ಕೊರೋನಾ ನಿಭಾಯಿಸುವಲ್ಲಿ ವಿಫಲರಾದ ಸಚಿವರಿಗೆ ‘ಸರ್ಜರಿ’ ಮಾಡಲು ಮುಂದಾದ ಬಿಜೆಪಿ ವರಿಷ್ಠರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 28- ಕೊರೋನಾ ವೈರಸ್ ಬಿಕ್ಕಟ್ಟನ್ನು ಸಮರ್ಪಕವಾಗಿ ನಿಭಾಯಿಸಲು ವಿಫಲರಾಗಿರುವ ಕೆಲವು ಮಂತ್ರಿಗಳ ಖಾತೆ ಸೇರಿದಂತೆ ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ಕೇಂದ್ರ ಬಿಜೆಪಿ ವರಿಷ್ಟರು ತೀರ್ಮಾನಿಸಿದ್ದಾರೆ.

ಆ ಮೂಲಕ ಸರ್ಕಾರವನ್ನು ಮತ್ತಷ್ಟು ಭದ್ರಪಡಿ ಪಕ್ಷ ಸಂಘಟನೆಯ ಗುರಿಯನ್ನು ಕೇಂದ್ರ ಬಿಜೆಪಿ ಇಟ್ಟುಕೊಂಡಿದೆ. ಈಗ ಸಧ್ಯಕ್ಕೆ ಇರುವ ಮಾಹಿತಿಯ ಪ್ರಕಾರ ಸಚಿವರಾದವರಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಉತ್ತಮ ಕೆಲಸ ಮಾಡಿದ್ದಾರೆ. ಉಳಿದವರ ಕಾರ್ಯವೈಖರಿ ಸರಿಯಾಗಿಲ್ಲ. ತಮ್ಮ ಇಲಾಖೆಗಳಲ್ಲೂ ಉತ್ತಮ ಕೆಲಸ ಮಾಡಿಲ್ಲ. ಹೀಗಾಗಿ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬೆರಳಿಣಿಕೆಯ ಕೆಲ ಸಚಿವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಉಳಿದ ಸಚಿವರು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಪ್ರತಿಪಕ್ಷಗಳು ಸಹಾ ಆಡಳಿತರೂಡ ಸರ್ಕಾರ ವೈಪಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರ ವಿರುದ್ದ ಮುಗಿಬೀಳಲು ಸಜಾಗಿವೆ.

ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ವರಿಷ್ಟರು, ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವುದನ್ನೇ ಎದುರು ನೋಡುತ್ತಿದ್ದು, ಕೆಲಸ ಮಾಡದಿರುವ ಸಚಿವರಿಗೆ ಸಾಧ್ಯವಾದರೆ, ಸಂಪುಟದಿಂದಲೇ ಕೋಕ್ ನೀಡುವುದು, ಇಲ್ಲವೇ ಕೆಲವರ ಖಾತೆಗಳನ್ನು ಬದಲಾವಣೆ ಮಾಡಲು ಮುಂದಾಗಿದ್ದಾರೆ.

ಪ್ರಾರಂಭದಲ್ಲಿ ಎಲ್ಲಾ ಸಚಿವರು ಚುರುಕುನಿಂದ ಕೆಲಸ ಮಾಡಿದರೂ ನಂತರ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದಾಗ ತಮ್ಮ ಕ್ಷೇತ್ರ ಬಿಟ್ಟು ಕದಲಿಲ್ಲ. 78 ರ ಇಳಿ ವಯಸ್ಸಿನಲ್ಲೂ ಯಡಿಯೂರಪ್ಪ ಜನ ನಾಚುವಂತೆ ಆಹೋರಾತ್ರಿ ಕೆಲಸ ಮಾಡಿದ್ದಕ್ಕೆ ಪ್ರತಿಪಕ್ಷ ಸೇರಿದಂತೆ ಸಾರ್ವಜನಿಕ ವಲಯದಲ್ಲೂ ಪ್ರಶಂಸೆ ವ್ಯಕ್ತವಾಗಿತ್ತು.

ಯಡಿಯೂರಪ್ಪನವರ ಜೊತೆ ಕೆಲ ಸಚಿವರು ಕೈ ಜೋಡಿಸಿದ್ದರೆ, ಪಕ್ಕದ ಕೇರಳದಂತೆ ಕರ್ನಾಟಕದಲ್ಲೂ ಕೊರೋನಾ ನಿಯಂತ್ರನ ಮಾಡುಬಹುದಿತ್ತು. ಅಲ್ಲಿನ ಮುಖ್ಯಮಂತ್ರಿ ಪೀಣರಾಯ್ ಗೆ ಸಂಪುಟದ ಸಹೋದ್ಯೋಗಿಗಳು ಸಾಥ್ ನೀಡಿದ್ದರಿಂದ ದೇಶದಲ್ಲೇ ಕೇರಳ ರಾಜ್ಯ ಮೊದಲ ಸ್ಥಾನಕ್ಕೆ ಬರಲು ಸಾಧ್ಯವಾಯಿತು.

ಕರ್ನಾಟಕದಲ್ಲಿ ಇದು ಏಕೆ ಸಾಧ್ಯವಾಗಲಿಲ್ಲ ಎಂದು ವರಿಷ್ಟರು ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಮತ್ತು ಕೇಂದ್ರವನ್ನು ಪ್ರತಿನಿಸುವ ರಾಜ್ಯದ ಸಚಿವರನ್ನು ಪ್ರಶ್ನೆಸಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಕೊರೊನಾ ವೈರಸ್ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದ ರೀತಿಯನ್ನು ಬಿಜೆಪಿ ಹೈಕಮಾಂಡ್ ಗಮನಿಸಿದೆ. ಆದರೆ ಸಚಿವರ ವಿಷಯಕ್ಕೆ ಬಂದರೆ ಅಭಿಪ್ರಾಯ ಹಾಗಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಸಂಪುಟ ಸಹೋದ್ಯೊಗಿಗಳಿಗೆ ಈಗಲೇ ಆತಂಕ ಶುರುವಾಗಿದೆ.

ಕೆಲವೊಂದಿಷ್ಟು ಸಚಿವರು ಲಾಕ್‍ಡೌನ್ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ಕಂಡುಬಂದಿಲ್ಲ. ಇಡೀ ರಾಜ್ಯ ಸಂಕಷ್ಟದ ಸ್ಥಿತಿ ಎದರಿಸುತ್ತಿರುವಾಗ ಮನೆಯಿಂದ ಹೊರಗೆ ಬರದಿದ್ದ ಸಚಿವರೂ ಇದ್ದಾರೆ. ಹೀಗಾಗಿ ಈಗ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಆಯಾ ಇಲಾಖೆಗಳ ಸಚಿವರ ಸಾಧನೆ, ಕಾರ್ಯವೈಖರಿ ಪರಾಮರ್ಶೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚಿಸಿದ್ದಾರೆ.

ನಡ್ಡಾ ಅವರ ಸೂಚನೆಯಂತೆ ಇದೀಗ ರಾಜ್ಯ ಬಿಜೆಪಿಯು ಸಚಿವರ ಕಾರ್ಯವೈಖರಿ ಹಾಗೂ ಲಾಕ್‍ಡೌನ್ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಿದ ರೀತಿಯನ್ನು ಪರಾಮರ್ಶೆ ಮಾಡುತ್ತಿದೆ. ಆದುದರಿಂದ ಹಲವು ಸಚಿವರಿಗೆ ಕೋಕ್ ಕೊಡುವ ಮುನ್ಸೂಚನೆ ಈಗಾಗಲೇ ಸಿಕ್ಕಿದೆ.

ಅದರಂತೆ ರಾಜ್ಯ ಬಿಜೆಪಿ ಮತ್ತು ಬಗ್ಗೆ ಖಾಸಗಿ ಸಂಸ್ಥೆಯಿಂದ ಸಚಿವರ ಕಾರ್ಯವೈಖರಿಯ ಸಮೀಕ್ಷೆ ಆರಂಭಿಸಲಾಗಿದೆ. ಎರಡೂ ಸರ್ವೆ ಆಧರಿಸಿ ಸಚಿವರಿಗೆ ಕೋಕ್ ಕೊಡಲು ತೀರ್ಮಾನಿಸಲಾಗಿದೆ. ಸರ್ಕಾರ ಹಾಗೂ ಬಿಜೆಪಿ ರಾಜ್ಯ ಘಟಕ ಕೊಡುವ ವರದಿ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಅಧ್ಯಕ್ಷರೊಂದಿಗೆ ಚರ್ಚಿಸಿ ಸಿಎಂ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮರ್ಥರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲು ಚರ್ಚೆ ನಡೆದಿದೆ. ಜೊತೆಗೆ ಕೆಲವರ ಖಾತೆಗಳನ್ನೂ ಬದಲಾವಣೆ ಮಾಡಿಸುವ ಸಂಬಂಧವೂ ಪಕ್ಷದಲ್ಲಿ ಚರ್ಚೆ ಆಗಿದೆ.

ಸಮುದಾಯಗಳನ್ನು ಪ್ರತಿನಿಸುವ ಹಿರಿಯ ಸಚಿವರನ್ನು ಕೈಬಿಡುವುದು ಸಮಂಜಸವಾಗುವುದಿಲ್ಲ. ಹೀಗಾಗಿ ಸಮುದಾಯದ ನಾಯಕರು ಎಂದು ಗುರುತಿಸಿಕೊಂಡಿರುವ ಹಿರಿಯ ಸಚಿವರ ಖಾತೆ ಬದಲಾವಣೆ ಮಾಡಿ. ಅಂಥವರಿಗೆ ಮಹತ್ವವಲ್ಲದ ಖಾತೆಗಳನ್ನು ಕೊಡಿ.

ಆ ಮೂಲಕ ಸಮುದಾಯಕ್ಕೂ ಮನ್ನಣೆ ಕೊಟ್ಟಂತಾಗುತ್ತದೆ. ಕೆಲಸ ಮಾಡುವ ಅರ್ಹ ಶಾಸಕರಿಗೆ ಪ್ರಭಾವಿ ಖಾತೆಗಳನ್ನು ಕೊಡಲು ಬಿಜೆಪಿ ತೀರ್ಮಾನಿಸಿದೆ. ಇನ್ನು ಸಚಿವರು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿ, ಮಂತ್ರಿಸ್ಥಾನ ಗಿಟ್ಟಿಸಿಕೊಂಡಿರುವವರನ್ನು ಸಂಪುಟದಿಂದ ಕೈಬಿಡದಿರಲು ತೀರ್ಮಾನಿಸಲಾಗಿದೆ.

ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿ ಮಂತ್ರಿಯಾದವರು ಸಾಧ್ಯವಾದಷ್ಟು ಕೆಲಸಗಳನ್ನು ಕಡಿಮೆ ಕಾಲದಲ್ಲಿ ಮಾಡಿದ್ದಾರೆ. ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದೆ ವಿರೋಧ ಪಕ್ಷಗಳ ಟೀಕೆಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ಹೀಗಾಗಿ ಬಿಜೆಪಿ ಸೇರಿ ಶಾಸಕರಾಗಿ ಮಂತ್ರಿಗಳಾಗಿರುವ 9 ಜನರಿಗೆ ಸಧ್ಯಕ್ಕೆ ಯಾವುದೇ ತೊಂದರೆಯಿಲ್ಲ.

ಹೀಗಾಗಿ ಬಿಜೆಪಿಗೆ ಬಂದು ಚುನಾಯಿತರಾಗಿ ಮಂತ್ರಿಗಳಾದವರನ್ನು ಸಂಪುಟದಿಂದ ಕೈಬಿಡದಿರಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿಯಿದೆ.ಲಾಕ್ಡೌನ್ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲು ತೀರ್ಮಾನ ಮಾಡಲಾಗಿದೆ.

ಸರಳ ಕಾರ್ಯಕ್ರಮದ ಮೂಲಕ ಜನಹಿತ ಕಾರ್ಯಕ್ರಮ ಮಾಡಿರುವುದನ್ನು ಜನರಿಗೆ ತಿಳಿಸುವ ಗುರಿಯನ್ನು ಸರ್ಕಾರ ಹಾಗೂ ಬಿಜೆಪಿ ಹೊಂದಿವೆ.

Facebook Comments

Sri Raghav

Admin