ಸಂಪುಟ ಪುನರ್ ರಚನೆ ವೇಳೆ ಯುವ ಶಕ್ತಿಗೆ ಮೊದಲ ಆದ್ಯತೆ, ಹಿರಿಯರಿಗೆ ಪಕ್ಷ ಸಂಘಟನೆ ಜವಾಬ್ದಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.26- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲವು ಹಿರಿಯ ಸಚಿವರಿಗೆ ಸಂಪುಟದಿಂದ ಕೋಕ್ ನೀಡಿ ಹೊಸಬರಿಗೆ ಅವಕಾಶ ನೀಡಲು ಬಿಜೆಪಿ ಚಿಂತನೆ ನಡೆಸಿದೆ. 2006ರಲ್ಲಿ ಬಿಜೆಪಿ-ಜೆಡಿಎಸ್ ಹಾಗೂ 2008ರಿಂದ 2013ರ ಅವಧಿಯಲ್ಲಿ ಸಚಿವರಾಗಿ ಅಧಿಕಾರ ಅನು ಭವಿಸಿರುವ ಹಿರಿಯ ಸಚಿವರನ್ನು ಪಕ್ಷದ ಸಂಘಟನೆಗೆ ನಿಯೋಜಿಸಿ ಯುವ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಕೂಡ ಒಲವು ತೋರಿದೆ.

ಪಕ್ಷ ಬಂದ ವೇಳೆ ಅಧಿಕಾರದ ರುಚಿ ಕಂಡಿರುವ 6ರಿಂದ 8 ಮಂದಿ ಹಿರಿಯ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಕರಾವಳಿ ತೀರಾ ಪ್ರದೇಶ, ಕಲ್ಯಾಣ ಕರ್ನಾಟಕ, ಮಧ್ಯಕರ್ನಾಟಕ, ಮುಂಬೈ ಪ್ರಾಂತ್ಯದ ಶಾಸಕರಿಗೆ ಆದ್ಯತೆ ಕೊಡಲು ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ.

2023ಕ್ಕೆ ವಿಧಾನಸಭೆ ಹಾಗೂ 2024ಕ್ಕೆ ಲೋಕಸಭೆ ಚುನಾವಣೆ ನಡೆಯಲಿದೆ. ಯಾವ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಗುರಿಯೊಂದಿಗೆ ಬಿಜೆಪಿ ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಿದೆ. ಹಿರಿಯ ಸಚಿವರಾಗಿ ಆಡಳಿತದ ಅನುಭವ ಹೊಂದಿರುವವರ ಸೇವೆಯನ್ನು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಯಾವ ಯಾವ ಭಾಗದಲ್ಲಿ ಅಂದರೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಳೇಮೈಸೂರು ಭಾಗದ ಕಡೆ ಬಿಜೆಪಿ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲು ಮುಂದಾಗಿದೆ.

ಇತ್ತೀಚೆಗೆ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಚಿಕ್ಕಬಳ್ಳಾಪುರ, ಮಂಡ್ಯದ ಕೆ.ಆರ್.ಪುರ ಕ್ಷೇತ್ರಗಳಲ್ಲಿ ಬಿಜೆಪಿಯ ಕಮಲ ಅರಳಿದೆ. 2018ರ ಚುನಾವಣೆಯಲ್ಲಿ ಹಾಸನದಲ್ಲೂ ವಿಜಯದ ಪತಾಕೆ ಹಾರಿಸಿತ್ತು. ಈ ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಹಾಗೂ ಹಿಂದುಳಿದ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಆಯಾ ಸಮುದಾಯವನ್ನು ಪ್ರತಿನಿಧಿಸುವ ಪ್ರಬಲರನ್ನೇ ಪಕ್ಷ ಸಂಘಟನೆಗೆ ನಿಯೋಜನೆ ಮಾಡುವ ನಿರೀಕ್ಷೆ ಇದೆ.

ಸದ್ಯ ಸಂಪುಟದಲ್ಲಿ ಆರು ಸ್ಥಾನ ಖಾಲಿಯಿದ್ದು, ಇದರಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆ ಯಾಗಿರುವ ಆರ್.ಶಂಕರ್ ಮತ್ತು ಎಂ.ಟಿ.ಬಿ.ನಾಗರಾಜ್‍ಗೆ ಸಂಪುಟದಲ್ಲಿ ಸ್ಥಾನ ಕೊಡಲೇಬೇಕು. ಇನ್ನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ಎದುರಿಸುವ ನಿರೀಕ್ಷೆಯಲ್ಲಿರುವ ಮುನಿರತ್ನ ಮತ್ತು ಪ್ರತಾಪ್ ಗೌಡ ಪಾಟೀಲ್‍ಗೂ ಸಚಿವ ಸ್ಥಾನವನ್ನು ಕಲ್ಪಿಸಬೇಕು.

ನಾಲ್ಕು ಸ್ಥಾನಗಳನ್ನು ಇವರಿಗೆ ನೀಡಿದರೆ ಉಳಿಯುವುದು ಕೇವಲ ಎರಡು ಸ್ಥಾನಗಳು ಮಾತ್ರ. ಹೀಗಾಗಿ 6ರಿಂದ 8 ಹಿರಿಯ ಸಚಿವರನ್ನು ಕೈಬಿಟ್ಟು ಎರಡರಿಂದ ಮೂರು ಬಾರಿ ಗೆದ್ದಿರುವ ಯುವಕರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆಗಳು ಗೋಚರಿಸಿವೆ. ಈ ಹಿಂದೆ ಗುಜರಾತ್, ಅಸ್ಸಾಂ, ಉತ್ತರಖಂಡ, ಉತ್ತರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬಿಜೆಪಿ ಎಲ್ಲೆಲ್ಲಿ ಅಧಿಕಾರದಲ್ಲಿತ್ತೋ ಚುನಾವಣಾ ಸಂದರ್ಭದಲ್ಲಿ ಹಿರಿಯರನ್ನು ಪಕ್ಷಕ್ಕೆ ನಿಯೋಜಿಸಿ ಯುವಕರಿಗೆ ಸಂಪುಟದಲ್ಲಿ ಮಣೆ ಹಾಕಲಾಗಿತ್ತು. ಇದು ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆಗಿತ್ತು. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಲು ವರಿಷ್ಠರು ಚಿಂತನೆ ನಡೆಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆಯಷ್ಟೇ ಅಲ್ಲ, ಸಂಪುಟ ಪುನಾರಚನೆ ಮಾಡಬಯಸಿದ್ದಾರೆ. ಪಕ್ಷಕ್ಕೆ ಹೆಚ್ಚು ಲಾಭ ತರದ 6ರಿಂದ 8ಕ್ಕೂ ಹೆಚ್ಚು ಸಚಿವರನ್ನು ಸಂಪುಟದಿಂದ ಕೈಬಿಟ್ಟು ಬೇರೆಯವರಿಗೆ ಅವಕಾಶ ಕೊಡುವುದು ಅವರ ಉದ್ದೇಶ ಎಂಬುದು ಬಿಜೆಪಿ ಮೂಲಗಳ ಹೇಳಿಕೆ. ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕೆಂಬ ಪ್ರಸ್ತಾವಕ್ಕೆ ಬಿಜೆಪಿ ಹೈಕಮಾಂಡ್‍ಗೆ ಒಲವೂ ಇದೆ. ಇನ್ನೊಂದೆಡೆ ಏಕಾಏಕಿ ಇಷ್ಟು ಮಂತ್ರಿಗಳನ್ನು ಹೊರಕಳುಹಿಸಿದರೆ ಸರ್ಕಾರದ ಆಡಳಿತ ಅಸಮರ್ಪಕವಾಗಿದೆ ಎಂದು ಒಪ್ಪಿಕೊಂಡಂತಾಗಿಬಿಡಬಹುದು ಎಂಬ ಭಯವೂ ಕಾಡುತ್ತಿದೆ.

ಭಿನ್ನಮತೀಯರ ಜೊತೆಗೆ ಬಿಜೆಪಿ ಮೂಲದ ಕೆಲ ಶಾಸಕರೂ ಕೂಡ ಸಚಿವಾಕಾಂಕ್ಷೆ ಇಟ್ಟುಕೊಂಡಿದ್ದಾರೆ. ಇವರಿಗೆ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಬಲವಾಗಿ ಬೇರೂರಿದೆ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಯಥೇಚ್ಛವಾಗಿ ಖಾತೆಗಳನ್ನು ಹಂಚಲಾಗುತ್ತಿದೆ ಎಂಬ ಅಸಮಾಧಾನ ಬೇಗುದಿಯಲ್ಲಿ ಇವರು ಬೇಯುತ್ತಿದ್ದಾರೆ.

ಬಿಜೆಪಿ ಹೈಕಮಾಂಡ್ ಕೂಡ ಕೆಲ ವಿಚಾರಗಳಲ್ಲಿ ಒಲ್ಲದ ಮನಸ್ಸಿನಿಂದಲೇ ನಿಲುವು ತಳೆದಿದೆ. ಈ ಸಚಿವರ ತ್ಯಾಗ ಇಲ್ಲದೇ ಹೋಗಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಹೈಕಮಾಂಡ್ ಕೂಡ ಒಪ್ಪಿಕೊಂಡಿದೆ. ಆದರೆ, ಪಕ್ಷದ ಹಿರಿಯ ಶಾಸಕರ ಪರವಾಗಿಯೂ ಬೆಂಬಲಗಳು ವ್ಯಕ್ತವಾಗುತ್ತಿವೆ. ನೆಹರೂ ಓಲೇಕಾರ್ ಅವರಂಥ ಹಿರಿಯರು, ಅರವಿಂದ್ ಬೆಲ್ಲದ ಅವರಂಥ ಯುವ ಶಾಸಕರೂ ಕೂಡ ಮಂತ್ರಿ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ರಾಜಕಾರಣದಲ್ಲಿ ಪ್ರತಿಯೊಬ್ಬರೂ ಆಕಾಂಕ್ಷಿಯೇ ಎಂಬುದು ಇವರ ವಾದ. ಎಂಟು ಬಾರಿ ಶಾಸಕರಾಗಿರುವ ಹುಕ್ಕೇರಿಯ ಉಮೇಶ್ ಕತ್ತಿ ಪ್ರಬಲ ಸಚಿವಾಕಾಂಕ್ಷಿ. ಇವರು ಯಡಿಯೂರಪ್ಪರನ್ನಷ್ಟೇ ನೆಚ್ಚಿಕೊಳ್ಳದೇ ನೇರವಾಗಿ ದೆಹಲಿಗೆ ಹೋಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತಿತರರ ವರಿಷ್ಠರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಆದರೆ ಬೆಳಗಾವಿ ಜಿಲ್ಲೆಯಿಂದ ಈಗಾಗಲೇ ಸಾಕಷ್ಟು ಮಂದಿ ಸಚಿವರಾಗಿರುವುದರಿಂದ ಉಮೇಶ್ ಕತ್ತಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಬೆಳಗಾವಿ ಜಿಲ್ಲೆಯವರೇ ಯಾರಾದರೂ ಸಂಪುಟದಿಂದ ಹೊರಬಂದರೆ ಮಾತ್ರ ಅವರಿಗೆ ಸೇರ್ಪಡೆಯಾಗುವ ಅವಕಾಶ ಇದೆ. ಅಥಣಿಯಿಂದ ಸ್ಪರ್ಧಿಸಿ ಸೋಲುಂಡಿದ್ದ ಲಕ್ಷ್ಮಣ್ ಸವದಿ ಅವರನ್ನು ಡಿಸಿಎಂ ಮಾಡಲಾಗಿದೆ.

ಸಚಿವ ಸ್ಥಾನಕ್ಕಷ್ಟೇ ಅಲ್ಲ, ಉಪ ಮುಖ್ಯಮಂತ್ರಿ ಸ್ಥಾನಕ್ಕೂ ಭಾರೀ ಪೈಪೋಟಿ ನಡೆಯುತ್ತಿರುವುದು ಬಿಜೆಪಿಯ ಮತ್ತೊಂದು ಮೂಲದಿಂದ ತಿಳಿದುಬಂದಿದೆ. ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಮತ್ತು ಡಾ. ಅಶ್ವತ್ಥ ನಾರಾಯಣ ಈ ಮೂವರು ಈಗಾಗಲೇ ಡಿಸಿಎಂ ಸ್ಥಾನ ಅಲಂಕರಿಸಿದ್ದಾರೆ. ಪ್ರಬಲ ವಾಲ್ಮೀಕಿ ಜನಾಂಗದ ಬಿ.ಶ್ರೀರಾಮುಲು ಅವರೂ ಡಿಸಿಎಂ ಸ್ಥಾನಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ಧಾರೆ.

ಸವದಿ ಅವರನ್ನು ಕೈಬಿಡುವುದು ಅನಿವಾರ್ಯ. ಅಶ್ವತ್ಥ ನಾರಾಯಣರನ್ನೂ ಡಿಸಿಎಂ ಸ್ಥಾನದಿಂದ ಕೆಳಗಿಳಿಸಬಹುದು. ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಹೊಸ ನಾಯಕತ್ವ ಬೆಳೆಸಲು ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗಿದೆಯಾದರೂ ಸವದಿ ಮತ್ತು ಅಶ್ವತ್ಥ ನಾರಾಯಣ ಇಬ್ಬರೂ ಕೂಡ ತಮ್ಮ ನಾಯಕತ್ವದ ಛಾಪು ಮೂಡಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಈಗಿರುವ ಮೂರೂ ಡಿಸಿಎಂ ಸ್ಥಾನಗಳನ್ನು ರದ್ದು ಮಾಡಬಹುದು. ಅಥವಾ ಬೇರೆಯವರನ್ನು ಆ ಸ್ಥಾನಕ್ಕೆ ತಂದು ಕೂರಿಸಬಹುದು ಎಂದು ಮೂಲಗಳು ತಿಳಿಸಿದೆ.

ಬೆಂಗಳೂರು ನಗರದಲ್ಲಿ ಪಕ್ಷದೊಳಗೆ ಮೂಡಿರುವ ಒಡಕು ಕೂಡ ಬಿಜೆಪಿಯ ವರಿಷ್ಠರಿಗೆ ತಲೆನೋವು ತಂದಿದೆ. ಆರ್ ಅಶೋಕ್ ಬದಲು ಅಶ್ವತ್ಥ ನಾರಾಯಣ ಅವರು ನಗರದಲ್ಲಿ ಒಕ್ಕಲಿಗ ಶಕ್ತಿಯಾಗಿ ಬಿಂಬಿತವಾಗುತ್ತಿದ್ದಾರೆ. ಇದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡುತ್ತಿದೆ.

ಒಂದೆಡೆ ಬೆಂಗಳೂರಿನಲ್ಲಿ ಎರಡು ಶಕ್ತಿ ಕೇಂದ್ರಗಳಿವೆ; ಮತ್ತೊಂದೆಡೆ, ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಸಚಿವರಿರುವುದರಿಂದ ಬೇರೆ ಪ್ರದೇಶಗಳ ಶಾಸಕರಿಗೆ ಇರಿಸುಮುರುಸು ತಂದಿದೆ. ಈಗ ಯಡಿಯೂರಪ್ಪಗೆ ರೆಬೆಲ್ ಶಾಸಕರ ಜೊತೆಗೆ ತಮ್ಮ ಆಪ್ತರನ್ನೂ ಸಮಾಧಾನಪಡಿಸುವ ಕಷ್ಟಕರ ಸವಾಲು ಎದುರಾಗಿದೆ.

Facebook Comments