ಜಿಎಸ್‍ಟಿ ಪಾಲು ಕೇಳುವ ಧೈರ್ಯವಿಲ್ಲದೆ ಆರ್‌ಬಿಐನಿಂದ ಸಾಲ ಪಡೆಯಲು ಮುಂದಾದ ಬಿಜೆಪಿ ಸರ್ಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು-ಕೋವಿಡ್-19 ಪರಿಣಾಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆ ಕೇಂದ್ರ ಸರಕಾರ ಸರಕು ಸೇವಾ ತೆರಿಗೆ(ಜಿಎಸ್‍ಟಿ)ಯನ್ನು ನೀಡದ ಕಾರಣ, ರಾಜ್ಯ ಸರಕಾರವು ಅನಿವಾರ್ಯವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ( ಆರ್ ಬಿಐ)ನಿಂದ ಸಾಲ ಪಡೆಯಲು ಮುಂದಾಗಿದೆ.

ಜಿಎಸ್‍ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಯನ್ನು ಸಾಲವಾಗಿ ಪಡೆಯುವ ಆಯ್ಕೆಯನ್ನು ಕೇಂದ್ರ ಸರ್ಕಾರದ ಮುಂದಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ ಎಂದು ಸಿಎಂ ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.

ಈ ಸಂಬಂಧ ಇಂದು ಕೆಲವು ಹಿರಿಯ ಸಚಿವರು ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಅಂತಿಮವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆಯುವ ಮಹತ್ವದ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆ.

ಜಿಎಟಿ ಪರಿಹಾರದ ಬಾಕಿ ಹಣ ರಾಜ್ಯಗಳ ಹಕ್ಕಾಗಿದ್ದರೂ ಈ ಬಾರಿ ಕೋವಿಡ್ ಕಾರಣ ಅದನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಅಲ್ಲದೇ ಬೇಕಿದ್ದರೇ ರಾಜ್ಯ ಸರಕಾರಗಳು ಬಾಕಿ ಮೊತ್ತ ಹೊಂದಿಸಿಕೊಳ್ಳಲು ಸಾಲ ಎತ್ತುವ ಆಯ್ಕೆ ನೀಡಿತ್ತು. ಕೇಂದ್ರ ಸರಕಾರ ನೀಡಿದ್ದ ಎರಡು ಆಯ್ಕೆಗಳಲ್ಲಿ ಯಾವುದನ್ನು ಬಳಸಿಕೊಳ್ಳಲಿದೆ ಎಂಬ ಕುತೂಹಲ ಮಾತ್ರ ಉಳಿದಿತ್ತು.

ಜಿಎಸ್‍ಟಿ ಪರಿಹಾರ ಮೊತ್ತ ನೀಡುವ ಸಂಬಂಧ ಕೇಂದ್ರ ಸರ್ಕಾರ ಎರಡು ಆಯ್ಕೆಗಳನ್ನು ರಾಜ್ಯಗಳ ಮುಂದೆ ಇಟ್ಟಿತ್ತು. ಆಯ್ಕೆ ಒಂದರ ಪ್ರಕಾರ, ಜಿಎಸ್‍ಟಿ ಅನುಷ್ಠಾನದಿಂದ ಉಂಟಾಗಿರುವ ಕೊರತೆಯನ್ನು ಸಾಲವಾಗಿ ಪಡೆಯಬಹುದು. ಆಯ್ಕೆ ಎರಡರ ಪ್ರಕಾರ, ಕೋವಿಡ್ ಪರಿಣಾಮ ಸೇರಿದಂತೆ ಜಿಎಸ್‍ಟಿ ಅನುಷ್ಠಾನದಿಂದ ಉಂಟಾಗುವ ಆದಾಯ ಕೊರತೆಯನ್ನು ಸಾಲವಾಗಿ ಪಡೆಯುವುದು.

ಈ ಎರಡೂ ಆಯ್ಕೆಗಳ ಬಗ್ಗೆ ಮೌಲ್ಯಮಾಪನ ನಡೆಸಿದ ಬಳಿಕ, ಮೊದಲ ಆಯ್ಕೆಯಿಂದ ರಾಜ್ಯದ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಭಾವಿಸಲಾಗಿದೆ. ಹೀಗಾಗಿ, ಈ ಆಯ್ಕೆಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಪ್ರಕಾರ ರಾಜ್ಯ ಸರಕಾರವು 18 ಸಾವಿರ ಕೋಟಿ ರೂ ಸಾಲಗಾರನಾಗಲು ಒಪ್ಪಿದ್ದು, ಈ ಹಣವನ್ನು ಮುಂದಿನ ದಿನಗಳಲ್ಲಿ ಬರುವ ಜಿಎಸ್ಟಿ ಸಂಗ್ರದಲ್ಲಿಯೇ ವಾಪಸ್ ಪಡೆಯಲಿದೆ. ಮೊದಲ ಆಯ್ಕೆಯ ಅಡಿಯಲ್ಲಿ, ಕರ್ನಾಟಕವು ಒಟ್ಟು 18,289 ಕೋಟಿ ಪರಿಹಾರ ಪಡೆಯಲು ಅರ್ಹವಾಗಿದೆ. ಇದರಲ್ಲಿ ? 6,965 ಕೋಟಿ ಸಂಗ್ರಹಿಸಿದ ಸೆಸ್‍ನಿಂದ ಬರುತ್ತದೆ.

ಉಳಿದ 11,324 ಕೋಟಿಯನ್ನು ಸಾಲ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಭವಿಷ್ಯದಲ್ಲಿ ಪರಿಹಾರ ಸೆಸ್ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿಯತಿಯ ಸಂಪೂರ್ಣ ಹೊರೆ ಪೂರೈಸಲಾಗುವುದು. ಅಲ್ಲದೆ, ರಾಜ್ಯದ ನಿವ್ವಳ ಆಂತರಿಕ ಉತ್ಪನ್ನದ (ಜಿಎಎಸ್‍ಡಿಪಿ) ಶೇ 1ರಷ್ಟು ( 18,036 ಕೋಟಿ) ಹೆಚ್ಚುವರಿ ಸಾಲವನ್ನು ಯಾವುದೇ ಷರತ್ತಿಗೆ ಒಳಪಡದೆ ಪಡೆಯಲು ಅವಕಾಶವಿದೆ.

ಕೇಂದ್ರ ಸರ್ಕಾರದ ಇದೇ ಮೇ ತಿಂಗಳಲ್ಲಿ ಹೊರಡಿಸಿದ ಆದೇಶದಂತೆ ಕೆಲವು ಸುಧಾರಣೆಗಳನ್ನು ಮಾಡಿದರೆ, ಜಿಎಸ್‍ಡಿಪಿಯ ಶೇ 1ರಷ್ಟು ಸಾಲ ಪಡೆದುಕೊಳ್ಳಬಹುದು. ಅಗತ್ಯವಿದ್ದರೆ, ಈ ಹೆಚ್ಚುವರಿ ಸಾಲವನ್ನು ಮುಂದಿನ ಹಣಕಾಸು ವರ್ಷಕ್ಕೆ ಕೊಂಡೊಯ್ಯಬಹುದು’ ಎಂದು ಹೇಳಿದ್ದಾರೆ.

ಎರಡನೇ ಆಯ್ಕೆಯಲ್ಲಿ ಕರ್ನಾಟಕ 25,508 ಕೋಟಿ ಪರಿಹಾರ ಪಡೆಯಲು ಅರ್ಹವಾಗಿದೆ. ಇದರಲ್ಲಿ 6,965 ಸಂಗ್ರಹಿಸಿದ ಸೆಸ್‍ನಿಂದ ಬರುತ್ತದೆ. ಉಳಿದ 18,543 ಕೋಟಿಗಳಿಗೆ ಮಾರುಕಟ್ಟೆ ಸಾಲದ ಮೂಲಕ ಸಾಲ ಪಡೆಯಲು ಅವಕಾಶ ಇದೆ. ಆದರೆ, ಜಿಎಸ್‍ಡಿಪಿಯ ಶೇ 1ರಷ್ಟು (18,036 ಕೋಟಿ) ಸಾಲ ಪಡೆಯಲು ರಾಜ್ಯವು ಕೆಲವು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ.

ಇದರಿಂದ ರಾಜ್ಯ ಪಡೆಯಬಹುದಾದ ಸಾಲದ ಮೊತ್ತವು ಗಣನೀಯವಾಗಿ, ಅಂದರೆ 10,817 ಕೋಟಿವರೆಗೂ ಕಡಿಮೆಯಾಗಲಿದೆ. ಅಲ್ಲದೆ, ಈ ಆಯ್ಕೆ ಮಾಡಿಕೊಂಡರೆ ಮಾರುಕಟ್ಟೆ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯ ತನ್ನ ಸಂಪನ್ಮೂಲದಿಂದ ಪಾವತಿಸಬೇಕಾಗುತ್ತದೆ’ ಎಂದೂ ಅವರು ತಿಳಿಸಿದ್ದಾರೆ.

# ಬಿಜೆಪಿಯೇತರ ಮುಖ್ಯಮಂತ್ರಿಗಳ ವಿರೋಧ  : 
ಈ ಮಧ್ಯೆ ಸಾಲ ಎತ್ತುವ ಕೇಂದ್ರ ಸರಕಾರದ ಸಲಹೆಗೆ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ನಿಲುವು ಬದಲಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಜಿಎಸ್‍ಟಿ ವ್ಯವಸ್ಥೆ ಜಾರಿಯಿಂದಾಗಿ ರಾಜ್ಯಗಳಿಗೆ ಈ ವರ್ಷ ಉಂಟಾಗುವ ನಷ್ಟವನ್ನು ಭರಿಸಿಕೊಳ್ಳಲು ರಾಜ್ಯ ಸರ್ಕಾರಗಳೇ ಸಾಲ ಮಾಡಬೇಕು ಎಂದು ಹೇಳಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯ ರಾಜ್ಯಗಳು ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿವೆ.

ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ನೀಡಿರುವ ಎರಡು ಆಯ್ಕೆಗಳಲ್ಲಿ ಯಾವುದು ತಮಗೆ ಅನುಕೂಲಕರವಾಗಿವೆ ಎಂದು ನಿಷ್ಕರ್ಷಿಸಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿವೆ. ಆದರೆ, ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯಿರುವ ರಾಜ್ಯಗಳು ಕೇಂದ್ರ ಸರ್ಕಾರವೇ ಬೇಕಿದ್ದರೆ ಸಾಲ ಮಾಡಿ ತಮಗಾಗಿರುವ ನಷ್ಟಭರಿಸಬೇಕು. ಅದರ ಬದಲು ತಮಗೇ ಸಾಲ ಮಾಡಲು ಹೇಳುತ್ತಿರುವುದು ಸರಿಯಲ್ಲ ಎಂಬ ನಿಲುವು ತಾಳಿವೆ.

ಸಾಲ ಮಾಡಲು ಅಥವಾ ಹಣ ಸಂಗ್ರಹಿಸಲು ರಾಜ್ಯಗಳಿಗಿಂತ ಕೇಂದ್ರ ಸರ್ಕಾರಕ್ಕೇ ಹೆಚ್ಚು ಅವಕಾಶಗಳಿವೆ. ಬಹಳ ಕಡಿಮೆ ಬಡ್ಡಿ ದರದಲ್ಲಿ ಕೇಂದ್ರ ಸರ್ಕಾರ ಸಾಲ ತರಬಹುದು. ರಾಜ್ಯಗಳು ಸಾಲ ಮಾಡಬೇಕು ಎಂಬ ಸೂಚನೆಗೆ ನಮ್ಮ ವಿರೋಧವಿದೆ. ಸಾಲ ಮಾಡುವಂತೆ ಕೇಂದ್ರ ಸರ್ಕಾರ ನಮ್ಮ ಮೇಲೆ ಒತ್ತಡ ಹೇರುತ್ತಿದೆ.

ಇತ್ತೀಚೆಗೆ ನಡೆದ ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2020-21ನೇ ಸಾಲಿನಲ್ಲಿ ರಾಜ್ಯಗಳಿಗೆ ಆಗುವ ನಷ್ಟವನ್ನು ಭರಿಸಲು 2 ಆಯ್ಕೆ ನೀಡಿದ್ದರು. ಮೊದಲನೆಯ ಆಯ್ಕೆಯಾಗಿ, 97,000 ಕೋಟಿ ರು. ನಷ್ಟವನ್ನು ಭರಿಸಿಕೊಳ್ಳಲು ರಾಜ್ಯಗಳು ಆರ್‍ಬಿಐನಿಂದ ಸಾಲ ಪಡೆಯಬಹುದು.

ಇದಕ್ಕೆ ಕೇಂದ್ರ ಸರ್ಕಾರ ಬಡ್ಡಿ ಪಾವತಿಸುತ್ತದೆ. ಎರಡನೆಯ ಆಯ್ಕೆಯಾಗಿ, ಈ ಸಾಲಿನಲ್ಲಿ ಒಟ್ಟಾರೆ ಆಗುವ 2.35 ಲಕ್ಷ ಕೋಟಿ ರು. ನಷ್ಟದಲ್ಲಿ ಇಡೀ ಮೊತ್ತಕ್ಕೆ ರಾಜ್ಯಗಳು ಮಾರುಕಟ್ಟೆಯಿಂದ ಸಾಲ ಪಡೆಯಬಹುದು. ಇದಕ್ಕೆ ರಾಜ್ಯಗಳೇ ಬಡ್ಡಿ ಪಾವತಿಸಬೇಕು. ಆದರೆ, ರಾಜ್ಯಗಳ ಒಟ್ಟಾರೆ ಸಾಲದ ಲೆಕ್ಕದಲ್ಲಿ ಇದನ್ನು ಪರಿಗಣಿಸುವುದಿಲ್ಲ.

ಈ ಎರಡು ಆಯ್ಕೆಗಳ ಮೂಲಕ ಕೇಂದ್ರ ಸರ್ಕಾರ ತಾನು ಪಾವತಿಸಬೇಕಿದ್ದ ಜಿಎಸ್‍ಟಿ ನಷ್ಟವನ್ನು ರಾಜ್ಯಗಳ ಹೆಗಲ ಮೇಲೆ ಹಾಕಲು ಮುಂದಾಗಿದೆ ಎಂದು ವಿರೋಧ ವ್ಯಕ್ತವಾಗಿದೆ.

# ಜಿಎಸ್‍ಟಿ ಪರಿಹಾರ ಎಂದರೇನು ?
ಕೇಂದ್ರ ಸರ್ಕಾರ ಪರೋಕ್ಷ ತೆರಿಗೆಗಳನ್ನೆಲ್ಲ ಸೇರಿಸಿ 2017ರಲ್ಲಿ ಹೊಸ ಏಕರೂಪ ತೆರಿಗೆ ಪದ್ಧತಿ (ಜಿಎಸ್‍ಟಿ) ಜಾರಿಗೊಳಿಸಿದಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವು ತೆರಿಗೆಗಳ ಮೇಲೆ ತಮಗಿದ್ದ ಹಕ್ಕುಗಳನ್ನು ಕಳೆದುಕೊಂಡವು. ಈ ಹೊಸ ತೆರಿಗೆಯಿಂದ ರಾಜ್ಯ ಸರ್ಕಾರಗಳ ಮೇಲೆ ಮುಂದಿನ ಐದು ವರ್ಷಗಳವರೆಗೆ ಉಂಟಾಗುವ ಆದಾಯ ನಷ್ಟವನ್ನು ಕೇಂದ್ರವು ಸರಿದೂಗಿಸಬೇಕು ಎಂಬ ಷರತ್ತಿನ ಮೇಲೆ ರಾಜ್ಯ ಸರ್ಕಾರಗಳು ಇದಕ್ಕೆ ಸಮ್ಮತಿಸಿದ್ದವು.

ಕೇಂದ್ರ ಸರ್ಕಾರ ಐಷಾರಾಮಿ ವಸ್ತುಗಳು ಮತ್ತು ಲಿಕ್ಕರ್, ಆಟೊಮೊಬೈಲ್, ತಂಪು ಪಾನೀಯ ಮತ್ತು ತಂಬಾಕು ಉತ್ಪನ್ನಗಳ ಮಾರಾಟಗಾರರಿಂದ ಸೆಸ್ ಸಂಗ್ರಹಿಸಿ, ರಾಜ್ಯಗಳಿಗೆ ಪರಿಹಾರ ವಿತರಿಸಬೇಕು. ರಾಜ್ಯ ಸರ್ಕಾರಗಳೂ ಜಿಎಸ್‍ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆ2017 ರ ಅಡಿಯಲ್ಲಿ 2022 ರವರೆಗೆ ವಾರ್ಷಿಕ ಆದಾಯದ ಆಧಾರದ ಮೇಲೆ, ಪ್ರತಿ ವರ್ಷ ಶೇ 14ರಷ್ಟುನ್ನು ಕೇಂದ್ರಕ್ಕೆ ಪಾವತಿಸುವುದಾಗಿ ಆಶ್ವಾಸನೆ ನೀಡಿತ್ತು.

ಕೇಂದ್ರ ಸರ್ಕಾರ ಆಗಸ್ಟ್‍ನಿಂದ ನವೆಂಬರ್‍ವರೆಗೆ ಬಾಕಿ ಉಳಿಸಿಕೊಂಡಿದ್ದ ಜಿಎಸ್‍ಟಿ ಪರಿಹಾರ ಹಣವನ್ನು ರಾಜ್ಯಗಳಿಗೆ ವಿತರಿಸಿತು. ಆದರೆ, ಪರಿಹಾರದ ಹಣ ನೀಡಲು ಬಹಳ ಸತಾಯಿಸಿತು. ಈ ವರ್ಷ ಮಾರ್ಚ್ ತಿಂಗಳವರೆಗೆ ಉಳಿದಿರುವ ಪರಿಹಾರ ಹಣವನ್ನು ಜುಲೈನಲ್ಲಿ ನೀಡಿದೆ. ರಾಜ್ಯ ಸರ್ಕಾರಗಳೂ ಏಪ್ರಿಲ್ ತಿಂಗಳಿಂದ ಯಾವುದೇ ಹಣವನ್ನು ಕೇಂದ್ರಕ್ಕೆ ಪಾವತಿಸಿಲ್ಲ.

ಕೇರಳ, ಕರ್ನಾಟಕ , ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮಬಂಗಾಳ, ರಾಜಸ್ಥಾನ, ಛತ್ತೀಸಗಡ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಈ ಪರಿಹಾರದ ಹಣ ಪಾವತಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ವಾಗ್ದಾನದಿಂದ ಹಿಂದೆ ಸರಿಯಬಾರದು ಎಂದು ಎಚ್ಚರಿಸಿವೆ.

Facebook Comments

Sri Raghav

Admin