ಬರ್ತ್‍ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಅಪಾರ್ಟ್‍ಮೆಂಟ್‍ನ 10 ಮಂದಿಗೆ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30- ರಾಜ್ಯದಲ್ಲಿ ಕೊರೊನಾ ಮೂರನೆ ಅಲೆ ಭೀತಿಯ ಬೆನ್ನಲ್ಲೇ ನಗರದ ಅಪಾರ್ಟ್‍ಮೆಂಟ್‍ವೊಂದರಲ್ಲಿ 10 ಜನರಿಗೆ ಕೊರೊನಾ ಸೋಂಕು ದೃಢಪಟ್ಟು ಆತಂಕ ಸೃಷ್ಟಿಸಿದೆ. ಅಪಾರ್ಟ್‍ಮೆಂಟ್‍ನಲ್ಲಿ ಆಯೋಜಿಸಿದ್ದ ಬರ್ತ್‍ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 10 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ಅಪಾರ್ಟ್‍ಮೆಂಟ್‍ಅನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.

ಬರ್ತ್‍ಡೇ ಪಾರ್ಟಿಗೆ ಬಂದಿದ್ದ ಸಂಬಂಕರ ಮನೆಗಳನ್ನೂ ಸೀಲ್‍ಡೌನ್ ಮಾಡಲಾಗಿದ್ದು, ಸೋಂಕಿತ ಸಂಪರ್ಕಿತರ ಮೇಲೂ ತೀವ್ರ ನಿಗಾ ವಹಿಸಲಾಗಿದೆ. ಧಾರವಾಡದ ಎಸ್‍ಬಿಎಂ ಕಾಲೇಜಿನಲ್ಲಿ ಗೆಟ್ ಟುಗೆದರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ಕಾಲೇಜು ಹಾಸ್ಟೆಲ್‍ಅನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿತ್ತು. ಇದೀಗ ಬೆಂಗಳೂರಿನ ಅಪಾರ್ಟ್‍ಮೆಂಟ್‍ನಲ್ಲಿ 10 ಮಂದಿಗೆ ಸೋಂಕು ದೃಢಪಟ್ಟಿದೆ.

ಕೋರಮಂಗಲದ ರಹೇಜಾ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅಪಾರ್ಟ್‍ಮೆಂಟ್‍ಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬರ್ತ್‍ಡೇ ಪಾರ್ಟಿಗೆ ಬಂದಿದ್ದ ಎಲ್ಲರ ಗಂಟಲು ದ್ರವ ಪಡೆದು ಲ್ಯಾಬ್‍ಗೆ ಕಳುಹಿಸಿದ್ದಾರೆ.

16 ಜನ ಸೇರಿ ಬರ್ತ್‍ಡೇ ಪಾರ್ಟಿ ಮಾಡಿದ್ದರು. ಇದರಲ್ಲಿ 10 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಎಲ್ಲರ ಗಂಟಲು ದ್ರವ ಪಡೆದ ಬಳಿಕ ಅಪಾರ್ಟ್‍ಮೆಂಟ್‍ನ ಫ್ಲಾಟ್‍ಅನ್ನು ಸಿಬ್ಬಂದಿ ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತನೆ ಮಾಡಿದ್ದಾರೆ. ಎಲ್ಲರ ಸ್ಯಾಂಪಲ್‍ಗಳನ್ನು ಜಿನೋಮಾ ಸೀಕ್ವೆನ್ಸಿಗೆ ಕಳುಹಿಸಲಾಗಿದೆ.

Facebook Comments