ರಣಾಂಗಣವಾದ ಬಿನ್ನಿಪೇಟೆ ವಾರ್ಡ್, ಮತದಾನಕ್ಕೆ ಮನೆ ಬಿಟ್ಟು ಹೊರಬರದ ಜನ

ಈ ಸುದ್ದಿಯನ್ನು ಶೇರ್ ಮಾಡಿ

 

ಬೆಂಗಳೂರು, ಜೂ.18- ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆ ಅಖಾಡ ರಣಾಂಗಣವಾಗಿ ಪರಿವರ್ತನೆಗೊಂಡಿದೆ. ಮೂರು ಪಕ್ಷದ ಕಾರ್ಯಕರ್ತರ ನಡುವೆ ಬಿಗ್‍ಫೈಟ್ ನಡೆದ ಹಿನ್ನೆಲೆಯಲ್ಲಿ ಮತದಾರರು ಮತದಾನ ಮಾಡಲು ಮನೆ ಬಿಟ್ಟು ಹೊರ ಬರುತ್ತಿಲ್ಲ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾದರೂ 9 ಗಂಟೆ ವೇಳೆಗೆ 2.37ರಷ್ಟು ಮಾತ್ರ ಮತದಾನವಾಗಿತ್ತು. ಬೆಳಗ್ಗೆ 10 ಗಂಟೆಯ ವೇಳೆಗೆ ಶೇ.5ರಷ್ಟು ಮಾತ್ರ ಮತಗಳು ಚಲಾವಣೆಯಾಗಿದ್ದವು.

ಮಾರಾಮಾರಿ: ಸರ್ಕಾರದಲ್ಲಿ ಮಿತ್ರ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿನ್ನಿಪೇಟೆ ವಾರ್ಡ್‍ನಲ್ಲಿ ವೈರಿಗಳಾಗಿ ಮಾರ್ಪಟ್ಟಿವೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕೆ.ಪಿ. ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನ ಪಾಳ್ಯದ ದೇವಸ್ಥಾನ ಸಮೀಪ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಹಲ್ಲೆಯಿಂದ ಸುರೇಶ್ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದ್ದು , ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಮೇಲೆ ವಿನಾ ಕಾರಣ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಸುರೇಶ್ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Binnipete-01

ದಿನೇಶ್ ಗುಂಡೂರಾವ್ ಭೇಟಿ:
ಜೆಡಿಎಸ್ ಕಾರ್ಯಕರ್ತರಿಂದ ತೀವ್ರವಾಗಿ ಗಾಯಗೊಂಡಿರುವ ಸುರೇಶ್ ಅವರ ನಿವಾಸಕ್ಕೆ ಗಾಂಧಿ ನಗರ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯ ಕರ್ತರ ನಡುವೆ ಮಾರಾಮಾರಿ ನಡೆದ ಹಿನ್ನೆಲೆಯಲ್ಲಿ ವಾರ್ಡ್‍ನಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಸುರೇಶ್ ಮೇಲಿನ ಹಲ್ಲೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮಧ್ಯೆ ಎಸ್.ಎಂ.ಸ್ಕೂಲ್ ಮತಗಟ್ಟೆ ಬಳಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆಯೂ ಗಲಾಟೆ ನಡೆದಿದೆ. ಬೈಕ್‍ನಲ್ಲಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತ ಸುಧಾಕರ್ ಎಂಬಾತನ ಮೇಲೆ ಜೆಡಿಎಸ್ ಅಭ್ಯರ್ಥಿಯ ತಂದೆ ನಾಗರಾಜ್ ಮತ್ತಿತರರು ಏಕಾಏಕಿ ಹಲ್ಲೆ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಉದ್ರಿಕ್ತರನ್ನು ಸಮಾಧಾನಗೊಳಿಸುವಲ್ಲಿ ಯಶಸ್ವಿ ಯಾದ ನಂತರ ಮತದಾನ ಎಂದಿನಂತೆ ಮುಂದುವರೆಯಿತು.

Binnipete-02

ಐಶ್ವರ್ಯ ಮತ ಚಲಾವಣೆ:
ಕಾಂಗ್ರೆಸ್‍ನಿಂದ ಟಿಕೆಟ್ ವಂಚಿತರಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಐಶ್ವರ್ಯ ಅವರು ಬಿನ್ನಿಪೇಟೆ ವಾರ್ಡ್‍ನ ಎಸ್. ಎಂ.ಆಂಗ್ಲ ಶಾಲೆಯಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ತಾಯಿ ಈ ಕ್ಷೇತ್ರಕ್ಕೆ ಮಾಡಿರುವ ಕೆಲಸದ ಆಧಾರದ ಮೇಲೆ ಈ ಬಾರಿ ಇಲ್ಲಿನ ಮತದಾರರು ನನ್ನನ್ನು ಆಶೀ ರ್ವದಿಸಲಿದ್ದಾರೆ ಎಂದು ಐಶ್ವರ್ಯ ವಿಶ್ವಾಸ ವ್ಯಕ್ತಪಡಿಸಿದರು.

ಆದರೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿದ್ಯಾ ಶಶಿಕುಮಾರ್ ಅವರ ಮತ ಕೇಂದ್ರ ವಾರ್ಡ್ 122ಕ್ಕೆ ಸೇರುವುದರಿಂದ ಅವರು ಮತದಾನ ಮಾಡಲು ಸಾಧ್ಯವಾಗಲಿಲ್ಲ. ಒಟ್ಟಾರೆ ಬಿನ್ನಿಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಮಾರಾಮಾರಿ ಹಿನ್ನೆಲೆಯಲ್ಲಿ ನೀರಸ ಮತದಾನವಾಗಿದೆ.

Facebook Comments

Sri Raghav

Admin