಾರಿಗಳಿಗೆ ಕೆಲವು ಮಹತ್ವದ ಸಂಗತಿಗಳು ಲಭ್ಯಯಾಗಿವೆ.

ಈತ ಡ್ರಗ್ಸ್ ಸ್ಮಗ್ಲರ್ ಮತ್ತು ಮಾದಕ ವಸ್ತು ಮಾರಾಟಗಾರನ ಖಾತೆಗೆ ಭಾರೀ ಪ್ರಮಾಣದ ಅಘೋಷಿತ ಹಣವನ್ನು ವರ್ಗಾವಣೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಈತ ಮೊಹಮ್ಮದ್ ಅನೂಪ್ ಎಂಬ ಡ್ರಗ್ ಪೆಡ್ಲರ್ ಖಾತೆಗೆ ಭಾರೀ ಮೊತ್ತದ ಹಣವನ್ನು ವರ್ಗಾಯಿಸಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಅಕ್ಟೋಬರ್ 17ರಂದು ಮೊಹಮ್ಮದ್ ಅನೂಪ್ ಮತ್ತು ಆತನ ಸಹಚರರನ್ನು ಮಾದಕವಸ್ತು ನಿಯಂತ್ರಣ ಮಂಡಳಿ(ಎನ್‍ಸಿಬಿ) ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದರು.

ವಿಚಾರಣೆ ವೇಳೆ ತಾನು ಮಾದಕವಸ್ತು ಖರೀದಿ, ಮಾರಾಟ ಮತ್ತು ಕಳ್ಳ ಸಾಗಾಣೆ ಪ್ರಕರಣದಲ್ಲಿ ತೊಡಗಿರುವ ಸಂಗತಿಯನ್ನು ಮೊಹಮ್ಮದ್ ಅನೂಪ್ ಬಹಿರಂಗಗೊಳಿಸಿದ್ದ. ಅಲ್ಲದೆ ಆತ ತಾನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲೂ ಶಾಮೀಲಾಗಿರುವುದಾಗಿ ತಿಳಿಸಿ ತನಗೆ ಕೇರಳದ ಮಾಜಿ ಸಚಿವ ಕೋಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೋಡಿಯೇರಿ ಜೊತೆ ನಿಕಟ ನಂಟು ಇರುವುದಾಗಿ ತಿಳಿಸಿದ್ದ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ದುಬಾರಿ ಮೊತ್ತದ ಎಕ್ಸ್‍ಟೆಸಿ ಮಾದಕ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೊಹಮ್ಮದ್ ಅನೂಪ್ ಮತ್ತು ಆತನ ಸಹಚರರನ್ನು ಬಂಧಿಸಲಾಗಿತ್ತು.  ಇವರು ನೀಡಿದ ಸುಳಿವಿನ ಮೇರೆಗೆ ನಿನ್ನೆ ಇಡಿ ಅಧಿಕಾರಿಗಳು ಬಿನೀಶ್‍ನನ್ನು ಬಂಧಿಸಿದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನವೆಂಬರ್ 2ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು.

ನಿನ್ನೆಯಿಂದ ಬಿನೀಶ್‍ನನ್ನು ತೀವ್ರ ವಿಚಾರಣೆ ನಡೆಸಿದ್ದು ತಾನು ಮೊಹಮ್ಮದ್ ಅನೂಪ್ ಖಾತೆಗೆ ಭಾರೀ ಮೊತ್ತದ ಅಕ್ರಮ ಹಣವನ್ನು ವರ್ಗಾವಣೆ ಮಾಡಿರುವುದಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತಿಳಿಸಿದ್ದಾನೆ.  ಮೊಹಮ್ಮದ್ ಅನೂಪ್ ತನಗೆ ಬೇನಾಮಿದಾರನಾಗಿ ಕಾರ್ಯ ನಿರ್ವಹಿಸಿದ್ದ ಸಂಗತಿಯನ್ನೂ ಸಹ ಕೋಡಿಯೇರಿ ಬಾಯ್ಬಿಟ್ಟಿದ್ದಾನೆ.

ಮೊಹಮ್ಮದ್ ಅನೂಪ್ ಖಾತೆಗೆ ವರ್ಗಾವಣೆಯಾಗಿರುವ ಭಾರೀ ಮೊತ್ತದ ಅಘೋಷಿತ ಮತ್ತು ಲೆಕ್ಕವಂಚಿತ ಹಣದ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಮತ್ತಷ್ಟು ಅಕ್ರಮ, ಅವ್ಯವಹಾರಗಳು ಬೆಳಕಿಗೆ ಬರುವ ಸಾದ್ಯತೆ ಇದೆ ಎಂದು ಇಡಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments