ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಸ್ಪೋಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.20- ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ಸಿಗದವರ ಅಸಮಾಧಾನಗಳ ಸಣ್ಣ ದನಿಗಳು ಅಲ್ಲಲ್ಲಿ ಕೇಳಿ ಬರಲಾರಂಭಿಸಿವೆ.
ಮಂತ್ರಿಮಂಡಲ ವಿಸ್ತರಣೆ ವೇಳೆ ಬೆಳಗಾವಿಯ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗಲಿದೆ ಎಂಬ ವಿಶ್ವಾಸದಿಂದ ಅವರ ಬೆಂಬಲಿಗರು ಬಹಳಷ್ಟು ಮಂದಿ ಬೆಂಗಳೂರಿಗೆ ಆಗಮಿಸಿದ್ದರು.

ಆದರೆ, ಜಾರಕಿಹೊಳಿ ಅವರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ಸಿಗದೇ ಇರುವುದರಿಂದ ಬೆಂಬಲಿಗರು ಸಿಟ್ಟಾಗಿದ್ದು ಮಾಧ್ಯಮಗಳ ಜತೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಯಾವುದೇ ಪಕ್ಷ ಸರ್ಕಾರಕ್ಕೆ ಬಂದರೂ ಜಾರಕಿಹೊಳಿ ಕುಟುಂಬದ ಸಹೋದರರು ಸಚಿವರಾಗುವುದು ಸಾಮಾನ್ಯ. ಕಳೆದ 15 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಾರಕಿಹೊಳಿ ಕುಟುಂಬ ಸಂಪುಟದಿಂದ ಹೊರಗಿದೆ.

ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಾಲಚಂದ್ರ ಜಾರಕಿಹೊಳಿ ಸಚಿವರಾಗಿದ್ದರು. ಆದರೆ, ಈ ಬಾರಿ ಜಾರಕಿಹೊಳಿ ಕುಟುಂಬವನ್ನು ಬಿಜೆಪಿ ಅಧಿಕಾರದಿಂದ ದೂರ ಇಟ್ಟಿದೆ.

ಉಳಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಾದ ಗಂಗಾವತಿಯ ಪರಣ್ಣಮುನವಳ್ಳಿ, ದತ್ತಾತ್ರೇಯ ಪಾಟೀಲ್ ರೇವೂರ ಮತ್ತಿತರರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ಕೊಡಿಸುವಂತೆ ಮನವಿ ಮಾಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಈ ಇಬ್ಬರು ಶಾಸಕರು, ನಾವು ಸಚಿವ ಸ್ಥಾನದ ಆಕಾಂಕ್ಷಿಗಳು. ಆದರೆ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಿರಿಯರು ತೆಗೆದುಕೊಳ್ಳುವ ನಿರ್ಧಾರವನ್ನು ಬೆಂಬಲಿಸುತ್ತೇವೆ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನ ಹೊರ ಹಾಕುವುದಾಗಲಿ, ಪಕ್ಷಕ್ಕೆ ವಿರುದ್ಧವಾಗಿ ಮಾತನಾಡುವುದಾಗಿ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಪರಣ್ಣಮುನವಳ್ಳಿ ಅವರು ನಾನು ಪಕ್ಷದ ಶಿಸ್ತಿನ ಶಿಪಾಯಿ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ರಾಜಕಾರಣದಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ನನಗೆ ಕೈ ತಪ್ಪಿರಬಹುದು. ಮುಂದಿನ ದಿನಗಳಲ್ಲಿ ಪ್ರಯತ್ನ ಮುಂದುವರೆಸುತ್ತೇನೆ. ಸಚಿವ ಸ್ಥಾನ ನೀಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ದತ್ತಾತ್ರೇಯಪಾಟೀಲ್ ರೇವೂರ ಮಾತನಾಡಿ, ಸಚಿವ ಸ್ಥಾನದ ನಿರೀಕ್ಷೆ ಇದ್ದದ್ದು ನಿಜ. ಆದರೆ, ಅವಕಾಶ ಸಿಕ್ಕಿಲ್ಲ. ಹಾಗೆಂದು ಅಸಮಾಧಾನವಿಲ್ಲ. ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೆಚ್ಚಿನ ಅನುದಾನ ಪಡೆದುಕೊಂಡು ಕ್ಷೇತ್ರ ಅಭಿವೃದ್ಧಿಗೆ ಗಮನ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin