ನ.23ರಿಂದ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆಯಾಡಲಿದ್ದಾರೆ ಘಟಾನುಘಟಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.21- ಸರ್ಕಾರದ ಅಳಿವು, ಉಳಿವು ಎಂದೇ ಹೇಳಲಾಗುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಆಡಳಿತರೂಢ ಬಿಜೆಪಿ ಇದೇ 23ರಿಂದ ಪ್ರಚಾರಕ್ಕೆ ಧುಮುಕಲಿದೆ.  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ , ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲು, ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಶ್ರೀರಾಮುಲು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಡಿ.ವಿ.ಸದಾನಂದಗೌಡ ಸೇರಿದಂತೆ ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು ಪ್ರಚಾರ ನಡೆಸಲಿದ್ದಾರೆ.

ಚುನಾವಣಾ ಪ್ರಚಾರ ಕುರಿತಂತೆ ಇಂದು ಪಕ್ಷದ ಕಚೇರಿಯಲ್ಲಿ ಸ್ವತಃ ಚುನಾವಣಾ ಉಸ್ತುವಾರಿಯಾಗಿರುವ ಅರವಿಂದ ಲಿಂಬಾವಳಿ ಅವರು ಇದರ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದರು. 23ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ, ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.

24ರಂದು ಬೆಂಗಳೂರಿನ ಮಹಾಲಕ್ಷ್ಮಿಲೇಔಟ್-ಯಶವಂತಪುರ, 26ರಂದು ಬೆಳಗಾವಿಯ ಜಿಲ್ಲೆಯ ಅಥಣಿ, ಕಾಗವಾಡ, ಗೋಕಾಕ್, 28ರಂದು ಹೊಸಪೇಟೆ ಮತ್ತು 29ರಂದು ಯಲ್ಲಾಪುರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.  ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ 23ರಂದು ಕೆ.ಆರ್.ಪೇಟೆಯಿಂದ ಪ್ರಚಾರ ಆರಂಭಿಸಿ ಬಳಿಕ ಅಥಣಿ, ಕಾಗವಾಡ, 24ರಂದು ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, 25ರಂದು ಹೊಸಪೇಟೆ, ಹುಣಸೂರು, 26ರಂದು ಚಿಕ್ಕಬಳ್ಳಾಪುರ, ಯಶವಂತಪುರ, ಮತ್ತು ಶಿವಾಜಿನಗರದಲ್ಲಿ ಪ್ರಚಾರ ಮಾಡಲಿದ್ದಾರೆ.

ಚುನಾವಣೆಗಾಗಿ ಒಟ್ಟು 4185 ಬೂತ್ ಕಮಿಟಿಗಳನ್ನು ರಚನೆ ಮಾಡಲಾಗಿದ್ದು, ಎರಡೆರಡು ಕಮಿಟಿಗೆ 5 ಜನರ ಸಮಿತಿಯನ್ನು ರಚಿಸಲಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ವಾಟ್ಸಪ್, ಇನ್‍ಸ್ಟೋಗ್ರಾಂ ಬಳಕೆ ಮಾಡಿಕೊಂಡು ಮತದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಲಾಗುವುದು ಎಂದು ಲಿಂಬಾವಳಿ ತಿಳಿಸಿದರು.

ಮುಂದಿನ ಮೂರುವರೆ ವರ್ಷಗಳ ಅವಧಿಗೆ ರಾಜ್ಯದಲ್ಲಿ ಸ್ಥಿರ ಸರ್ಕಾರ ಅಗತ್ಯವಿದ್ದು, ಮತದಾರರು ಈ ಬಾರಿ ನಮ್ಮ ಸರ್ಕಾರವನ್ನು ಕೈ ಹಿಡಿಯುವುದರಲ್ಲಿ ಯಾವುದೇ ಅನುಮಾನ ಬೇಡ. 15 ಕ್ಷೇತ್ರಗಳಲ್ಲೂನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.  ಈಗಾಗಲೇ ಪ್ರತಿಯೊಬ್ಬರಿಗೂ ಅವರವರ ಜವಾಬ್ದಾರಿಗಳನ್ನು ನೀಡಲಾಗಿದೆ. ಎಲ್ಲರೂ ಈಗಾಗಲೇ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿಸ್ಸಂದೇಹವಾಗಿ ಬಿಜೆಪಿ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಳೆ ಕಲಬುರಗಿ ವಿಮಾನ ನಿಲ್ದಾಣ ಸಾರ್ವಜನಿಕರ ಸೇವೆಗೆ ಸಮರ್ಪಣೆ ಯಾಗುತ್ತಿದೆ.ವಿಶೇಷವೆಂದರೆ 2008ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಇದಕ್ಕೆ ಚಾಲನೆ ನೀಡಲಾಗಿತ್ತು. ಈಗ ಪುನಃ ಅವರೆ ಸಮರ್ಪಣೆ ಮಾಡುತ್ತಿರುವುದು ಸಂತಸದ ವಿಷಯ.

ಉಡಾನ್ ಯೋಜನೆಯಡಿ ಈ ವಿಮಾನ ನಿಲ್ದಾಣ ಕಾರ್ಯ ನಿರ್ವಹಿಸುತ್ತದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರನ್ನು ಅಭಿನಂದಿಸುವುದಾಗಿ ಹೇಳಿದರು.
ಇದೇ ವೇಳೆ ಪಕ್ಷದ ಪ್ರಚಾರ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಎ.ಎಚ್.ಆನಂದ್, ಎಸ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Facebook Comments