ಬ್ರೇಕಿಂಗ್ : ರಾಜ್ಯಸಭೆ ಚುನಾವಣೆಗೆ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.8-ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಮರ್ಮಾಘಾತ ನೀಡಿರುವ ಕೇಂದ್ರ ಬಿಜೆಪಿ ವರಿಷ್ಠರು ಕೋರ್ ಕಮಿಟಿ ಸಭೆ ಕಳುಹಿಸಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ತಿರಸ್ಕರಿಸಿ ರಾಜ್ಯಸಭೆ ಚುನಾವಣೆಗೆ ಅಚ್ಚರಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಇದೇ 19ರಂದು ನಡೆಯುವ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಬೆಳಗಾವಿಯ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ ಹಾಗೂ ಬಳ್ಳಾರಿಜಿಲ್ಲಾ ಉಸ್ತುವಾರಿ ಅಶೋಕ್ ಗಸ್ತಿ ಅವರನ್ನು ಕಣಕ್ಕಿಳಿಸುವ ಮೂಲಕ ರಾಜ್ಯ ನಾಯಕರಿಗೆ ಶಾಕ್ ಕೊಟ್ಟಿದೆ.

ಈ ಇಬ್ಬರು ಮುಖಂಡರು ಮೂಲತಃ ಎಬಿವಿಪಿ ಹಿನ್ನೆಲೆಯಿಂದ ಬಂದವರು. ಶನಿವಾರ ಕೋರ್‍ಕಮಿಟಿ ಸಭೆಯಲ್ಲಿ ಪಕ್ಷದ ಮುಖಂಡರು ಕಳುಹಿಸಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ತಿರಸ್ಕರಿಸಿ ಯಾರೂ ಕೂಡ ಊಹಿಸದ ರೀತಿಯಲ್ಲಿ ಈ ಇಬ್ಬರನ್ನು ಅಭ್ಯರ್ಥಿಗಳನ್ನಾಗಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಇಂದು ಘೋಷಣೆ ಮಾಡಿದೆ.

ಶನಿವಾರ ಬಿಜೆಪಿ ಮುಖಂಡರು ಕೋರ್ ಕಮಿಟಿ ಸಭೆಯಲ್ಲಿ ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಉದ್ಯಮಿ ಪ್ರಕಾಶ್ ಶೆಟ್ಟಿ, ಮಾಜಿ ಲೋಕಸಭಾ ಸದಸ್ಯ ರಮೇಶ್ ಕತ್ತಿ, ವಿಆರ್‍ಎಲ್ ಸಮೂಹ ಸಂಸ್ಥೆಯ ಅಧ್ಯಕ್ಷ ವಿಜಯ್ ಸಂಕೇಶ್ವರ್, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಹಾಗೂ ಪ್ರೊ.ಎಂ.ನಾಗರಾಜ್ ಹೆಸರುಗಳನ್ನು ರಾಜ್ಯಸಭೆಗೆ ಶಿಫಾರಸ್ಸು ಮಾಡಲಾಗಿತ್ತು.

ಕೊನೆ ಕ್ಷಣದವರೆಗೂ ಅಭ್ಯರ್ಥಿಗಳ ಹೆಸರನ್ನು ಗೌಪ್ಯವಾಗಿಯೇ ಕಾಪಾಡಿಕೊಂಡಿದ್ದ ವರಿಷ್ಠರು ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಗುಟ್ಟನ್ನು ರಟ್ಟು ಮಾಡಿರಲಿಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ಅಸಮಾಧಾನ ಉಂಟಾಗಬಹುದೆಂಬ ಹಿನ್ನೆಲೆಯಲ್ಲಿ ಕೇಂದ್ರ ಬಿಜೆಪಿ ವರಿಷ್ಠರು ಸಾಕಷ್ಟು ಅಳೆದು ತೂಗಿ ಕೊಡಾಡಿ ಮತ್ತು ಗಸ್ತಿ ಅವರಿಗೆ ಟಿಕೆಟ್ ನೀಡಲಾಗಿದೆ.

ಇದರಿಂದ ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹಾಗೂ ಟಿಕೆಟ್ ಪಡೆದೇ ತೀರುತ್ತೇನೆಂದು ಪಟ್ಟು ಹಿಡಿದಿದ್ದ ರಮೇಶ್ ಕತ್ತಿ ಸೇರಿದಂತೆ ಆಕಾಂಕ್ಷಿಗಳಿಗೆ ಭಾರೀ ಹಿನ್ನಡೆಯಾಗಿದೆ.

# ನಡೆಯದ ಲಾಬಿ:
ರಾಜ್ಯಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಘೋಷಿಸಿದರೂ ಮುಂದೆ ಪಕ್ಷ ಹಾಗೂ ಸರ್ಕಾರದಲ್ಲಿ ದೊಡ್ಡ ಭೀನ್ನಮತೀಯ ಚಟುವಟಿಕೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂಬ ಸುಳಿವು ವರಿಷ್ಠರಿಗೆ ಸಿಕ್ಕಿತ್ತು.

ಇತ್ತೀಚೆಗೆ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿದಂತೆ ಮತ್ತಿತರರು ಪ್ರತ್ಯೇಕ ಸಭೆ ನಡೆಸಿದ್ದರು. ಅದರಲ್ಲೂ ಉಮೇಶ್ ಕತ್ತಿಯಂತೂ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದರು.

ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲರ ಮೇಲೂ ಒತ್ತಡ ಹಾಕಿದ್ದರು. ಇದ್ಯಾವುದಕ್ಕೂ ಜಗ್ಗದ ಕೇಂದ್ರ ಬಿಜೆಪಿ ಹೈಕಮಾಂಡ್ ಒತ್ತಡಕ್ಕೆ ನಾವು ಬಗ್ಗುವುದಿಲ್ಲ ಎಂಬ ಸುಳಿವನ್ನು ನೀಡಿದ್ದಾರೆ.

ಹೈಕಮಾಂಡ್ ಮಟ್ಟದಲ್ಲಿ ರಮೇಶ್ ಕತ್ತಿ ಇಲ್ಲವೇ ಕೋರೆ ಅವರಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ತೆರೆಮರೆಯಲ್ಲಿ ಲಾಬಿ ನಡೆಸಿದ್ದರು. ಆದರೆ ಅವರ ಬೇಡಿಕೆಗೂ ಹೈಕಮಾಂಡ್ ಸೊಪ್ಪು ಹಾಕಿಲ್ಲ.

ಇದೀಗ ವರಿಷ್ಠರು ಎಲ್ಲರಿಗೂ ಒಂದು ಸಂದೇಶವನ್ನು ರವಾನಿಸಿದ್ದು, ನಮ್ಮದು ಕಾರ್ಯಕರ್ತರ ಪಕ್ಷ ಎಂಬುದನ್ನು ಮತ್ತೊಮ್ಮೆ ರುಜುವಾತು ಮಾಡಿದ್ದಾರೆ.

# ವ್ಯಕ್ತಿ ಹಿನ್ನೆಲೆ:
ಈರಣ್ಣ ಕೊಡಾಡಿ, ಅಶೋಕ್ ಗಸ್ತಿ ಅವರುಗಳು ಮೂಲತಃ ಎಬಿವಿಪಿ ಹಿನ್ನೆಲೆಯಿಂದ ಬಂದವರು. ಇಬ್ಬರು ಕೂಡ ವೀರಶೈವ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಅಶೋಕ್ ಗಸ್ತಿ ಬೆಳಗಾವಿ ಜಿಲ್ಲೆಯ ಮಾಜಿ ಜಿಲ್ಲಾಧ್ಯಕ್ಷರು. ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಬಿಟ್ಟರೆ ಹೆಚ್ಚು ಪರಿಚಿತರಲ್ಲ.
ಬೆಳಗಾವಿಯಲ್ಲಿ ತಳಮಟ್ಟದಿಂದ ಪಕ್ಷವನ್ನು ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಸಂಘಟನೆ ಮಾಡಿದ ಪ್ರಮುಖರಲ್ಲೊಬ್ಬರು.

ಇದೇರೀತಿ ಈರಣ್ಣ ಕಡಾಡಿ ಕೂಡ ಮೂಲತಃ ರಾಯಚೂರು ಜಿಲ್ಲೆಯವರು. ಹಿಂದುಳಿದ ವರ್ಗಗಳ ಮೋರ್ಚಾ, ಬಳ್ಳಾರಿ ಜಿಲ್ಲಾ ಸಂಘಟನಾ ಉಸ್ತುವಾರಿ ಸೇರಿದಂತೆ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅನುಭವವಿದೆ.

Facebook Comments

Sri Raghav

Admin