ಬಿಟ್ ಕಾಯಿನ್ ಪ್ರಕರಣ : ಪ್ರಮುಖ ತೀರ್ಮಾನ ಕೈಗೊಳ್ಳಲು ಸಮನ್ವಯ ಸಮಿತಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ಬಿಟ್ ಕಾಯಿನ್ ಪ್ರಕರಣದಲ್ಲಿ ತೀವ್ರ ಮುಜುಗರಕ್ಕೆ ಸಿಲುಕಿರುವ ಕಾರಣ ಸರ್ಕಾರ ಮತ್ತು ಪಕ್ಷದ ನಡುವೆ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಸಮನ್ವಯ ಸಮಿತಿ ರಚಿಸಲು ಬಿಜೆಪಿ ಮುಂದಾಗಿದೆ.ಈ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾವುದೇ ರೀತಿಯ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳದೆ ಪರೋಕ್ಷವಾಗಿ ಮೂಗು ದಾರ ಹಾಕುವ ಉದ್ದೇಶ ಇದರಲ್ಲಿ ಅಡಗಿದೆ.

ಸರ್ಕಾರ ಮತ್ತು ಪಕ್ಷಕ್ಕೆ ಸಂಬಂಧಿಸಿದಂತೆ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಸಮನ್ವಯ ಸಮಿತಿಯ ಪ್ರಮುಖರ ಜತೆ ಚರ್ಚಿಸಿದ ನಂತರವೇ ಸಿಎಂ ನಿರ್ಧಾರಗಳನ್ನು ಪ್ರಕಟಿಸಬೇಕು.

ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಹಾಗೂ ಪಕ್ಷದ ನಡುವೆ ಅಸಮಾಧಾನ ಉಂಟಾದಾಗ ಇದನ್ನು ಸರಿದೂಗಿಸಲು ಸಮನ್ವಯ ಸಮಿತಿ ರಚಿಸಲಾಗಿತ್ತು. ಈಗ ಇದೇ ಮಾದರಿಯನ್ನು ಬಿಜೆಪಿ ಮಾಡಲು ಮುಂದಾಗಿದೆ.

ಈ ಸಮನ್ವಯ ಸಮಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟಿಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಆರ್‍ಎಸ್‍ಎಸ್, ಪಕ್ಷದ ಪ್ರಮುಖರು ಹಾಗೂ ಸರ್ಕಾರದ ಕೆಲವು ಹಿರಿಯ ಸಚಿವರು ಇರುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಇವರ ಜತೆ ಚರ್ಚಿಸಿದ ನಂತರವೇ ಅಂತಿಮಗೊಳಿಸಬೇಕು.

ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ, ಬಿಬಿಎಂಪಿ ಚುನಾವಣೆ ಸೇರಿದಂತೆ ಭವಿಷ್ಯದಲ್ಲಿ ಎದುರಾಗಬಹುದಾದ ಚುನಾವಣೆಗಳನ್ನು ಗಮನಿಸಿ ಹೈಕಮಾಂಡ್ ಈ ತೀರ್ಮಾನಕ್ಕೆ ಬಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

2023ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಬಿಜೆಪಿ ವರಿಷ್ಠರು ಸಿಎಂ ಬೊಮ್ಮಾಯಿ ಅವರನ್ನು ಹಂತ ಹಂತವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಸಾಕಷ್ಟು ಮುಜುಗರಕ್ಕೆ ಸಿಲುಕಿರುವ ಹೈಕಮಾಂಡ್ ನಾಯಕರು ಸಂಘದ ಅನುಮತಿ ಇಲ್ಲದೆ ಯಾವುದೂ ಅಂತಿಮವಾಗಬಾರದೆಂಬ ಸಂದೇಶ ರವಾನಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ ನಂತರ ಪ್ರಾರಂಭದಲ್ಲಿ ನಮ್ಮ ಆಯ್ಕೆ ಸರಿ ಇದೆ ಎಂಬ ನಿರೀಕ್ಷೆ ವರಿಷ್ಠರಲ್ಲಿತ್ತು. ಆದರೆ, ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ಹಾನಗಲ್ ಉಪಚುನಾವಣೆ ಹಿನ್ನಡೆ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿತು.

ಇದು ಮಾಸುವ ಮುನ್ನವೇ ಇದೀಗ ರಾಜ್ಯ ರಾಜಕಾರಣದಲ್ಲಿ ಬಿಟ್ ಕಾಯಿನ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿಯ ಇಬ್ಬರು ಪ್ರಭಾವಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಇದೆ.

ಇದು ಸ್ವತಃ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವರಿಗೆ ಮುಜುಗರ ತಂದಿದೆ. ಇದರಿಂದ ಪಾರಾಗಲು ಮುಂದಾಗಿರುವ ವರಿಷ್ಠರು ಸಮನ್ವಯ ಸಮಿತಿ ರಚಿಸಿ ಸಿಎಂಗೆ ಪರೋಕ್ಷವಾಗಿ ಕಡಿವಾಣ ಹಾಕಲು ಮುಂದಾಗಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

ಈವರೆಗೂ ಬೊಮ್ಮಾಯಿ ಅವರು ಯಾವುದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲವಾದರೂ ಪಕ್ಷದ ನಿಷ್ಠರನ್ನು ಕಡೆಗಣಿಸಿ ವಲಸಿಗರಿಗೆ ಮಣೆ ಹಾಕುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿದೆ.

ಪಕ್ಷಕ್ಕೆ ದುಡಿದವರನ್ನು ಕಡೆಗಣಿಸಿ ಅಧಿಕಾರದ ಆಸೆಗಾಗಿ ಬಂದವರಿಗೆ ಆದ್ಯತೆ ಸಿಗುತ್ತದೆ. ಶಾಸಕರ ಅನುದಾನ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಮತ್ತಿತರ ವಿಷಯಗಳಲ್ಲಿ ಪಕ್ಷದ ಮೂಲ ಶಾಸಕರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿಲ್ಲ. ಇದನ್ನು ವರಿಷ್ಠರು ಗಮನಿಸಬೇಕು ಎಂದು ಪಕ್ಷದ ಮೂಲ ಶಾಸಕರು ಒತ್ತಾಯ ಮಾಡಿದ್ದರು.

ಈ ಎಲ್ಲವನ್ನೂ ಅಳೆದು ತೂಗಿರುವ ವರಿಷ್ಠರು ಸಮನ್ವಯ ಸಮಿತಿ ರಚನೆ ಮಾಡುವ ಮೂಲಕ ಸರ್ಕಾರ ಹಾಗೂ ಪಕ್ಷದ ನಡುವೆ ಕಂದಕ ಉಂಟಾಗದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದಾರೆ.

Facebook Comments

Sri Raghav

Admin