ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಘಟಾನುಘಟಿ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.26- ಕರ್ನಾಟಕ ರಾಜ್ಯ ವಿಧಾನಸಭೆ ಬಜೆಟ್ ಅಧಿವೇಶನ ಮುಕ್ತಾಯಗೊಂಡಿದ್ದು, ಮೂರು ರಾಜಕೀಯ ಪಕ್ಷಗಳು ಉಪ ಚುನಾವಣೆಯತ್ತ ತಮ್ಮ ಗಮನ ಕೇಂದ್ರೀಕರಿಸುತ್ತಿವೆ. ಮಸ್ಕಿ, ಬಸವ ಕಲ್ಯಾಣ ವಿಧಾನಸಭೆ ಉಪ ಚುನಾವಣೆ ಹಾಗೂ ಬೆಳಗಾವಿ ಲೋಕಸಭೆ ಉಪಚುನಾವಣೆ ಕ್ಷೇತ್ರಗಳ ಚುನಾವಣೆಗಾಗಿ ವಿರೋಧ ಪಕ್ಷಗಳು ಈಗಾಗಲೇ ಪ್ರಚಾರ ಆರಂಭಿಸಿವೆ.

ವಿಧಾನ ಮಂಡಲ ಅಧಿವೇಶನವನ್ನು ಮುಂದೂಡುವ ಮೊದಲು ಧನ ವಿಧೇಯಕ ಮಸೂದೆಗೆ ಅಂಗೀಕಾರ ನೀಡಲಾಯಿತು. ಇನ್ನು ರಾಜ್ಯ ವಿಧಾನಸಭೆ ಉಪಚುನಾವಣೆ ಮಾತ್ರವಲ್ಲದೆ ಇತರ ನಾಲ್ಕು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗಳಿಗಾಗಿ ಸಿ.ಟಿ.ರವಿ, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಮತ್ತು ಸುರೇಶ್ ಕುಮಾರ್ ಹಾಗೂ ಸುನೀಲ್ ಕುಮಾರ್ ಅವರನ್ನು ಬಿಜೆಪಿ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

ಸೋಮವಾರದಿಂದ ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರು ಕ್ಷೇತ್ರದಲ್ಲೇ ಮೊಕ್ಕಾಂ ಹೂಡಲಿದ್ದು, ಚುನಾವಣೆ ಪ್ರಕ್ರಿಯೆವರೆಗೂ ಮತದಾರ ರನ್ನು ಓಲೈಸುವಲ್ಲಿ ನಿರತರಾಗಲಿದ್ದಾರೆ. ಶತಾಯ-ಗತಾಯ ಮೂರೂ ಕ್ಷೇತ್ರಗಳನ್ನು ಗೆದ್ದು ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸಬೇಕೆಂದು ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಏನೇ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಒಗ್ಗಟ್ಟಿನಿಂದ ಉಪಚುನಾವಣೆ ಯನ್ನು ಎದುರಿಸಬೇಕು. ಈ ಗೆಲುವು ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯತ್ ಹಾಗೂ 2023ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಯಾಗಲಿದೆ ಎಂಬ ಸಲಹೆ ನೀಡಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಯಾರನ್ನೋ ನಿರ್ದಿಷ್ಟವಾಗಿ ಗುರಿಯಾಗಿಟ್ಟುಕೊಂಡು ಟೀಕಿಸದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಬೇಕು. ವೈಯಕ್ತಿಕ ಟೀಕೆಗಳಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಲಿದೆ ಎಂದು ಕಿವಿಮಾತು ಹೇಳಿದ್ದಾರೆ.

ಸೋಮವಾರ ಮಸ್ಕಿ, ಬಸವ ಕಲ್ಯಾಣ ಹಾಗೂ ಬೆಳಗಾವಿಗೆ ಇಡೀ ಸಂಪುಟದ ದಂಡು ದಾವಿಸಲಿದ್ದು, ಪ್ರಾರಂಭದಲ್ಲಿ ಕೆಆರ್ ಪೇಟೆ ಮತ್ತು ಶಿರಾದಲ್ಲಿ ರೂಪಿಸಿದ ರಣತಂತ್ರವನ್ನೇ ಹೆಣೆಯಲಿದೆ. ಸಣ್ಣ ಸಣ್ಣ ಸಮುದಾಯಗಳನ್ನು ಓಲೈಕೆ ಮಾಡುವುದು, ಮತದಾರರನ್ನು ಮತಗಟ್ಟೆಗೆ ಕರೆತರುವುದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ತಿಳಿ ಹೇಳುವುದು, ಪ್ರತಿ ಬೂತ್‍ಗೂ ನಿಷ್ಠರ ನಿಯೋಜನೆ ಸೇರಿದಂತೆ ಹತ್ತು-ಹಲವು ತಂತ್ರಗಳನ್ನು ಹೆಣೆಯಲಿದೆ.

ಮಸ್ಕಿಯಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಶ್ರೀರಾಮುಲು, ವಿಜಯೇಂದ್ರ, ಠಿಕಾಣಿ ಹೂಡಿದರೆ ಬಸವ ಕಲ್ಯಾಣದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪ್ರಭು ಚೌಹಾಣ್ ಮತ್ತಿತರರು ಪ್ರಚಾರ ನಡೆಸುವರು. ಬೆಳಗಾವಿಯಲ್ಲಿ ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಜಗದೀಶ್ ಶೆಟ್ಟರ್, ಬಿ.ಸಿ.ಪಾಟೀಲ್, ಬಸವರಾಜ ಬೊಮ್ಮಾಯಿ ಸೇರಿದಂತೆ ಘಟಾನುಘಟಿ ನಾಯಕರು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹಿರಂಗ ಸಮಾವೇಶ, ರೋಡ್ ಶೋನಲ್ಲಿ ಭಾಗವಹಿಸಿ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸುವರು.

Facebook Comments