ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬೇಗುದಿ, ಮಿತ್ರಮಂಡಳಿಯಿಂದ ಸಭೆ ಮೇಲೆ ಸಭೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.28- ಸಚಿವ ಸಂಪುಟ ವಿಸ್ತರಣೆ ವಿಳಂಬ, ಪುನಾರಚನೆಗೆ ವರಿಷ್ಠರಿಂದ ಸಿಗದ ಅನುಮತಿ, ನಾಯಕತ್ವ ಗೊಂದಲ, ನಿಗಮಮಂಡಳಿ ನೇಮಕಾತಿಯಲ್ಲಿ ಕಡೆಗಣನೆ ಸೇರಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದಿದ್ದು, ಬಂಡಾಯದ ಬೇಗುದಿ ಜೋರಾಗಿದೆ.  ಮತ್ತೊಂದೆಡೆ ತನ್ನಿಂದಲೇ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಸರ್ಕಾರ ರಚನೆಗೆ ಕಾರಣನಾದೆನೆಂದು ಹೇಳಿ ಬಿಂಬಿಸಿಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ನಡವಳಿಕೆ ವಿರುದ್ಧ ಮಿತ್ರಮಂಡಳಿಯವರೇ ತಿರುಗಿಬಿದ್ದಿದ್ದಾರೆ.

ಈ ಎಲ್ಲ ಬೆಳವಣಿಗೆಗಳಿಂದ ಕಮಲ ಪಕ್ಷ ವಿಲವಿಲ ಎನ್ನುವಂತಾಗಿದ್ದು, ವರಿಷ್ಠರ ಮಧ್ಯಪ್ರವೇಶವಿಲ್ಲದೆ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ.ಈ ಬೆಳವಣಿಗೆ ತೀರ ಸಂಚಲನ ಸೃಷ್ಟಿಸಿದ್ದು, ಆಡಳಿತಾರೂಢ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರ ಮಾಡಿದೆ.

ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‍ಗೆ ಮಂತ್ರಿ ಸ್ಥಾನ ಕೊಡಿಸಲು ಹಠಕ್ಕೆ ಬಿದ್ದಿರುವ ರಮೇಶ್ ಜಾರಕಿಹೊಳಿ ವಿರುದ್ಧ ಮಿತ್ರಮಂಡಳಿಯ ಶಾಸಕರೇ ತಿರುಗಿಬಿದಿದ್ದಾರೆ.ಸಚಿವರಾದ ಎಸ್.ಟಿ.ಸೋಮಶೇಖರ್, ಆನಂದ್ ಸಿಂಗ್, ಭೈರತಿ ಬಸವರಾಜ್, ಗೋಪಾಲಯ್ಯ, ಶಿವರಾಮ್ ಹೆಬ್ಬಾರ್, ನಾರಾಯಣಗೌಡ, ಶಾಸಕ ಮುನಿರತ್ನ, ವಿಧಾನಪರಿಷತ್ ಸದಸ್ಯ ಮುನಿರತ್ನ ಸೇರಿದಂತೆ ಮತ್ತಿತರರು ಖಾಸಗಿ ಹೋಟೆಲ್‍ನಲ್ಲಿ ತಡರಾತ್ರಿವರೆಗೂ ಸಭೆ ನಡೆಸಿ ಬಿಜೆಪಿಗೆ ಬಂದಿರುವವರಿಗೆ ಮೊದಲು ಮಂತ್ರಿ ಸ್ಥಾನ ನೀಡಬೇಕೆ ಹೊರತು ಚುನಾವಣೆಯಲ್ಲಿ ಸೋತವರಿಗಲ್ಲ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ನಾವು ಯೋಗೇಶ್ವರ್ ಅಥವಾ ರಮೇಶ್ ಜಾರಕಿಹೊಳಿ ನೋಡಿಕೊಂಡು ಬಿಜೆಪಿಗೆ ಬಂದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ನಮ್ಮನ್ನು ಕಡೆಗಣಿಸಿದ್ದರಿಂದ ಅನಿವಾರ್ಯವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ಗೆದ್ದಿದ್ದೇವೆ.  ಯಾವುದೋ ಒಬ್ಬ ವ್ಯಕ್ತಿಯ ಕಾರಣಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ. ಮಂತ್ರಿ ಸ್ಥಾನ ತ್ಯಾಗ ಮಾಡಿದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರುಗಳಿಗೆ ಮೊದಲು ಸಚಿವ ಸ್ಥಾನ ಕೊಡಿಸಬೇಕು.

ಚುನಾವಣೆಯಲ್ಲಿ ಪರಾಭವಗೊಂಡಿದ್ದ ಯೋಗೇಶ್ವರ್‍ಗೆ ವಿರೋಧದ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಪರಿಷತ್‍ಗೆ ನಾಮಕಾರಣ ಮಾಡಿದ್ದಾರೆ. ಅವರನ್ನು ಮಂತ್ರಿ ಮಾಡುವಂತೆ ಪಟ್ಟು ಹಿಡಿಯುವುದು ಸರಿಯಲ್ಲ. ಸಾಧ್ಯವಾದರೆ ನಾವು ಕೂಡ ದೆಹಲಿ ವರಿಷ್ಠರನ್ನು ಭೇಟಿಯಾಗೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

# ಅಸಮಾಧಾನಕ್ಕೆ ಕಾರಣವೇನು?:
ಅಷ್ಟಕ್ಕೂ ಮಿತ್ರ ಮಂಡಳಿಯಲ್ಲಿ ಭಿನ್ನಮತ ಮೂಡಲು ಕಾರಣ ಇತ್ತೀಚೆಗೆ ರಮೇಶ್ ಜಾರಕಿಹೊಳಿ ಬಿಜೆಪಿಯಲ್ಲಿ ಪ್ರಬಲರಾಗಿ ಹೊರಹೊಮ್ಮುತ್ತಿರುವುದು ಹಾಗೂ ನನ್ನಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದ್ದು ಎನ್ನುತ್ತಿರುವುದು ಜೊತೆಗೆ ಪದೇ ಪದೇ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುತ್ತಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿ, ಯಾರನ್ನೂ ಸಂಪರ್ಕ ಮಾಡದೆ ನೇರವಾಗಿ ದೆಹಲಿ ನಾಯಕರನ್ನು ಭೇಟಿಯಾಗುತ್ತಿರುವುದಕ್ಕೆ ಮೂಲ ಬಿಜೆಪಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.  ರಾಜೀನಾಮೆ ನೀಡಿದ ಶಾಸಕರಲ್ಲಿ ರಮೇಶ್ ಜಾರಕಿಹೊಳಿ ಒಬ್ಬರು. ನಾವು ಎಲ್ಲರೂ ಒಟ್ಟಾಗಿ ಕುಳಿತು ಚರ್ಚೆ ಮಾಡಿ ತೀರ್ಮಾನ ಮಾಡಿದ್ದೆವು. ಆದರೆ ಜಾರಕಿಹೊಳಿ ಮಾತ್ರ ನಮ್ಮ ನಾಯಕತ್ವದಲ್ಲೇ ಎಲ್ಲರೂ ರಾಜೀನಾಮೆ ನೀಡಿದ್ದಾರೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮುಂದೆ ಇಂತಹ ಘಟನೆಗಳು ಪದೇ ಪದೇ ಮರುಕರುಳಿಸಿದರೆ ನಾವು ಕೂಡ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗೋಣ. ಆರ್.ಶಂಕರ್, ಎಂಟಿಬಿ ನಾಗರಾಜ್, ಮುನಿರತ್ನ, ಎಚ್.ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ಕೊಡಿಸುವುದು ನಮ್ಮ ಕರ್ತವ್ಯ. ಇದಕ್ಕಾಗಿ ರಮೇಶ್ ಜಾರಕಿಹೊಳಿಯನ್ನು ನಂಬಿಕೊಳ್ಳಬೇಕಾದ ಅಗತ್ಯವಿಲ್ಲ ಎಂಬ ಅಭಿಪ್ರಾಯವ ಸಭೆಯಲ್ಲಿ ವ್ಯಕ್ತವಾಗಿದೆ.

ಇದೇ ವೇಳೆ ಸಭೆಯಲ್ಲಿ ಕೆಲವರು ನಮ್ಮ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ಕೊಡುತ್ತಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನಮ್ಮಿಂದಲೇ ಸರ್ಕಾರ ಬಂದಿದೆ ಎಂದು ನಾವು ಎಲ್ಲಿಯೂ ಹೇಳಿಲ್ಲ. ಆದರೆ ಕೆಲವರು ಸರ್ಕಾರದಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸಚಿವರಾಗಿ ನಮ್ಮ ಇತಿಮಿತಿಯಲ್ಲೇ ಕೆಲಸ ಮಾಡುತ್ತಿದ್ದೇವೆ. ಪಕ್ಷ ಸೂಚಿಸಿದ ನಿರ್ದೇಶನಗಳನ್ನು ಪಾಲಿಸುತ್ತಿದ್ದೇವೆ.

ವಿನಾಕಾರಣ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬಾರದು. ಈ ಎಲ್ಲ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತರಬೇಕೆಂಬ ತೀರ್ಮಾನವೂ ಸಭೆಯಲ್ಲಿ ವ್ಯಕ್ತವಾಗಿದೆ.

ಒಟ್ಟಿನಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ಉಂಟಾಗಿರುವ ಬೆಳವಣಿಗೆಗಳು ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದ್ದು, ವರಿಷ್ಠರು ಮಧ್ಯಪ್ರವೇಶಿಸುವರೇ ಅಥವಾ ಇನ್ನಷ್ಟು ದಿನ ಕಾದುನೋಡುತ್ತಾರೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

Facebook Comments