ನಾಳೆ ಬಿಜೆಪಿಯ ಕೋರ್ ಕಮಿಟಿ ಸಭೆ, ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.18-ರಾಜ್ಯದ ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ನಾಳೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ. ಕೋರ್ ಕಮಿಟಿ ಸಭೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹಾಗೂ ಕೋರ್ ಕಮಿಟಿ ಸದಸ್ಯರು ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಲಿದ್ದು, ಅಭ್ಯರ್ಥಿಗಳ ಬಗ್ಗೆ ತೀರ್ಮಾನಿಸಿದ ನಂತರ, ಅವರ ಹೆಸರುಗಳನ್ನು ನವದೆಹಲಿಗೆ ಕಳುಹಿಸಲಾಗುವುದು, ಅಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಹೆಸರುಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಶತಾಯಗತಾಯ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಮುಂದಿನ ವಾರದಿಂದ ಕ್ಷೇತ್ರಾದ್ಯಂತ ಕಾರ್ಯಕರ್ತರ ಸಭೆ, ಸಮಾರಂಭಗಳು, ಮನೆ ಮನೆಗೆ ಪ್ರಚಾರ ಸೇರಿದಂತೆ ಹತ್ತು ಹಲವು ಕಾಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.

ನಿನ್ನೆ ನಡೆದ ಕ್ಯಾಬಿನೆಟ್ ಅವೇಶನದ ನಂತರ ಅನೌಪಚಾರಿಕ ಚರ್ಚೆಯೊಂದರಲ್ಲಿ ಯಡಿಯೂರಪ್ಪ ಅವರು ತಮ್ಮ ಸಚಿವರಿಗೆ ಕಾಂಗ್ರೆಸ್ ಈ ಮುನ್ನ ಗೆದ್ದಿದ್ದ ಕ್ಷೇತ್ರಗಳಾದ ಮಸ್ಕಿ, ಬಸವಕಲ್ಯಾಣದಲ್ಲಿ ಪ್ರಚಾರ ನಡೆಸಬೇಕು ಮತ್ತು ಗೆಲುವನ್ನು ಖಚಿತಪಡಿಸಬೇಕು ಎಂದು ಸೂಚನೆ ಕೊಟ್ಟಿರುವುದಾಗಿ ತಿಳಿದುಬಂದಿದೆ. ಬಿಜೆಪಿ ಇದುವರೆಗೆ ಉಪಚುನಾವಣೆಗಳಲ್ಲಿ ಉತ್ತಮ ದಾಖಲೆ ಕಾಯ್ದುಕೊಂಡಿದೆ, ಕರ್ನಾಟಕದಲ್ಲಿ ನಡೆದ 17 ವಿಧಾನಸಭಾ ಉಪಚುನಾವಣೆಗಳಲ್ಲಿ 14ರಲ್ಲಿ ಗೆಲುವು ಸಾಸಿದೆ.

ಪ್ರತಿಷ್ಠೆಯ ಕಣವಾಗಿ ರೂಪುಗೊಂಡಿರುವ ಈ ಉಪಚುನಾವಣೆಗೆ ಮತ್ತೊಮ್ಮೆ ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಮೂರು ಕ್ಷೇತ್ರಗಳಿಗೆ ಉಸ್ತುವಾರಿಯ ಜೊತೆಗೆ ನಾಲ್ಕು ಸಚಿವರು ಮೊಕ್ಕಾಂ ಹೂಡುವುದು ಕಡ್ಡಾಯವಾಗಿದೆ. ಈ ಬಗ್ಗೆ ಸಂಪುಟದ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ.

ಅಧಿವೇಶನ ಮುಗಿದ ಬಳಿಕ ಕ್ಷೇತ್ರಗಳಿಗೆ ತೆರಳಿ, ಚುನಾವಣೆ ಮುಗಿಯುವವರೆಗೂ ಅಲ್ಲಿಯೇ ಇರಬೇಕು. ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ. ವಿವಾದಗಳಿಂದ ಬಿಜೆಪಿ ಈಗಾಗಲೇ ಮುಜುಗರ ಅನುಭವಿಸುತ್ತಿದೆ. ಚುನಾವಣೆ ವೇಳೆ ಎಲ್ಲ ಸಚಿವರೂ ವಿವಾದಗಳಿಂದ ದೂರ ಇರಬೇಕು. ಕಾಂಗ್ರೆಸ್ ಓಟಕ್ಕೆ ಬ್ರೇಕ್ ಹಾಕಬೇಕಾದರೆ ಉದಾಸೀನ ತೋರದೆ ಗೆಲ್ಲುವವರೆಗೂ ಯಾರೂ ವಿರಮಿಸಬಾರದು ಎಂದು ಸಚಿವರಿಗೆ ಸೂಚನೆ ಕೊಡಲಾಗಿದೆ.

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಈವರೆಗೂ ಅಂತಿಮಗೊಳಿಸಿಲ್ಲ. ಬಸವಕಲ್ಯಾಣದಿಂದ ಸ್ಪರ್ಧೆ ಮಾಡುವಂತೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರಗೆ ಅವಕಾಶವಿದ್ದರೂ ಇಬ್ಬರೂ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇವರಿಬ್ಬರ ಹೊರತಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಸರತ್ತು ನಡೆಸುತ್ತಿದೆ. ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ ಸದ್ದು ಮಾಡುತ್ತಿದ್ದರೂ ಬಾಲಚಂದ್ರ ಜಾರಕಿಹೊಳಿ ಹೆಗಲಿಗೆ ಚುನಾವಣೆ ಉಸ್ತುವಾರಿ ಜವಾಬ್ದಾರಿ ನೀಡಲು ಬಿಜೆಪಿ ಮುಂದಾಗಿದೆ.

ಇದು ಬಾಲಚಂದ್ರ ಅವರಿಗೆ ಅಗ್ನಿಪರೀಕ್ಷೆಯಾಗಿದ್ದು, ಸಿ.ಡಿ ವಿವಾದದ ಮಧ್ಯೆಯೂ ಅಭ್ಯರ್ಥಿಯನ್ನು ಗೆಲ್ಲಿಸಿ, ತಮ್ಮ ಸಾಮಥ್ರ್ಯ ಮತ್ತೆ ಋಜುವಾತು ಮಾಡಿಕೊಳ್ಳಬೇಕಿದೆ. ಮಸ್ಕಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲಿರುವ ಪ್ರತಾಪ್‍ಗೌಡ ಪಾಟೀಲ್ ಬೇಡಿಕೆಯಂತೆ ವಿಜಯೇಂದ್ರ ಅವರಿಗೆ ಚುನಾವಣೆ ಜವಾಬ್ದಾರಿ ನೀಡಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕೆ.ಆರ್.ಪೇಟೆ ಹಾಗೂ ಶಿರಾದಲ್ಲಿ ಮೋಡಿ ಮಾಡಿದ್ದ ವಿಜಯೇಂದ್ರ, ಮಸ್ಕಿಯಲ್ಲೂ ಪಕ್ಷವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರೆ ಪಕ್ಷದಲ್ಲಿ ಮತ್ತಷ್ಟು ಪ್ರಬಲ ನಾಯಕನಾಗಿ ಹೊರಹೊಮ್ಮುವ ಅವಕಾಶ ಇದೆ. ಬಿಜೆಪಿಯ ಈ ಲೆಕ್ಕಾಚರ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

Facebook Comments

Sri Raghav

Admin