ಉಪಚುನಾವಣೆ ಗೆದ್ದು ಬೀಗುತ್ತಿರುವ ಬಿಜೆಪಿ ಚಿತ್ತ ಈಗ ಬೆಂಗಳೂರಿನತ್ತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.16-ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಯನ್ನು ಗೆದ್ದು ಬೀಗುತ್ತಿರುವ ಆಡಳಿತಾರೂಢ ಬಿಜೆಪಿ ಇದೀಗ ಬೆಂಗಳೂರಿನಲ್ಲಿ ವಿಜಯದ ಪತಾಕೆ ಹಾರಿಸಲು ಮುಂದಾಗಿದೆ.  ಇದಕ್ಕಾಗಿ ಬೆಂಗಳೂರಿನ ಜನತೆಗೆ ಭರಪೂರಾ ಕೊಡುಗೆಗಳನ್ನು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಐಟಿಸಿಟಿ, ಉದ್ಯಾನನಗರಿ ಬೆಂಗಳೂರಿಗೆ ಹಲವು ಭರವಸೆಗಳ ಮಹಾಪೂರವನ್ನೇ ಹರಿಸಿದ್ದು, ಬೆಂಗಳೂರು ವಿಷನ್ 2020ರಿಂದ ಪಾರ್ಕ್, ಫ್ಲೈ ಓವರ್ ವರೆಗೆ ಬೆಂಗಳೂರು ಬಗ್ಗೆ ಹಲವು ದೂರದೃಷ್ಟಿ ಹರಿಸಿದ್ದಾರೆ.

ಈ ಮೂಲಕ ಬೆಂಗಳೂರು ನಗರಕ್ಕೆ ಹೊಸ ನೋಟ ನೀಡಲು ಹೊರಟಿದ್ದಾರೆ. ವಿಧಾನ ಸೌಧದಿಂದ ವಚ್ರ್ಯುವಲ್ ಸಭೆ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಹಲವು ಕಾಮಗಾರಿಗಳಿಗೆ, ಅಭಿಯಾನಗಳಿಗೆ ಚಾಲನೆ ನೀಡಲಿದ್ದಾರೆ. ನಗರದ ಅತ್ಯಂತ ಹೆಚ್ಚು ಸಂಚಾರ ದಟ್ಟಣಿಯುಳ್ಳ 12 ಕಾರಿಡಾರ್‍ಗಳ ರಸ್ತೆಗಳನ್ನು ಗುರುತಿಸಲಾಗಿದೆ.

ಈ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಹಾಗೂ ಸೈಕಲ್ ಲೇನ್ ಸ್ಥಾಪಿಸಿ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ನಿರ್ಧರಿಸುವ ಚಿಂತನೆಯಿದ್ದು, ಪ್ರಸ್ತುತ ಬಿಎಂಟಿಸಿ ಬಳಿ 6,500 ಬಸ್‍ಗಳಿದ್ದು ಹೆಚ್ಚುವರಿಯಾಗಿ 6,500 ಬಸ್‍ಗಳನ್ನು ಸೇರ್ಪಡೆಗೊಳಿಸಲು ಕ್ರಮ ವಹಿಸಲಾಗಿದೆ.

ಬಿಎಂಟಿಸಿಗೆ ಹೊಸ ಬಸ್ ಖರೀದಿಸುವ ಬದಲು ಒಪ್ಪಂದದ ಮೇರೆಗೆ ಬಸ್ ಉತ್ಪಾದಿಸುವ ಕಂಪನಿಗಳಿಂದ ನೇರವಾಗಿ ಬಾಡಿಗೆ ಮೂಲಕ ಬಸ್ ಪಡೆಯುವುದು, ಹೊಸ ಬಸ್‍ಗಳ ಪೈಕಿ ಶೇಖಡಾ 50ರಷ್ಟು ಎಲೆಕ್ಟ್ರಿಕ್ ಬಸ್‍ಗಳನ್ನು ಪಡೆದುಕೊಂಡು,ಇವುಗಳನ್ನು ಪ್ರತ್ಯೇಕ ಲೇನ್ ಸಂಚಾರದಲ್ಲಿ ಬಳಸಿಕೊಳ್ಳುವುದು, ಈ ಮೂಲಕ ಪರಿಸರ ಮಾಲಿನ್ಯ ನಿಯಂತ್ರಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ಸರಕಾರದ ಆರ್ಥಿಕ ನೆರವು ಮೂಲಕ ಬಿಎಂ ಟಿಸಿ ಬಸ್ ದರ ಇಳಿಕೆ ಮಾಡುವ ಕುರಿತಾಗಿ ಸಭೆಯಲ್ಲಿ ನಿರ್ಧಾರಿಸುವ ಚಿಂತನೆಯಿದ್ದು, ಈ ಮೂಲಕ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತೆ ಪ್ರೇರಿಪಿಸಲಾಗುವುದು. ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಯೋಜನೆಯನ್ನು 2023 ರೊಳಗೆ ಪೂರ್ಣಗೊಳಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

2025 ರ ವೇಳೆಗೆ ಬೆಂಗಳೂರು ಮೆಟ್ರೋ ವಿಸ್ತೀರ್ಣವನ್ನು 300 ಕಿಲೋ ಮೀಟರ್ ವಿಸ್ತರಿಸಲು ಸೂಚಿಸಿದ್ದು, ಮೆಟ್ರೋ ಮೂರನೇ ಹಂತವನ್ನು ಹೊಸಕೋಟೆ ಕ್ರಾಸ್ ವರೆಗೆ ವಿಸ್ತರಣೆ ಮಾಡಲು ಸೂಚನೆ ನೀಡಿದ್ದಾರೆ.  ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕೆಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋದರೂ ಕೂಡ ಅದಕ್ಕೆ ಸಿದ್ದತೆ ಮಾಡಿಕೊಂಡಿರುವಂತಿದೆ.

ತಜ್ಞರ ಸಮಿತಿ ಶಿಫಾರಸು ಮೇರೆಗೆ ನಗರದ ಒಟ್ಟಾರೆ ಬೆಳವಣಿಗೆ ಬಗ್ಗೆ ನೀಲನಕ್ಷೆ ಸಿದ್ದಪಡಿಸಲಾಗಿದೆ. ಅವುಗಳಲ್ಲಿ 20 ಎಕರೆ ಪಶ್ಚಿಮ ಬೆಂಗಳೂರಿನಲ್ಲಿರುವ ಮೈಸೂರು ಲ್ಯಾಂಪ್ಸ್ ಆಸ್ತಿಯನ್ನು ಟ್ರೀ ಪಾರ್ಕ್ ಆಗಿ ಮಾಡುವುದು, ಅದು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಮಾದರಿಯಲ್ಲಿರುತ್ತದೆ. ದಕ್ಷಿಣ ಮತ್ತು ಪೂರ್ವ ಬೆಂಗಳೂರಿನಂತೆ ಪಶ್ಚಿಮ ಬೆಂಗಳೂರನ್ನು ಆಧುನೀಕರಣಗೊಳಿಸಬೇಕು ಎಂಬುದಾಗಿದೆ.

ಬೆಂಗಳೂರು ನಗರದ ಕಸ ನಿರ್ವಹಣೆಯಲ್ಲಿ ವೈಜ್ಞಾನಿಕ ಪದ್ದತಿ ಅಳವಡಿಸಿ ಈ ಮೂಲಕ ಸಮರ್ಪಕ ಕಸ ವಿಲೇವಾರಿ, ಬೆಂಗಳೂರು ನಗರದ ಎಲ್ಲಾ ಕೆರೆಗಳ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸುವುದು, ಕೆರೆ ಪ್ರದೇಶಗಳಲ್ಲಿ ಬಡವರು ಮನೆಕಟ್ಟಿದರೆ ಅವುಗಳನ್ನು ಬಿಟ್ಟು ಶ್ರೀಮಂತರು ಹಾಗೂ ಬಿಲ್ಡರ್‍ಗಳು ಒತ್ತುವರಿ ಮಾಡಿದರೆ ಅವುಗಳನ್ನು ತೆರವುಗೊಳಿಸಲು ಸಿಎಂ ಸೂಚಿಸಿರುವುದಾಗಿ ಮೂಲಗಳು ಖಚಿತಪಡಿಸಿವೆ.

ಒಳಚರಂಡಿ ನೀರಿನ ಹರಿಯುವಿಕೆ ಆಧುನೀಕರಣಕ್ಕೆ, ಆನಂದ್ ರಾವ್ ಫ್ಲೈಓವರ್ ಪಕ್ಕ ಒಂದೇ ಸೂರಿನಡಿ ಸರ್ಕಾರಿ ಕಚೇರಿಗಳನ್ನು ಒಟ್ಟಿಗೆ ತರಲು 24 ಮಹಡಿಗಳ ಅವಳಿ ಟವರ್ ಗಳು, ಈ ಎರಡೂ ಕಟ್ಟಡಗಳ ಎರಡೂ ಬದಿಗಳಲ್ಲಿ ಫ್ಲೈಓವರ್ ಅಥವಾ ಬ್ರಿಡ್ಜ್ ನ್ನು ವಿಧಾನಸೌಧಕ್ಕೆ ಸಂಪರ್ಕಿಸಲು, ಉತ್ತಮ ಆಡಳಿತಕ್ಕೆ ಬ್ರಿಡ್ಜ್ ನಿರ್ಮಾಣ ಒಳಗೊಂಡಿದೆ.
ರಸ್ತೆ ಮತ್ತು ಸಂಚಾರಕ್ಕೆ ಸಂಬಂಧಪಟ್ಟ ಘೋಷಣೆಯನ್ನು ಸಹ ಸಿಎಂ ಘೋಷಿಸುವ ನಿರೀಕ್ಷೆಯಿದೆ.

ತಮ್ಮ ಸರ್ಕಾರ 100 ದಿನಗಳ ಆಡಳಿತ ಪೂರ್ಣಗೊಳಿಸಿದ ನಂತರ ಸಿಎಂ ಯಡಿಯೂರಪ್ಪ, ಬೆಂಗಳೂರಿನ ದಿಕ್ಕನ್ನು ಬದಲಿಸಲಾಗುವುದು ಎಂದು ಹೇಳಿದ್ದರು. ನಂತರ ಕೊರೋನಾ ಲಾಕ್ ಡೌನ್ ಬಂತು. ಬಿಬಿಎಂಪಿಯ ಈಗಿನ ಆಡಳಿತಾವಧಿ ಕಳೆದ ಸೆಪ್ಟೆಂಬರ್ ಗೆ ಮುಕ್ತಾಯವಾಗಿದೆ. ಕೌನ್ಸಿ ಲ್ ನ ಅನುಪಸ್ಥಿತಿಯಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಇದರ ಜೊತೆಗೆ ಸರ್ಕಾರ ಪ್ರತ್ಯೇಕ ಬಿಬಿಎಂಪಿ ಮಸೂದೆಯನ್ನು ಬೆಂಗಳೂರಿಗೆ ತಂದು ವಾರ್ಡ್ ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲಿದೆ.

ಬಿಬಿಎಂಪಿಯ ಚುನಾವಣೆ ವಿಳಂಬ ಪ್ರಶ್ನಿಸಿ ಕಾಂಗ್ರೆಸ್ ನ ಮಾಜಿ ಕೌನ್ಸಿಲರ್ ಹೈಕೋರ್ಟ್ ಮೊರೆ ಹೋಗಿದ್ದು, ಮೀಸಲಾತಿ ಅಧಿಸೂಚನೆ ಪ್ರಕಟಿಸಿದ 6 ವಾರಗಳೊಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಹೆಚ್ಚಿನ ಸಮಯಾವಕಾಶ ಬೇಕೆಂದು ಕೋರಿ ಇತ್ತೀಚೆಗೆ ಬಿಬಿಎಂಪಿ ಮಸೂದೆ ಹೊರಡಿಸಿದ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

Facebook Comments