ನಾಳೆ ಬಿನ್ನಿಪೇಟೆ ವಾರ್ಡ್ ಬೈಎಲೆಕ್ಷನ್ ರಿಸಲ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Counting
ಬೆಂಗಳೂರು, ಜೂ.19-ಬಿಬಿಎಂಪಿ ಸದಸ್ಯೆ ಮಹದೇವಮ್ಮ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಬಿನ್ನಿಪೇಟೆ ವಾರ್ಡ್‍ಗೆ ನಿನ್ನೆ ನಡೆದ ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ನಗರದ ಗೃಹ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ.  ಬಿನ್ನಿಪೇಟೆಯ 37 ಮತಕೇಂದ್ರಗಳಲ್ಲಿ ನಡೆದ ಚುನಾವಣೆಯ ಮತ ಪೆಟ್ಟಿಗೆಗಳನ್ನು ಗೃಹ ವಿಜ್ಞಾನ ಕಾಲೇಜಿನಲ್ಲಿ ಇಡಲಾಗಿದ್ದು, ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದೆ.  ಮತ ಎಣಿಕೆಗಾಗಿ ಆರು ಟೇಬಲ್‍ಗಳನ್ನು ಹಾಕಲಾಗಿದ್ದು, ಆರು ಸುತ್ತುಗಳ ಮತ ಎಣಿಕೆ ನಂತರ ಫಲಿತಾಂಶ ಹೊರಬೀಳಲಿದೆ.

ಗುರು-ಶಿಷ್ಯರ ನಡುವೆ ಫೈಟ್:
ತಿರುಪತಿ ಪ್ರವಾಸದ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾದ ಬಿಬಿಎಂಪಿಯ ಕಾಂಗ್ರೆಸ್ ಸದಸ್ಯೆ ಮಹದೇವಮ್ಮ ಅವರ ಪತಿ ಬಿ.ಟಿ.ಎಸ್.ನಾಗರಾಜ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಅವರ ಬಲಗೈ ಭಂಟರಾಗಿದ್ದರು.   ಬಿನ್ನಿಪೇಟೆ ವಾರ್ಡ್‍ನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪುತ್ರಿ ಐಶ್ವರ್ಯ ಅವರಿಗೆ ಟಿಕೆಟ್ ನೀಡುವಂತೆ ನಾಗರಾಜ್ ಅವರು ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿಕೊಂಡಿದ್ದರು.

ಆದರೆ, ಬಿಬಿಎಂಪಿ ಮಾಜಿ ಸದಸ್ಯೆ ವಿದ್ಯಾ ಅವರಿಗೆ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದ ನಂತರ ಗುರು ದಿನೇಶ್ ಗುಂಡೂರಾವ್ ವಿರುದ್ಧ ಸಿಡಿದೆದ್ದ ನಾಗರಾಜ್ ಅವರು ಏಕಾಏಕಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಆ ಪಕ್ಷದಿಂದಲೇ ತನ್ನ ಮಗಳು ಐಶ್ವರ್ಯ ಅವರಿಗೆ ಟಿಕೆಟ್ ಕೊಡಿಸಿ ಗುರುವಿನ ವಿರುದ್ಧ ತೊಡೆತಟ್ಟಿದ್ದರು.ಹೀಗಾಗಿ ಮಿತ್ರ ಪಕ್ಷಗಳಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬಿನ್ನಿಪೇಟೆ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ಬದ್ಧ ಎದುರಾಳಿಗಳಾಗಿ ಪರಿವರ್ತನೆಗೊಂಡಿದ್ದರು. ಎರಡೂ ಪಕ್ಷಗಳ ಕಾರ್ಯಕರ್ತರ ಮಾರಾಮಾರಿ ನಡುವೆಯೂ ನಿನ್ನೆ ಚುನಾವಣೆ ನಡೆದಿದ್ದು, ನಾಳೆ ಫಲಿತಾಂಶ ಹೊರಬೀಳಲಿದೆ.

ಗುರು-ಶಿಷ್ಯರ ನಡುವಿನ ಫೈಟ್ ನಡುವೆ ಬಿನ್ನಿಪೇಟೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿತ್ತು. ಬಿಜೆಪಿಯಿಂದ ಅಖಾಡಕ್ಕಿಳಿದಿದ್ದ ಚಾಮುಂಡೇಶ್ವರಿ ಅವರು ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಸಡ್ಡು ಹೊಡೆಯುವ ಸಾಧ್ಯತೆಗಳಿವೆ. ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿರುವ ಬಿನ್ನಿಪೇಟೆಯನ್ನು ಯಾವುದೇ ಕಾರಣಕ್ಕೂ ಜೆಡಿಎಸ್ ಮತ್ತು ಬಿಜೆಪಿಗೆ ಬಿಟ್ಟುಕೊಡಬಾರದು ಎಂಬ ಉದ್ದೇಶದಿಂದ ದಿನೇಶ್ ಗುಂಡೂರಾವ್ ಅವರು ಕೈ ಅಭ್ಯರ್ಥಿ ವಿದ್ಯಾ ಅವರನ್ನು ಗೆಲ್ಲಿಸಿಕೊಳ್ಳಲು ತಂತ್ರ ರೂಪಿಸಿದ್ದರು.

ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನನಾಯಕಿ ಎಂದು ಗುರುತಿಸಿಕೊಂಡಿದ್ದ ಮಹದೇವಮ್ಮ ಅವರ ಸಾವಿನ ಅನುಕಂಪ ತನ್ನ ಮಗಳಿಗೆ ಮತಗಳಾಗಿ ಪರಿವರ್ತನೆಗೊಂಡು ಐಶ್ವರ್ಯ ಅವರು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ನಾಗರಾಜ್.

Facebook Comments

Sri Raghav

Admin