ಮಹದಾಯಿ ಹಾಗೂ ರೈತ ಹೋರಾಟಗಾರರ ಮೇಲಿನ ಪ್ರಕರಣಗಳ ವಾಪಸ್‍ಗೆ ಸರ್ಕಾರ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.2- ಬಿಜೆಪಿ ಸರ್ಕಾರ ರೈತ ಹೋರಾಟಗಾರರು, ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣಗಳ ಜೊತೆಗೆ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ವಿರುದ್ಧದ 62 ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದೆ.

ಹುಣಸೂರು ವಿದ್ಯಾರ್ಥಿಗಳ ಪ್ರಕರಣ, ಬೆಳಗಾವಿ ನಗರ ಮಾರ್ಕೆಟ್ ಗಲಾಟೆ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ. ವೈಯಕ್ತಿಕ ಪ್ರಕರಣಗಳು ಹಾಗೂ ಗಂಭೀರ ಸ್ವರೂಪದ ಮೊಕದ್ದಮೆಗಳನ್ನು ವಾಪಸ್ ಪಡೆದಿಲ್ಲ ಎಂದು ಸರ್ಕಾರ ಸಮಜಯಿಷಿ ನೀಡಿತ್ತು.

ಆದರೆ, ಹೋರಾಟಗಾರರ ಹೆಸರಲ್ಲಿ ಸರ್ಕಾರ ತನ್ನ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧದ ಗಂಭೀರ ಸ್ವರೂಪದ ಪ್ರಕರಣಗಳನ್ನೂ ಹಿಂದಕ್ಕೆ ಪಡೆದುಕೊಂಡಿದೆ. ಡಿಜಿ, ಐಜಿಪಿ ಕಚೇರಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯ ಗಳ ಇಲಾಖೆ, ಕಾನೂನು ಇಲಾಖೆ ಬಹುತೇಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಆದರೆ, ಜುಲೈ 22ರಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ 62 ಪ್ರಕರಣಗಳನ್ನು ಹಿಂಪಡೆಯುವುದು ಸೂಕ್ತ ಎಂದು ಸಂಪುಟ ಸಭೆಗೆ ಶಿಫಾರಸು ಮಾಡಿತ್ತು. ಅದರಂತೆ ಸಂಪುಟ ಸಭೆ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾದ 62 ಪ್ರಕರಣಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ.

ಪ್ರಕರಣ ಮುಕ್ತರಾದ ಬಿಜೆಪಿ ನಾಯಕರಾರು?: ಮೊನ್ನೆ ಆಗಸ್ಟ್ 20ಕ್ಕೆ ನಡೆದ ಸಂಪುಟ ಸಭೆಯಲ್ಲಿ ಸರ್ಕಾರ ಒಟ್ಟು 62 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ತೀರ್ಮಾನಿಸಿದೆ.

ಸಂಪುಟ ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಮೇಲಿನ ಪ್ರಕರಣವನ್ನು ವಾಪಸ್ ಪಡೆಯಲಾಗಿದೆ. 2017 ಡಿಸೆಂಬರ್ 3ರಂದು ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ಜಾಥಾ ನಡೆಸಲು ಯತ್ನಿಸಿದ್ದರು.

114 ನಿಷೇಧಾಜ್ಞಾ ಇದ್ದರೂ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಲು ಮುಂದಾಗಿದ್ದರು. ಸಂಸದ ಪ್ರತಾಪ್ ಅವರನ್ನು ಪೊಲೀಸರು ಅಡ್ಡ ಹಾಕಿದ್ದರು. ಆದರೆ, ಬ್ಯಾರಿಕೇಡ್ ಮೇಲೆ ಕಾರನ್ನು ವೇಗವಾಗಿ ನುಗ್ಗಿಸಿದ್ದರು.

ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಐಪಿಸಿ 279, 353, 188 ಮತ್ತು 332ರಡಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದೀಗ ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಈ ಪ್ರಕರಣವನ್ನು ವಾಪಸ್ ಪಡೆಯಲಾಗಿದೆ.  ಅದೇ ರೀತಿ ಹನುಮ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಸಿದ ಹಿನ್ನೆಲೆ ಹುಣಸೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿ ರುವ ಬೆಂಬಲಿಗರ ವಿರುದ್ಧದ ಪ್ರಕರಣವನ್ನೂ ವಾಪಸ್ ಪಡೆಯಲು ನಿರ್ಧರಿಸಲಾಗಿದೆ.

ರೇಣುಕಾಚಾರ್ಯ ಬೆಂಬಲಿಗರ ಕೇಸ್ ವಾಪಸ್: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಬೆಂಬಲಿಗರ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ.  2019 ಫೆಬ್ರುವರಿ 6ರಂದು ದಾವಣ ಗೆರೆಯ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಎಂ.ಪಿ.ರೇಣುಕಾಚಾರ್ಯರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿತ್ತು.

ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ರೇಣುಕಾಚಾರ್ಯರ ಜಯಗಳಿಸಿದ್ದಕ್ಕಾಗಿ ಬಿಜೆಪಿ ಬೆಂಬಲಿಗರು ಹೊನ್ನಾಳಿ ಪಟ್ಟಣದಲ್ಲಿ ಜೈಕಾರ ಹಾಕುತ್ತಾ, ಅಕ್ರಮ ಗುಂಪು ಕಟ್ಟಿಕೊಂಡಿದ್ದರು. ಕಾಂಗ್ರೆಸ್ ಮುಖಂಡರಾದ ಹೆಚ್ ಪಿ.ಮಂಜಪ್ಪ ಅವರ ಮನೆ ಹತ್ತಿರ ಬೈದಾಡಿಕೊಂಡು ಸುತ್ತಾಡಿದ್ದರು. ಮುಖಂಡರ ಮನೆಯವರೊಂದಿಗೆ ಜಗಳ ಮಾಡಿ, ಹಲ್ಲೆಗೆ ಮುಂದಾಗಿದ್ದರಲ್ಲದೆ ಜೊತೆಗೆ ಕೊಲೆ ಯತ್ನ ಹಿನ್ನೆಲೆ ಮಂಜಪ್ಪರ ಸಹೋದರನ ಅಂಗಡಿ ಮುಂದೆ ಪಟಾಕಿ ಸಿಡಿಸಲು ಹೋಗಿದ್ದರು.

ಆ ವೇಳೆ ಅಲ್ಲಿ ಜಗಳವಾಡಿ ಇಬ್ಬರಿಗೆ ಚಾಕು ಇರಿದ ಆರೋಪವಿತ್ತು. ಈ ಸಂಬಂಧ ಹೊನ್ನಾಳಿ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 231/2018 ಕಲಂನಡಿ 143, 144, 147, 148 ಮತ್ತು 504, 307, 323, 324 ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಹಿಂದಕ್ಕೆ ಪಡೆಯಲಾಗಿದೆ.

ಸಚಿವ ಬಿ.ಸಿ.ಪಾಟೀಲ್ ಬೆಂಬಲಿಗರ ಮೇಲೆ ಹಾವೇರಿಯ ರಟ್ಟಿಹಳ್ಳಿ ಠಾಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ದೊಂಬಿ ನಡೆಸಿದ ಹಿನ್ನೆಲೆ ದಾಖಲಾದ ಪ್ರಕರಣ ವಾಪಸ್. ಸರ್ಕಾರಿ ವಾಹನ ಜಖಂ, ಆಸ್ತಿಪಾಸ್ತಿ ನಾಶ, ಅಧಿಕಾರಿಗಳಿಗೆ ಗಾಯ ಮಾಡಿದ ಗಂಭೀರ ಆರೋಪವಿತ್ತು. ಪ್ರಕರಣ ವಾಪಸ್? ಪಡೆಯಲು ಸಚಿವರು ಮನವಿ ಮಾಡಿದ್ದರು.

Facebook Comments