ಉಪಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಇನ್ನೆರಡು ದಿನ ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.19- ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಒಂದೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಲಿದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನುಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ಎಷ್ಟು ಸಾಧ್ಯವೋ ಅಷ್ಟು ಬೇಗ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಿದೆ ಎಂದು ತಿಳಿದುಬಂದಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ನಾಳೆ ಬೆಳಗ್ಗೆ 8 ಗಂಟೆಗೆ ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್ ಕೆಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ ಮತ್ತಿತರರು ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಪ್ರಮುಖವಾಗಿ ಮಸ್ಕಿ, ಬಸವಕಲ್ಯಾಣ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ. ಅಭ್ಯರ್ಥಿಗಳ ಬಗ್ಗೆ ತೀರ್ಮಾನಿಸಿದ ನಂತರ, ಅವರ ಹೆಸರುಗಳನ್ನು ನವದೆಹಲಿಗೆ ಕಳುಹಿಸಲಾಗುವುದು, ಅಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಶತಾಯಗತಾಯ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಮುಂದಿನ ವಾರದಿಂದ ಕ್ಷೇತ್ರಾದ್ಯಂತ ಕಾರ್ಯಕರ್ತರ ಸಭೆ, ಸಮಾರಂಭಗಳು, ಮನೆ ಮನೆಗೆ ಪ್ರಚಾರ ಸೇರಿದಂತೆ ಹತ್ತು ಹಲವು ಕಾಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ಪ್ರತಾಪ್ ಗೌಡ ಪಾಟೀಲ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಅತ್ಯಂತ ಮುಖ್ಯವಾಗಿದ್ದು, ಅವರಿಗೆ ಟಿಕೆಟ್ ನೀಡುವುದಕ್ಕೂ ಮುನ್ನ ಕೆಲವು ಪ್ರಕ್ರಿಯೆಗಳನ್ನು ನಡೆಸಬೇಕಿದೆ ಎಂದು ಬಿಜೆಪಿ ವಕ್ತಾರರು ಮಾಹಿತಿ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಿಜೆಪಿಗೆ ಅಷ್ಟೇನೂ ಸಮಸ್ಯೆಯಾಗಿ ಪರಿಣಮಿಸಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ಬಿಜೆಪಿ ಪ್ರತಾಪ್ ಗೌಡ ಪಾಟೀಲ್‍ಗೆ ಮಣೆ ಹಾಕುವುದು ಖಚಿತವಾಗಿದೆ.

ಈಗಾಗಲೇ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿನ್ನೆಯಿಂದಲೇ ಮಸ್ಕಿಯಲ್ಲಿ ಬೀಡುಬಿಟ್ಟಿದ್ದು, ಪಕ್ಷದ ಗೆಲುವಿಗೆ ತಮ್ಮದೇ ಆದ ರಣತಂತ್ರ ರೂಪಿಸಿದ್ದಾರೆ. ಬಸವಕಲ್ಯಾಣದಿಂದ ಮಾಜಿ ಸಚಿವ ದಿವಂಗತ ನಾಗಮಾರಪಲ್ಲಿ ಪುತ್ರ ಸೂರ್ಯವಂಶಿ ನಾಗಮಾರಪಲ್ಲಿ, ಮಾಜಿ ಶಾಸಕ ಕೂಬಾ ಹಾಗೂ ಮತ್ತಿತರರು ಆಕಾಂಕ್ಷಿಗಳಾಗಿದ್ದಾರೆ. ಅಂತಿಮವಾಗಿ ಪಕ್ಷದ ಕೋರ್ ಕಮಿಟಿ ಯಾರ ಹೆಸರನ್ನು ಶಿಫಾರಸ್ಸು ಮಾಡುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Facebook Comments