ಉಪಚುನಾವಣೆಯಲ್ಲಿ ಭರ್ಜರಿ ಗೆಲುವು, ಬಿಜೆಪಿ ಕಚೇರಿ ಮುಂದೆ ಸಂಭ್ರಮಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.9- ಉಪಚುನಾವಣೆಯಲ್ಲಿ ಪಕ್ಷವು ಭರ್ಜರಿ ಗೆಲುವು ಸಾಧಿಸಿದ ಕಾರಣ ಮಲ್ಲೇಶ್ವರಂನ ಪಕ್ಷದ ಕಚೇರಿ ಮುಂದೆ ಇಂದು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಲಾಯಿತು. ಚುನಾವಣಾ ಉಸ್ತುವಾರಿ ವಹಿಸಿದ್ದ ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಚೇರಿ ಮುಂದೆ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿದರು.

ಬೆಳಗಿನಿಂದಲೇ ಚಾತಕಪಕ್ಷಿಯಂತೆ ಚುನಾವಣೆಯನ್ನು ಎದುರು ನೋಡುತ್ತಿದ್ದ ಕಾರ್ಯಕರ್ತರು 10 ಗಂಟೆ ನಂತರ ಅಭ್ಯರ್ಥಿಗಳು ಭಾರೀ ಮುನ್ನಡೆ ಸಾಧಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರರಿಗೆ ಜೈಕಾರ ಹಾಕಿ ಘೋಷಣೆಗಳನ್ನು ಕೂಗಿದರು.

ಡೊಲ್ಲು ಕುಣಿತದ ಮೂಲಕ ಸಂಭ್ರಮ ಆಚರಿಸಿದ ಕಾರ್ಯಕರ್ತರು ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಪಕ್ಷದ ಕಚೇರಿ ಮುಂದೆ ಒಂದು ರೀತಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕೆ.ಆರ್.ಪೇಟೆ, ಯಲ್ಲಾಪುರದಲ್ಲಿ ಬಿಜೆಪಿ ಗೆಲುವು ಘೋಷಣೆಯಾಗುತ್ತಿದ್ದಂತೆ ಜಮಾಯಿಸಿದ್ದ ಕಾರ್ಯಕರ್ತರು ಮೊದಲು ಪಟಾಕಿ ಸಿಡಿಸಿದರು. ನಂತರ ಹಿರೇಕೆರೂರು, ಕೆ.ಆರ್.ಪುರಂ, ಮಹಾಲಕ್ಷ್ಮಿಲೇಔಟ್, ವಿಜಯನಗರ ಕ್ಷೇತ್ರಗಳಲ್ಲೂ ವಿಜಯದ ಪತಾಕೆ ಹಾರುತ್ತಿದ್ದಂತೆ ಸಂಭ್ರಮಕ್ಕೇ ಪಾರವೇ ಇರಲಿಲ್ಲ.

Facebook Comments

Sri Raghav

Admin