ಕಾಂಗ್ರೆಸ್ ವಿನಾಶಕಾಲ ಸನ್ನಿಹಿತ : ಅರುಣ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.19- ಕಾಂಗ್ರೆಸ್ ಸ್ವಯಂಕೃತ ಅಪರಾಧಗಳಿಂದ ವಿನಾಶದ ಅಂತಿಮ ಕಾಲಘಟ್ಟದಲ್ಲಿದೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.

ದಾವಣಗೆರೆಯಲ್ಲಿಂದು ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತವಿದ್ದಾಗ ಫಲಾನುಭವಿಗಳಿಗೆ ಶೇ.15ರಷ್ಟು ಹಣ ತಲುಪುತ್ತಿತ್ತು. ಆದರೆ, ಈಗ 100ಕ್ಕೆ ನೂರರಷ್ಟು ಹಣ ಜನರನ್ನು ತಲುಪುತ್ತಿದೆ ಎಂದು ಸಮರ್ಥಿಸಿಕೊಂಡರು.
ಉಜ್ವಲ ಗ್ಯಾಸ್, ವಿದ್ಯುತ್ ಸಂಪರ್ಕ, ಜನ್‍ಧನ್, ಕಿಸಾನ್ ಸಮ್ಮಾನ್ ಯೋಜನೆ ಸೇರಿ ಎಲ್ಲ ಯೋಜನೆಗಳ ಕುರಿತು ಜನರಿಗೆ ತಿಳಿಸಿ ಪಕ್ಷ ಸಂಘಟಿಸಲು ಸಲಹೆ ನೀಡಿದರು.

ಸ್ವದೇಶದಲ್ಲೇ ಕೋವಿಡ್ ಲಸಿಕೆ ಸಂಶೋಧನೆ, ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಲಾಯಿತು. 70 ಕೋಟಿಗೂ ಹೆಚ್ಚು ಜನರಿಗೆ ಈಗಾಗಲೇ ಲಸಿಕೆ ಕೊಡಲಾಗಿದೆ ಎಂದರಲ್ಲದೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ದ್ವಂದ್ವ ನೀತಿಯನ್ನು ಜನರ ಮುಂದಿಡಬೇಕು ಎಂದರು.

ಕೇಂದ್ರ- ರಾಜ್ಯ ಸರಕಾರದ ಐತಿಹಾಸಿಕ ಸಾಧನೆಗಳನ್ನು ಜನರ ಮುಂದಿಡಬೇಕು. ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಮುಖಂಡರಿಗೆ ಪಾಠ ಕಲಿಸಿ. ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚು ಆಕ್ರಮಣಕಾರಿಯಾಗಿ ಕೆಲಸ ನಿರ್ವಹಿಸಬೇಕಿದೆ. ಪ್ರಚಾರ- ಪ್ರಸಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಬೇಕಿದೆ ಎಂದು ಸಲಹೆ ಮಾಡಿದರು.

ಬೆಳಗಾವಿ, ಕಲಬುರ್ಗಿ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿಗೆ ಮೇಯರ್ ಸ್ಥಾನ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ರಾಜ್ಯದ ಸರ್ವಾಂಗೀಣ ವಿಕಾಸ ಆರಂಭಗೊಂಡಿದ್ದು, ಆ ವಿಕಾಸ ಯಾತ್ರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಮುಂದುವರಿದಿದೆ. ನೂತನ ಮುಖ್ಯಮಂತ್ರಿ, ಕರ್ನಾಟಕದ ನೂತನ ಸಚಿವರಿಗೂ ಚಪ್ಪಾಳೆ ಮೂಲಕ ಅಭಿನಂದನೆ ಸೂಚಿಸಲು ತಿಳಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಿರಂತರ ವಿಜಯಯಾತ್ರೆ ನಮ್ಮದಾಗಿತ್ತು. ಶಾಸಕರ ಆಯ್ಕೆಗಾಗಿ ಉಪ ಚುನಾವಣೆಗಳು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಳಿಸಿದ ಗೆಲುವು ನಿರಂತರವಾಗಿರಲಿ ಎಂದು ಆಶಿಸಿದರು.

ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್‍ಗಳಲ್ಲಿ ಗೆಲುವು ನಮ್ಮದಾಗಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಎರಡು ಬಹುಮತ ಗಳಿಸಿ ಮತ್ತೆ ಕರ್ನಾಟಕದಲ್ಲಿ ಅಕಾರ ಪಡೆಯಲು ಶ್ರಮಿಸಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಪ್ರಯತ್ನ ನಡೆಸಿ ಎಂದರು.

6 ದಶಕಗಳ ಕಾಲ ದೇಶದ ಆಡಳಿತ ಮಾಡಿದ ಕಾಂಗ್ರೆಸ್ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಮನೆ ನಿರ್ಮಾಣ, ಮನೆ ಮನೆಗೆ ನಳ್ಳಿ ನೀರು ಒದಗಿಸುವುದು, ಗ್ಯಾಸ್ ಸಂಪರ್ಕ, ಆರೋಗ್ಯ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ವಿಫಲವಾಗಿತ್ತು. ಈ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯ ಕೇಂದ್ರ ಸರಕಾರ ಅತ್ಯದ್ಭುತವಾಗಿ ಕೆಲಸ ಮಾಡಿ ಜನಸೇವೆ ಮಾಡುತ್ತಿದೆ ಎಂದು ತಿಳಿಸಿದರು.

Facebook Comments

Sri Raghav

Admin