ಮೈತ್ರಿ ಸರ್ಕಾರದ ಮಹತ್ವದ ಯೋಜನೆ ಎಳ್ಳುನೀರು ಬಿಡಲು ಮುಂದಾದ ಬಿಜೆಪಿ ಸರ್ಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.2- ಖಜಾನೆ ಖಾಲಿಯಾಗಿದೆ ಎಂಬ ನೆಪದಲ್ಲಿ ಕೆಲವು ಮಹತ್ವದ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿರುವ ಬಿಜೆಪಿ ಸರ್ಕಾರ, ಮೈತ್ರಿ ಸರ್ಕಾರದಲ್ಲಿ ಜಾರಿಗೆ ತಂದ ಬಡವರ ಬಂಧು ಕಾರ್ಯಕ್ರಮಕ್ಕೆ ಎಳ್ಳುನೀರು ಬಿಡಲು ನಿರ್ಧರಿಸಿದೆ.ಆರ್ಥಿಕ ಅಶಕ್ತರು, ಬೀದಿಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿಯಲ್ಲಿ ಸರ್ಕಾರವೇ ನಿತ್ಯ ಸುಮಾರು 10 ಸಾವಿರ ರೂ.ವರೆಗೂ ಕೈ ಸಾಲ ಕೊಡುವ ಮಹತ್ವದ ಯೋಜನೆಯನ್ನು ಕೈಬಿಡಲು ಮುಂದಾಗಿದೆ.

ಖಾಸಗಿ ಲೇವಾದೇವಿದಾರರ ಶೋಷಣೆಯಿಂದ ಬೀದಿಬದಿ ವ್ಯಾಪಾರಿಗಳನ್ನು ರಕ್ಷಿಸುವ ಸಲುವಾಗಿ ಈ ಮಹತ್ವದ ಯೋಜನೆಯನ್ನು 2018ರ ನವೆಂಬರ್ 22 ರಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಜಾರಿಗೊಳಿಸಿದ್ದರು.

ಬಡವರ ಬಂಧು ಯೋಜನೆ ಬಿಜೆಪಿ ಸರ್ಕಾರ ಬಂದಾಗಿನಿಂದ ಬಹುತೇಕ ನೆನೆಗುದಿಗೆ ಬಿದ್ದಿದೆ. ಇದೀಗ ಈ ಯೋಜನೆಗೆ ಸಂಪೂರ್ಣವಾಗಿ ಇತಿಶ್ರೀ ಹಾಡಲು ಮುಖ್ಯಮಂತ್ರಿಯಡಿಯೂರಪ್ಪ ನೇತೃತ್ವದ ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ. ಇದೇ ಮಾರ್ಚ್ 5ರಂದು ಮಂಡಿಸಲಿರುವ ರಾಜ್ಯ ಬಜೆಟ್‍ನಲ್ಲಿ ಬಡವರ ಬಂಧು ಯೋಜನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿಯ ಬಜೆಟ್‍ನಲ್ಲಿ ಬಡವರ-ಬಂಧು ಯೋಜನೆಗೆ ಸರ್ಕಾರ ಹಣ ನಿಗದಿ ಮಾಡುವುದಿಲ್ಲ ಎಂದು ತಿಳಿದುಬಂದಿದೆ.

ಬೀದಿಬದಿ ವ್ಯಾಪಾರಿಗಳು, ತಳ್ಳುವ ಗಾಡಿ ಹೊಂದಿರುವ ವ್ಯಾಪಾರಿಗಳು, ಮೋಟಾರ್ ವಾಹನದಲ್ಲಿ ಪಾನೀಯ, ಊಟ, ತಿಂಡಿ, ಸಿಹಿ ಪದಾರ್ಥ ಮಾರಾಟ ಮಾಡುವವರು, ಹಣ್ಣು-ಹೂವು, ತರಕಾರಿ ಮಾರುವವರು, ರಸ್ತೆ ಬದಿಯ ಬುಟ್ಟಿ ವ್ಯಾಪಾರಿಗಳು, ಪಾದರಕ್ಷೆ ಸೇರಿದಂತೆ ಚರ್ಮದ ಉತ್ಪನ್ನಗಳ ರಿಪೇರಿ, ಮಾರಾಟ ಮಾಡುವವರು, ಆಟದ ಸಾಮಾನುಗಳು ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಬಡವರ ಬಂಧು ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.

ಯೋಜನೆ ಜಾರಿಯಾದ 2018-19ನೇ ಸಾಲಿನಲ್ಲಿ 50 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ ಬಡವರ ಬಂಧು ಯೋಜನೆ ಜÁರಿಯಾದ ಬಳಿಕ ಇದುವರೆಗೆ ಸುಮಾರು 11 ಸಾವಿರ ವ್ಯಾಪಾರಿಗಳಷ್ಟೇ ಯೋಜನೆಯ ಲಾಭ ಪಡೆದಿದ್ದಾರೆ.  ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಯೋಜನೆ ಪಡೆದುಕೊಂಡಿದ್ದ ವೇಗ ಬಿಜೆಪಿ ಅಸ್ತಿತ್ವಕ್ಕೆ ಬಂದ ಬಳಿಕ ಕುಂಠಿತವಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಯೋಜನೆಗೆ ಸಮರ್ಪಕವಾಗಿ ಹಣ ಬಿಡುಗಡೆಯಾಗದೇ ಹಂತಹಂತವಾಗಿ ಯೋಜನೆ ಮಹತ್ವ ಕಳೆದುಕೊಳ್ಳುತ್ತಾ ಬಂದಿದೆ.

Facebook Comments

Sri Raghav

Admin