ಜಿದ್ದಾಜಿದ್ದಿನ ಉಪಚುನಾವಣೆಯಲ್ಲಿ ಬಿಜೆಪಿಗೆ ಒಳಏಟಿನ ಭೀತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8- ಜಿದ್ದಾಜಿದ್ದಿನಿಂದ ಕೂಡಿರುವ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಬಂಡಾಯದ ಭೀತಿ ಎದುರಾಗಿದೆ. ಇದೇ 17ರಂದು ಒಂದು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಒಳಏಟಿನ ಭೀತಿಯನ್ನು ಎದುರಿಸುತ್ತಿದ್ದು, ಅಭ್ಯರ್ಥಿಗಳ ಗೆಲುವಿಗೆ ಮುಳುವಾಗಲಿದೆಯೇ ಎಂಬ ಆತಂಕ ಕಾಡುತ್ತಿದೆ.

ಬೆಳಗಾವಿ ಲೋಕಸಭೆ, ಬಸವ ಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ. ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳ ಸವಾಲಿಗಿಂತ ಹೆಚ್ಚಾಗಿ ಪಕ್ಷದೊಳಗೆ ಎದ್ದಿರುವ ಅಸಮಾಧಾನದ ಕೂಗನ್ನು ಹತ್ತಿಕ್ಕುವುದೇ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಮೂಲಗಳು ಹೇಳುತ್ತಿವೆ. ಬೆಳಗಾವಿಯಲ್ಲಿ ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಪತ್ನಿಗೆ ಟಿಕೆಟ್ ನೀಡಿದ್ದು, ಬಹುತೇಕ ಎಲ್ಲ ರಾಜ್ಯಮಟ್ಟದ ಸಚಿವರು ಪ್ರಚಾರದಲ್ಲಿ ತೊಡಗಿದ್ದಾರೆ.

ಆದರೆ ಈ ಸೀಟಿನ ಮೇಲೆ ಕಣ್ಣಿಟ್ಟಿದ್ದ ಮತ್ತು ಟಿಕೆಟ್ ಸಿಗುವ ಬಗ್ಗೆ ಖಚಿತತೆ ಇದ್ದ ಆಕಾಂಕ್ಷಿಗಳೂ ಸೇರಿದಂತೆ ದೊಡ್ಡ ಸಂಖ್ಯೆಯ ಸ್ಥಳೀಯ ಮುಖಂಡರು ನೇರವಾಗಿ ಮತಬೇಟೆಗೆ ಇಳಿಯದಿರುವುದು ಬಿಜೆಪಿಗೆ ತಲೆನೋವಾಗಿದೆ. ಇದೇ ರೀತಿ ಬಸವ ಕಲ್ಯಾಣದಲ್ಲಿ ಘೋಷಿತ ಅಭ್ಯರ್ಥಿ ವಿರುದ್ಧ ಅಲ್ಲಿನ ಸ್ಥಳೀಯ ಮುಖಂಡರೇ ಒಟ್ಟಾಗಿ ವಿರೋಧ ವ್ಯಕ್ತಪಡಿಸಿರುವುದು ಬಿಜೆಪಿಯ ಗೆಲುವಿನ ಹಾದಿಯನ್ನು ಮುಳ್ಳಾಗಿಸಿದೆ.

ಬಿಎಸ್‍ವೈ ಸರ್ಕಾರ ರಚನೆಗೆ ಸಹಕರಿಸಿದ್ದ ಪ್ರತಾಪ್ ಗೌಡ ಪಾಟೀಲರಿಗೆ ಮಸ್ಕಿಯಲ್ಲಿ ಮಣೆ ಹಾಕಲಾಗಿದೆ. ಆದರೆ ಬಿಜೆಪಿ ಜತೆ ಬೆರೆಯುವಲ್ಲಿ ಪ್ರತಾಪ್ ಗೌಡರು ಅಷ್ಟಾಗಿ ಮುತುವರ್ಜಿ ತೋರದಿರುವುದು ಅವರಿಗೆ ಮುಳುವಾಗುವ ಸಾಧ್ಯತೆಗಳಿವೆ.

ಈ ಬೆಳವಣಿಗೆಗಳ ನಡುವೆಯೇ ಬೆಳಗಾವಿ ಉಪಚುನಾವಣೆಯಲ್ಲಿ ಪಂಚಮಸಾಲಿ ಮೀಸಲು ಹೋರಾಟದ ಕಾವು ನಿರ್ಣಾಯಕ ಪಾತ್ರ ವಹಿಸುವ ಸೂಚನೆಗಳಿವೆ. 2ಎ ಮೀಸಲಿಗೆ ಒತ್ತಾಯಿಸಿ ಪಂಚಮಸಾಲಿ ಧಾರ್ಮಿಕ ಮುಖಂಡರು ಕಳೆದ ತಿಂಗಳಷ್ಟೇ ತೀವ್ರ ಸ್ವರೋಪದ ಚಳವಳಿ ನಡೆಸಿದ್ದರು. ಸರ್ಕಾರ ಈ ವಿಚಾರವನ್ನು ಹಿಂದುಳಿದ ಆಯೋಗದ ಹೆಗಲಿಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರದ ಮೇಲೆ ಪಂಚಮಸಾಲಿ ಸಮುದಾಯ ಅಸಮಾಧಾನಗೊಂಡಿದೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಆದಲ್ಲಿ ಬೆಳಗಾವಿ ಉಪಚುನಾವಣೆಯಲ್ಲಿ ಗೆಲುವು ಬಿಜೆಪಿಗೆ ಮರೀಚಿಕೆಯಾಗುವ ಎಲ್ಲ ಸಾಧ್ಯತೆ ಇದೆ. ಬೆಳಗಾವಿಯ ಒಟ್ಟು ಮತದಾರರ ಶೇ.25 ಹಾಗೂ ಲಿಂಗಾಯತ ಮತಗಳ ಪೈಕಿ ಶೇ.75ರಷ್ಟು ಮತದಾರರು ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದು, ಅವರ ಆಯ್ಕೆ ಫಲಿತಾಂಶದ ಮೇಲೆ ಖಚಿತ ಪರಿಣಾಮ ಬೀರಲಿದೆ.

ಕಳೆದೆರಡು ದಶಕಗಳಿಂದಲೂ ಪಂಚಮಸಾಲಿ ಮತಗಳು ಬಿಜೆಪಿಯ ಬುಟ್ಟಿಯಲ್ಲಿ ಸುರಕ್ಷಿತವಾಗಿದ್ದವು. ಆದರೆ ಈ ಬಾರಿ ಸಮುದಾಯ ಬಿಜೆಪಿಯ ಕೈಹಿಡಿಯುವ ಖಚಿತತೆ ಪಕ್ಷದ ಮುಖಂಡರಿಗೇ ಇದ್ದಂತೆ ಕಾಣುತ್ತಿಲ್ಲ. ಈ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿದ್ದು, ಯಾವುದೇ ಕಾರಣಕ್ಕೂ ಕೈಸುಟ್ಟುಕೊಳ್ಳಲು ಇಚ್ಛಿಸುವುದಿಲ್ಲ.

ಹೀಗಾಗಿಯೇ ಖುದ್ದು ಸಿಎಂ ಯಡಿಯೂರಪ್ಪ ಅವರೇ ಪಂಚಮಸಾಲಿ ಮುಖಂಡರ ಸಭೆ ನಡೆಸಿ ಅವರ ಮನವೊಲಿಸುವ ಖಾರ್ಯ ನಡೆಸುವ ನಿರೀಕ್ಷೆ ಇದೆ. ಮರಾಠಿ ಮತಗಳು ವಿಭಜನೆಗೊಂಡು ಪಂಚಮಸಾಲಿ ಮತಗಳೂ ಕಾಂಗ್ರೆಸ್‍ನತ್ತ ವಾಲಿದರೇ ಬಿಜೆಪಿಗೆ ಸೋಲಾಗಬಹುದು ಎಂಬ ಲೆಕ್ಕಾಚಾರ ಸ್ಥಳೀಯ ಮಟ್ಟದಲ್ಲಿ ಇದೆ.ಮೇ 2ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ಈ ಎಲ್ಲ ಲೆಕ್ಕಾಚಾರಗಳ ಅಸಲಿ ಆಟ  ಅನಾವರಣಗೊಳ್ಳಲಿದೆ.

Facebook Comments