ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರಿಗೆ ತಕ್ಕ ಶಾಸ್ತಿ : ಜ.ರಾವತ್ ಖಡಕ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.16- ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ದೇಶಗಳ ವಿರುದ್ಧ ಪ್ರಬಲ ಜಾಗತಿಕ ಕ್ರಮ ಕೈಗೊಳ್ಳಬೇಕೆಂದು ಭಾರತದ ತ್ರಿ ಸೇನಾಪಡೆಗಳ ಮಹಾ ದಂಡನಾಯಕ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಆಗ್ರಹಿಸಿದ್ದಾರೆ. ಈ ಮೂಲಕ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಆಗಲಿದೆ ಎಂಬ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಇಂದು ನಡೆದ ಬಹುರಾಷ್ಟ್ರಗಳ ವೇದಿಕೆಯಾದ ರೈಸಿನಾ ಸಮಾವೇಶದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಸಂಘಟನೆಗಳು ಮತ್ತು ಉಗ್ರಗಾಮಿಗಳಿಗೆ ಸುರಕ್ಷಿತ ಆಶ್ರಯ ನೀಡಿ ವಿಧ್ವಂಸಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಬಿಸಿ ಮುಟ್ಟಿಸಿದರು.  ಭಯೋತ್ಪಾದನೆ ಪ್ರಾಯೋಜಕತ್ವ ನೀಡುತ್ತಿರುವ ದೇಶಗಳನ್ನು ರಾಜತಾಂತ್ರಿಕವಾಗಿ ಪರಿತ್ಯಕ್ತಗೊಳಿಸಿ ಮೂಲೆಗುಂಪು ಮಾಡಬೇಕು ಎಂದು ವಿವಿಧ ರಾಷ್ಟ್ರಗಳಿಗೆ ಸಿಡಿಎಸ್ ಜನರಲ್ ರಾವತ್ ಸಲಹೆ ಮಾಡಿದರು.

9/11ರಂದು ನಡೆದ ಭಯೋತ್ಪಾದಕರ ದಾಳಿ ನಂತರ ಅಮೆರಿಕ ಉಗ್ರಗಾಮಿಗಳ ವಿರುದ್ಧ ಕೈಗೊಂಡ ಕಠಿಣ ಕ್ರಮಗಳ ಮಾದರಿಯಲ್ಲೇ ಭಯೋತ್ಪಾದನೆ ದಿಟ್ಟ ಉತ್ತರ ನೀಡಬೇಕಾದ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು.  ಇಂಥ ದೇಶಗಳು ಎಲ್ಲಿಯವರೆಗೆ ಭಯೋತ್ಪಾದನೆ ಕುಮ್ಮಕ್ಕು ನೀಡುತ್ತ ಪೋಷಿಸಿಕೊಂಡು ಬರುತ್ತದೆಯೇ ಅಲ್ಲಿಯ ತನಕ ನಾವು ಈ ಪಿಡುಗಿನೊಂದಿಗೆ ಬದುಕಬೇಕಾಗುತ್ತದೆ.

ಆದ ಕಾರಣ ನಾನು ಗೂಳಿ ಕೊಂಬುಗಳಂತೆ ಇದರ ವಿರುದ್ಧ ಕಠಿಣ ಕ್ರಮ ಕೈಗೊಂಡು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆಯಬೇಕೆಂದು ಅವರು ಹೇಳಿದರು. ಭಯೋತ್ಪಾದನೆ ವಿರುದ್ಧದ ಹೋರಾಟ ಮುಗಿಯುತ್ತದೆ ಎಂದು ನಾವು ಭಾವಿಸಿದರೆ, ಅದು ತಪ್ಪಾಗುತ್ತದೆ. ಈ ಪೀಡೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ತನಕ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಮೂರು ಸೇನಾ ಪಡೆಗಳ ಮಹಾ ದಂಡನಾಯಕರು ಹೇಳಿದರು.

ಒಂದೆಡೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ದೇಶಗಳು ಉಗ್ರಗಾಮಿ ಜಾಲಗಳ ವಿರುದ್ಧ ಜಾಗತಿಕ ಹೋರಾಟದಲ್ಲಿ ಭಾಗವಹಿಸಬಾರದು ಮತ್ತು ಇದರಲ್ಲಿ ಪಾಲ್ಗೊಳ್ಳಲು ಆ ದೇಶಗಳಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಜನರಲ್ ರಾವತ್ ಹೇಳಿದರು.

Facebook Comments