Friday, April 26, 2024
Homeರಾಜಕೀಯನಿರ್ಣಾಯಕ ಕುರುಬ ಮತ್ತು ಒಕ್ಕಲಿಗರ ಮತ ಸೆಳೆಯಲು ಬಿಜೆಪಿ-ಜೆಡಿಎಸ್ ದೋಸ್ತಿಗಳ ಶತಪ್ರಯತ್ನ

ನಿರ್ಣಾಯಕ ಕುರುಬ ಮತ್ತು ಒಕ್ಕಲಿಗರ ಮತ ಸೆಳೆಯಲು ಬಿಜೆಪಿ-ಜೆಡಿಎಸ್ ದೋಸ್ತಿಗಳ ಶತಪ್ರಯತ್ನ

ಬೆಂಗಳೂರು,ಏ.13- ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ ಎರಡು ವಾರ ಬಾಕಿಯುಳಿದಿದೆ. ಮೊದಲ ಹಂತದಲ್ಲಿ ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗ ಮತ್ತು ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಎರಡು ಸಮುದಾಯಗಳ ಬೆಂಬಲ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ – ಜೆಡಿಎಸ್ ಮೈತ್ರಿ ಶತಪ್ರಯತ್ನ ನಡೆಸುತ್ತಿವೆ. ಇದಕ್ಕಾಗಿ ವಿಶ್ವಾಸಾರ್ಹ ಚುನಾವಣಾ ತಂತ್ರಜ್ಞರ ನೇತೃತ್ವದ ತಂಡಗಳನ್ನು ನಿಯೋಜಿಸಿದ್ದಾರೆ.

ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಮಂಡ್ಯ ಕೂಡ ಈ 14 ಕ್ಷೇತ್ರಗಳ ಪೈಕಿ ಒಂದು. ಬಿಜೆಪಿ ಹಾಗೂ ಜೆಡಿಎಸ್‍ನಿಂದ ಎಚ್‍ಡಿ ಕುಮಾರಸ್ವಾಮಿ ಸ್ರ್ಪಧಿಸುತ್ತಿದ್ದು, ಕಾಂಗ್ರೆಸ್‍ನ ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಅವರನ್ನು ಎದುರಿಸಲಿದ್ದಾರೆ. ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಪ್ರಶ್ನಾತೀತ ಜನಪ್ರಿಯತೆಯನ್ನು ಗಮನಿಸಿರುವ ಕಾಂಗ್ರೆಸ್ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ನೇತೃತ್ವದ ತಂಡದ ಮೂಲಕ ಒಕ್ಕಲಿಗ ವೋಟ್ ಬ್ಯಾಂಕ್‍ಗೆ ಕೈ ಹಾಕುವ ಕೆಲಸ ಮಾಡುತ್ತಿದೆ.

ಮಂಡ್ಯದಲ್ಲಿ ಕುರುಬ ಮತ್ತು ದಲಿತ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿದ್ದು, ಅವುಗಳನ್ನು ಸೆಳೆಯಲು ಕಾಂಗ್ರೆಸ್ ಕೆಪಿಸಿಸಿ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಮತ್ತು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ನಿಯೋಜಿಸಿದೆ. ಕಾಂಗ್ರೆಸ್‍ನ ಪ್ರಜಾಧ್ವನಿ-2ರ ಅಧ್ಯಕ್ಷರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಮೈಸೂರು – ಮಂಡ್ಯ ಭಾಗದಲ್ಲಿ ಒಟ್ಟಾರೆ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ.

ಇನ್ನು, ಮಂಡ್ಯ ಒಕ್ಕಲಿಗ ಭದ್ರಕೋಟೆಯಾಗಿದ್ದರೂ ಕೂಡ ಕುರುಬರು ಸೇರಿ ಒಬಿಸಿಗಳ ಬೆಂಬಲವನ್ನು ಕ್ರೋಢೀಕರಿಸುವುದು ನಿರ್ಣಾಯಕ ಎಂದು ಶಿವಣ್ಣ ಹೇಳಿದ್ದಾರೆ. ಅಹಿಂದ ಮೂಲಕ ಒಬಿಸಿ ಸಮುದಾಯಕ್ಕಾಗಿ ಹೋರಾಡಿದ ಸಿದ್ದರಾಮಯ್ಯನವರ ಕಾರಣದಿಂದ ಒಬಿಸಿ ಸಮುದಾಯ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

ಶೇ.35ರಷ್ಟು ಒಕ್ಕಲಿಗ ಮತಗಳು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿದ್ದರೆ, ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತಗಳು ಸಮಾನವಾಗಿವೆ. ಮಳವಳ್ಳಿ ಮತ್ತು ಕೆಆರ್ ನಗರದಲ್ಲಿ ದಲಿತ ಮತಗಳು ನಿರ್ಣಾಯಕವಾಗಿವೆ.

ಮಂಡ್ಯದ ಪಕ್ಕದಲ್ಲೇ ಇರುವ ನೆರೆಯ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಿಜೆಪಿಗೆ ಅಸಾಧಾರಣ ಸವಾಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಹಾಲಿ ಸಂಸದ ಡಿಕೆ ಸುರೇಶ್ ಅವರಿಂದ ಕಠಿಣ ಸ್ಪರ್ಧೆಯನ್ನು ಬಿಜೆಪಿ ಎದುರಿಸುತ್ತಿದೆ. ಈ ಭಾಗದಲ್ಲಿ ಡಿಕೆ ಸಹೋದರರ ಪ್ರಾಬಲ್ಯವನ್ನು ಮುರಿಯಲು ಬಿಜೆಪಿ ಅಭ್ಯರ್ಥಿ ಡಾ ಸಿ ಎನ್ ಮಂಜುನಾಥ್ ಅವರೊಂದಿಗೆ ಕೆಲಸ ಮಾಡಲು ಮಾಜಿ ಉಪ ಮುಖ್ಯಮಂತ್ರಿ, ಒಕ್ಕಲಿಗ ಸಮುದಾಯದ ಪ್ರಮುಖ ನಾಯಕ ಡಾ ಸಿಎನ್ ಅಶ್ವಥ್ ನಾರಾಯಣ್ ಅವರನ್ನು ನಿಯೋಜಿಸಲಾಗಿದೆ.

ಡಿ.ಕೆ ಸಹೋದರರು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಡಾ ಸಿ.ಎನ್.ಅಶ್ವತ್ಥ ನಾರಾಯಣ ಹೋರಾಡಿಕೊಂಡು ಬಂದಿದ್ದಾರೆ. ಆದರೆ, ಈಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಎಚ್‍ಡಿ ಕುಮಾರಸ್ವಾಮಿ ಅವರ ಪರ ಡಾ ಸಿಎನ್ ಅಶ್ವತ್ಥ ನಾರಾಯಣ ನಿಲ್ಲಬೇಕಿದೆ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದರಿಂದ ಬೆಂಗಳೂರು ಗ್ರಾಮಾಂತರದಲ್ಲಿ ತಮ್ಮದೇ ಪ್ರಭಾವವನ್ನು ಡಾ ಸಿಎನ್ ಅಶ್ವತ್ಥ ನಾರಾಯಣ ಹೊಂದಿದ್ದು, ಅದಕ್ಕಾಗಿ ಅವರಿಗೆ ಬೆಂಗಳೂರು ಗ್ರಾಮಾಂತರದ ಕೆಲಸವನ್ನು ನೀಡಲಾಗಿದೆ.

ಆದರೆ, ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಚನ್ನಪಟ್ಣಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸದಸ್ಯರು ಕಾಂಗ್ರೆಸ್‍ಗೆ ಸೇರ್ಪಡೆಯಾದ ಬಳಿಕ ಹಲವು ಸವಾಲುಗಳು ಮೈತ್ರಿ ಪಡೆಗೆ ಎದುರಾಗಿವೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಮತ್ತು ಬಿಜೆಪಿ ಸಮನ್ವಯ ಸಮಿತಿಯನ್ನು ಸ್ಥಾಪಿಸಿದ್ದು, ಎಚ್‍ಡಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಎಸ್‍ಎಂ ಕೃಷ್ಣ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜೊತೆ ಸಭೆ ನಡೆಸಲಾಗಿದ್ದು, ಡಿ.ಕೆ ಬ್ರದರ್ಸ್ ಪ್ರಾಬಲ್ಯ ಮುರಿಯುವ ವಿಶ್ವಾಸ ನಮಗಿದೆ ಎಂದು ಡಾ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.

RELATED ARTICLES

Latest News