ಬಿಜೆಪಿಯ ಸರ್ಕಾರದ 100 ದಿನ ಸಂಭ್ರಮಾಚರಣೆಗೂ ಬಣ ಕಲಹ ಅಡ್ಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.16-ಹಲವು ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿಯಲ್ಲಿ ಇದೀಗ ಸರ್ಕಾರದ 100 ದಿನದ ಸಂಭ್ರಮಾಚರಣೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ ನವೆಂಬರ್ 2ಕ್ಕೆ ನೂರು ದಿನಗಳನ್ನು ಪೂರೈಸುತ್ತಿದೆ.

ಹಲವು ಅಡೆತಡೆಗಳ ನಡುವೆಯೂ ಶತಕ ಪೂರೈಸಿರುವ ಸಿಎಂ ಯಡಿಯೂರಪ್ಪನವರು ಸರ್ಕಾರದ ವತಿಯಿಂದ ಅದ್ಧೂರಿ ಯಾಗಿ ಸಂಭ್ರಮಾ ಚರಣೆ ಮಾಡಲು ತೀರ್ಮಾನಿಸಿ ದ್ದಾರೆ. ಆದರೆ ಇದಕ್ಕೂ ಕೂಡ ಕೊಕ್ಕೆ ಹಾಕಲು ಮುಂದಾಗಿರುವ ಬಿಜೆಪಿಯ ಒಂದು ಬಣ, ನೂರು ದಿನದ ಸಂಭ್ರಮಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸುವ ಬದಲು ಪಕ್ಷದ ಕಾರ್ಯಕ್ರಮವಾಗಿ ರೂಪಿಸುವಂತೆ ಪಟ್ಟು ಹಿಡಿದಿದೆ.

ಹೀಗಾಗಿ ಇದು ಸಿಎಂ ಬಿಎಸ್‍ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ನಡುವೆ ಮತ್ತೊಂದು ಸುತ್ತಿನ ಸಂಘರ್ಷವನ್ನು ಸೃಷ್ಟಿಸಿದೆ. ನ.2ರಂದು ತಮ್ಮ ಸರ್ಕಾರ 100 ದಿನ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕೇಂದ್ರಗಳು ಸೇರಿದಂತೆ ಮತ್ತಿತರೆಡೆ ಈ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಶಾಸಕರು, ಸಚಿವರು ಸೇರಿದಂತೆ ಮತ್ತಿತರರಿಗೆ ಸೂಚನೆ ನೀಡಿದ್ದರು.

ಅಲ್ಲದೆ, 100 ದಿನದ ಅವಧಿಯಲ್ಲಿ ಸರ್ಕಾರ ಕೈಗೊಂಡಿರುವ ಯೋಜನೆಗಳು ಪ್ರವಾಹ ಪರಿಸ್ಥಿತಿ ನಿಯಂತ್ರಣ, ಸರ್ಕಾರ ಕೈಗೊಂಡಿರುವ ಕ್ರಮಗಳು ಸೇರಿದಂತೆ ಮತ್ತಿತರ ಕಾರ್ಯಖ್ರಮಗಳ ಪಟ್ಟಿಯನ್ನು ಸಿದ್ದಪಡಿಸುವಂತೆ ಇಲಾಖಾವಾರು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದರು.

ಈ ವಿಷಯ ತಲುಪುತ್ತಿದ್ದಂತೆ ನಳೀನ್‍ಕುಮಾರ್ ಕಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕಾರ್ಯಕ್ರಮವೆಂದರೆ ಈ ಶ್ರೇಯಸ್ಸು ಕೇವಲ ಮುಖ್ಯಮಂತ್ರಿ ಅವರ ಸಂಪುಟ ಸಹೋದ್ಯೋಗಿ ಗಳಿಗೆ ಮಾತ್ರ ಸಲ್ಲುತ್ತದೆ. ಇದರ ಬದಲು ಪಕ್ಷದ ವತಿಯಿಂದ ನಡೆಸಿದರೆ ಪಕ್ಷ ಸಂಘಟನೆ, ಕಾರ್ಯಕರ್ತರು, ಮುಖಂಡರಿಗೂ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಬಿಜೆಪಿ ವತಿಯಿಂ ದಲೇ ಈ ಕಾರ್ಯಕ್ರಮವನ್ನು ಆಯೋಜಿಸುವಂತೆ ಜಿಲ್ಲಾಧ್ಯಕ್ಷರಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನವೆಂಬರ್ 2 ರಂದು ಬಿಎಸ್‍ವೈ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋ ಜನೆಗೆ ಸಿದ್ಧತೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಬದಲು ಕೇಂದ್ರದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು, ಶಾಸಕರು ಹಾಗೂ ಪಕ್ಷದ ಮುಖಂಡರು ಸೇರಿದಂತೆ ಒಟ್ಟು ಒಂದು ಲಕ್ಷ ಕಾರ್ಯಕರ್ತರನ್ನು ಸೇರಿಸುವ ಯೋಜನೆ ಹಾಕಿಕೊಂಡಿದ್ದರು.

100 ದಿನದಲ್ಲಿ ಸರ್ಕಾರ ಯಾವ ರೀತಿ ಜನಪರ ಕೆಲಸ ಮಾಡಿದೆ, ಯಾವ ಯಾವ ಕಾರ್ಯಕ್ರಮ ಗಳನ್ನು ಅನುಷ್ಠಾನ ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿದ್ದರೂ ಸಮ್ಮಿಶ್ರ ಸರ್ಕಾರದ ಸಾಲವನ್ನು ಮುಂದುವರೆಸಿರುವುದು, ನೆರೆ ಯಿಂದ ಮನೆ ಮಠ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಕೈಗೊಂಡ ಕಾರ್ಯಕ್ರಮಗಳು, ಇದರ ಫಲಾನುಭವಿಗಳಿಗೆ ಪರಿಹಾರ ವಿತರಿಸುವುದು ಬಿಎಸ್‍ವೈ ಅವರ ಲೆಕ್ಕಾಚಾರವಾಗಿತ್ತು.

ಜಿಲ್ಲಾವಾರು ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಈ ಫಲಾನುಭವಿಗಳನ್ನು ಅವರವರ ಗ್ರಾಮದಿಂದ ಬೆಂಗಳೂರಿಗೆ ಕರೆತರುವ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿರ್ದೇಶನ ನೀಡಿದ್ದರು.  ಯಾವಾಗ ಯಡಿಯೂರಪ್ಪ ಒನ್ ಮ್ಯಾನ್ ಶೋ ನಡೆಸುತ್ತಿದ್ದಾರೆ ಎಂಬುದು ತಿಳಿಯಿತೋ ನಳೀನ್‍ಕುಮಾರ್ ಕಟೀಲ್ ಇದಕ್ಕೆ ತಗಾದೆ ತೆಗೆದಿದ್ದಾರೆ.

ಇದು ಏಕವ್ಯಕ್ತಿ ಕಾರ್ಯಕ್ರಮವಾಗುವುದರಿಂದ ಬದಲಿಗೆ ಪಕ್ಷದ ವತಿಯಿಂದಲೇ ಆಯೋಜಿಸೋಣ. ಜೊತೆಗೆ ಲೋಕಸಭೆ ಚುನಾವಣೆ ನಂತರ ಕೇಂದ್ರ ಸರ್ಕಾರ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾರರು ಅಭೂತಪೂರ್ವ ಬೆಂಬಲ ಕೊಟ್ಟಿದ್ದಾರೆ. ಫಲಿತಾಂಶ ಪ್ರಕಟವಾದ ಬಳಿಕ ಪ್ರಧಾನಿ ಮೋದಿಯಿಂದಾಗಲಿ, ಪಕ್ಷದ ವತಿಯಿಂದಾಗಲಿ ಕೃತಜ್ಞತೆ ಸಲ್ಲಿಸಿಲ್ಲ.

ಹೀಗಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370ನೇ ಸ್ಥಾನಮಾನವನ್ನು ರದ್ದುಗೊಳಿಸಿರುವುದು, ತ್ರಿವಳಿ ತಲಾಕ್ ರದ್ಧತಿ ಸೇರಿದಂತೆ ಮೋದಿಯವರ ಜನಪರ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಲೆಕ್ಕಾಚಾರ ಕಟೀಲ್ ಅವರದ್ದಾಗಿದೆ.

ಹೀಗಾಗಿ ನೂರು ದಿನದ ಸಂಭ್ರಮಾಚರಣೆ ಮತ್ತೊಮ್ಮೆ ಯಡಿಯೂರಪ್ಪ ಮತ್ತು ಕಟೀಲ್ ನಡುವೆ ಸಂಘರ್ಷದ ಹಾದಿಯನ್ನು ಸೃಷ್ಟಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಪಕ್ಷದಲ್ಲಿ ಹಂತ ಹಂತವಾಗಿ ಕಡೆಗಣಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಪದಾಧಿಕಾರಿಗಳ ನೇಮಕಾತಿ, ಸಂಪುಟಕ್ಕೆ ಸಚಿವರ ಸೇರ್ಪಡೆ, ಖಾತೆ ಹಂಚಿಕೆ, ಜಿಲ್ಲಾ ಉಸ್ತುವಾರಿ ಸೇರಿದಂತೆ ಪ್ರತಿಯೊಂದರಲ್ಲೂ ಕೇಂದ್ರ ಬಿಜೆಪಿ ವರಿಷ್ಠರು ಬಿಎಸ್‍ವೈಗೆ ಕಡಿವಾಣ ಹಾಕುತ್ತಿದ್ದಾರೆ.

ಯಡಿಯೂರಪ್ಪ ಅಧ್ಯಕ್ಷರಾಗಿದ್ದ ವೇಳೆ ಪಕ್ಷದ ಕಚೇರಿಗೆ ನೇಮಕ ಮಾಡಿಕೊಂಡಿದ್ದ ಸಿಬ್ಬಂದಿಯನ್ನು ಕಳೆದ ವಾರವಷ್ಟೆ ಕಟೀಲ್ ತೆಗೆದು ಹಾಕಿದ್ದರು. ಇದೀಗ 100 ದಿನ ಸಂಭ್ರಮಾ ಚರಣೆಯೂ ಮತ್ತೆ ಪಕ್ಷ ಮತ್ತು ಸರ್ಕಾರದ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವುದರಿಂದ ಮುಂದೆ ನಡೆಯುವ ಬೆಳೆವಣಿಗೆಗಳು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ