ಇನ್ನು ಮುಂದೆ ಜನನ, ಮರಣ ಪ್ರಮಾಣಪತ್ರ ನೀಡುವ ಹೊಣೆ ಪಿಡಿಒಗಳಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.24- ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಪಂ ಮೇಲ್ವಿಚಾರಣೆ ಅಷ್ಟೇ ಅಲ್ಲದೇ ಇನ್ನು ಮುಂದೆ ಜನನ ಮತ್ತು ಮರಣ ಪ್ರಮಾಣಪತ್ರ ವಿತರಣಾಧಿಕಾರಿಗಳಾಗಿಯೂ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿಗಳು ಈ ಕುರಿತು ಆದೇಶವೊಂದನ್ನು ಹೊರಡಿಸಿದ್ದು, ಇದುವರೆಗೆ ಗ್ರಾಮ ಮಟ್ಟದಲ್ಲಿಗ್ರಾಮ ಲೆಕ್ಕಾಧಿಕಾರಿಗಳಿಗೆ ಮಾತ್ರ ಈ ಪ್ರಮಾಣಪತ್ರ ನೀಡುವ ಅಧಿಕಾರವಿತ್ತು. ಸರಕಾರದ ಈ ಹೊಸ ಆದೇಶದನ್ವಯ ಪಿಡಿಒಗಳು ಪ್ರಮಾಣಪತ್ರ ನೀಡುವ ಅಧಿಕಾರ ಹೊಂದಿದಂತಾಗಿದೆ.

ಈ ಮೊದಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಮಾತ್ರ ಪ್ರಮಾಣಪತ್ರ ನೀಡುವ ಅಧಿಕಾರ ಇದ್ದುದರಿಂದ ಅವರು ಅನ್ಯ ಕರ್ತವ್ಯಕ್ಕಾಗಿ ಬೇರೆಡೆ ತೆರಳಿದರೆ ಬರುವವರೆಗೆ ಪ್ರಮಾಣಪತ್ರ ನೀಡುವವರು ಕಚೇರಿಯಲ್ಲಿಯಾರು ಇರುತ್ತಿರಲಿಲ್ಲ.

ಹೀಗಾಗಿ ಸಾರ್ವಜನಿಕರು ಜನನ, ಮರಣ ಪ್ರಮಾಣಪತ್ರಕ್ಕಾಗಿ ಅಲೆದಾಡಬೇಕಿತ್ತು. ಈ ಬಗ್ಗೆ ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳಿದ್ದವು.

ಇದನ್ನು ಮನಗಂಡು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕಾರ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಜೂನ್ 24 ರಂದು ರಾಜ್ಯ ಸರಕಾರಕ್ಕೆ ಪತ್ರ ಬರೆದು, ಪಿಡಿಒಗಳನ್ನು ಜನನ, ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಯಾಗಿ ನೇಮಿಸಲು ಶಿಫಾರಸು ಮಾಡಿದ್ದರು.

ಆ ಪತ್ರದ ಅನ್ವಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಪ್ರಮಾಣ ಪತ್ರಗಳ ವಿತರಣಾ ಧಿಕಾರಿಗಳನ್ನಾಗಿ ನೇಮಿಸಿದೆಯಲ್ಲದೇ, ರಾಷ್ಟ್ರೀಯ ಜನನ ಮರಣ ಕಾಯ್ದೆ 1969ರ ಆದಾಯ 5ರ ಪ್ರಕರಣ 27 ರಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಇ-ಜನ್ಮ ತಂತ್ರಾಂಶದಲ್ಲಿಡಿಜಿಟಲ್ ಸಹಿ ಮುಖಾಂತರ ಜನನ ಮತ್ತು ಮರಣ ಪ್ರಮಾಣಪತ್ರಗಳ ವಿತರಿಸಲು ಆದೇಶದಲ್ಲಿಸೂಚಿಸಿದೆ.

ಗ್ರಾಮ ಪಂಚಾಯಿತಿ, ಪಿಡಿಒಗಳು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸರಕಾರವು ಆಗಾಗ ನಿಗದಿ ಪಡಿಸಿದ ದರಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಸಾರ್ವಜನಿಕರಿಗೆ ಈ ಸೇವೆಯನ್ನು ನೀಡಬೇಕಲ್ಲದೇ, ಹಾಗೆ ಸಂಗ್ರಹವಾಗುವ ಶುಲ್ಕವನ್ನು ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಬೇಕು ಎಂದು ಸರಕಾರ ಸ್ಪಷ್ಟ ನಿರ್ದೇಶನ ನೀಡಿದೆ.

ಇದೀಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿಇಬ್ಬರು ಅಧಿಕಾರಿಗಳಿಗೆ ಜನನ ಮತ್ತು ಮರಣ ಪ್ರಮಾಣಪತ್ರ ನೀಡುವ ಅಧಿಕಾರ ದೊರೆತಿದ್ದರಿಂದ ಸಾರ್ವಜನಿಕರು ಅನಗತ್ಯ ಅಲೆದಾಟ ತಪ್ಪಿಸಿದಂತಾಗಿದೆ.

ಅಲ್ಲದೇ ತೀವ್ರಗತಿಯಲ್ಲಿಪ್ರಮಾಣಪತ್ರ ದೊರೆಯಲು ಸಾಧ್ಯವಾದಂತಾಗಿದೆ. ಸರಕಾರದ ಈ ನಿರ್ಧಾರದಿಂದ ಜನರಿಗೂ ತುಂಬಾ ಅನುಕೂಲಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Facebook Comments

Sri Raghav

Admin