ಸಿಎಂ ಕಾರ್ಯವೈಖರಿ ವಿರುದ್ಧ ಶಾಸಕರ ಅಸಮಾಧಾನ, ವರದಿ ಕೇಳಿದ ಹೈಕಮಾಂಡ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.8- ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ಯಪಡಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ವರದಿ ನೀಡುವಂತೆ ಬಿಜೆಪಿ ಹೈಕಮಾಂಡ್ ಪಕ್ಷದ ರಾಜ್ಯ ಘಟಕಕ್ಕೆ ಸೂಚನೆ ನೀಡಿದೆ.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವಂತೆ ಪಕ್ಷದ ಕೆಲ ನಾಯಕರು ಹೈಕಮಾಂಡ್‍ಗೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಈ ಬೆಳವಣಿಗೆಗಳ ನಡುವೆಯೇ ಯಡಿಯೂರಪ್ಪ ವಿರುದ್ದ ಸಿಡಿದೆದ್ದಿರುವ ಅತೃಪ್ತ ಬಣ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಚೇರಿ ಪೂಜೆ ನೆಪದಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೆ ದೂರು ಸಲ್ಲಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಯಡಿಯೂರಪ್ಪ ಅವರನ್ನು ನಿಯಂತ್ರಿಸಿ. ಇಲ್ಲ ನಾಯಕತ್ವ ಬದಲಿಸಿ ಎಂದು ದೂರು ನೀಡಿದ್ದಾರೆ ಎನ್ನಲಾಗಿತ್ತು.

ನಿಗಮ, ಮೀಸಲಾತಿ ಘೋಷಣೆಗಳ ಮೂಲಕ ಹಲವು ಸಮುದಾಯಗಳ ಮೇಲೆ ಹಿಡಿತ ಸಾಸಲು ಪ್ರಯತ್ನಿಸುತ್ತಿದ್ದಾರೆ. ಸ್ವಜನಪಕ್ಷಪಾತ, ಕುಟುಂಬದ ಹಸ್ತಕ್ಷೇಪ ಮಿತಿ ಮೀರುತ್ತಿದೆ. ಕೂಡಲೇ ಅವರನ್ನು ನಿಮ್ಮ ಹಿಡಿತಕ್ಕೆ ತೆಗೆದುಕೊಳ್ಳಿ. ಅಥವಾ ನಾಯಕತ್ವ ಬದಲಾವಣೆ ಮಾಡುತ್ತೀರಾ ಎಂದಾದರೇ ಅದಕ್ಕೂ ನಮ್ಮ ಅಭ್ಯಂತರ ಇಲ್ಲ ಎಂದು ತಿಳಿಸಿದ್ದಾರೆ ಎಂದು ಎನ್ನಲಾಗಿದೆ.

ಇದರ ನಡುವೆಯೇ ಯಡಿಯೂರಪ್ಪನವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಅವರ ಅಳಲನ್ನು ಆಲಿಸಿ ವಿಸ್ತೃತ ವರದಿ ನೀಡುವಂತೆ ವರಿಷ್ಠರು ರಾಜ್ಯದ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಕಳೆದ ವಾರ ಎರಡು ದಿನಗಳ ಭೇಟಿಗೆ ರಾಜ್ಯಕ್ಕೆ ಬಂದಿದ್ದ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಇಂತಹದ್ದೊಂದು ಸೂಚನೆಯನ್ನು ರವಾನೆ ಮಾಡಿದ್ದಾರೆ. ಅರುಣ್ ಸಿಂಗ್ ಬೆಂಗಳೂರಿಗೆ ಬಂದಿದ್ದ ವೇಳೆ ಕೆಲ ಬಿಜೆಪಿ ಶಾಸಕರು ಅವರನ್ನು ಭೇಟಿ ಮಾಡಿ ಯಡಿಯೂರಪ್ಪನವರ ಬಗ್ಗೆ ದೂರುದುಮ್ಮಾನ ಹೇಳಿಕೊಂಡಿದ್ದರು.

ಆದರೆ ಈ ವಿಷಯ ಬಹಿರಂಗವಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಯಾಗಿದೆ. ಅತೃಪ್ತ ಶಾಸಕರು ಯಾವುದೇ ಸದ್ದುಗದ್ದಲವಿಲ್ಲದೆ, ಆಪರೇಶನ್ ಮುಖ್ಯಮಂತ್ರಿ ಕಾರ್ಯಾಚರಣೆಗೆ ಇಳಿದಿದ್ದಾರೆಯೇ ಇಲ್ಲವೇ ಯಡಿಯೂರಪ್ಪ ಅವರನ್ನು ಹಣಿಯಲು ಈ ಸಭೆ ನಡೆಸಲಾಯಿತೆ ಎಂಬ ಗುಸುಗುಸು ಶುರುವಾಗಿದೆ. ಯಡಿಯೂರಪ್ಪ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕಿ ಅವರ ಸ್ಥಾನಕ್ಕೆ ಬೇರೋಬ್ಬರನ್ನು ತಂದು ಕೂರಿಸಲು ಬಿಜೆಪಿಯ ಕೆಲವರು ಯತ್ನಿಸುತ್ತಿದ್ದಾರೆಯೇ ಅದಕ್ಕೆ ಬಿಜೆಪಿ ಹೈಕಮಾಂಡ್ ಮನ್ನಣೆ ನೀಡುತ್ತಾ ಎಂಬ ಅನುಮಾನ ಬಲಗೊಳ್ಳುತ್ತಿದೆ.

ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಗರಿಗೆ ಸರ್ಕಾರವನ್ನು ರಚನೆ ಮಾಡಿದರೂ ಮೂಲ ಬಿಜೆಪಿಗರಿಂದ ಇದರಿಂದ ಸಂತೋಷ ಇಲ್ಲ. ಪಕ್ಷದಲ್ಲಿ ವಲಸೆ ಬಂದವರ ಪ್ರಭಾವವೇ ಹೆಚ್ಚಾಗಿದೆ ಎಂಬುದು ಮೂಲ ಬಿಜೆಪಿ ಶಾಸಕರ ಅಸಮಾಧಾನ.ಬಿಜೆಪಿಯಲ್ಲಿ ಪಕ್ಷ ಕಟ್ಟಿದವರಿಗೆ ಹಾಗೂ ಸೈದ್ದಾಂತಿಕವಾಗಿ ರಾಜ್ಯದಲ್ಲಿ ಪಕ್ಷವನ್ನು ವಿಸ್ತರಣೆ ಮಾಡಿದವರಿಗೆ ಯಾವುದೇ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಅಸಮಾಧಾನವೂ ಮನೆ ಮಾಡಿದೆ. ಅಲ್ಲದೇ ರಾಜ್ಯ ಸರ್ಕಾರದ ಪ್ರತಿಯೊಂದು ಹೆಜ್ಜೆಯಲ್ಲೂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಾರೆ ಎಂಬ ಇನ್ನೊಂದು ಅಪವಾದವಿದೆ.

ಸರ್ಕಾರದ ಬೆಳವಣಿಗೆಗಳು, ನಿರ್ಧಾರಗಳು, ಪಕ್ಷದಲ್ಲಿನ ಚಟುವಟಿಕೆಗಳ ಕುರಿತು ನಮ್ಮ ಭಾವನೆ- ಸಲಹೆಗಳನ್ನು ಹಂಚಿಕೊಳ್ಳಬೇಕಿದೆ. ಇದಕ್ಕಾಗಿ ಸಭೆ ಕರೆಯಬೇಕು. ಆದರೆ ಯಾವುದೇ ಸಭೆ ಕರೆಯದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.ನಮ್ಮ ಬೇಡಿಕೆ ಒಂದೇ. ನಾವು ಚುನಾಯಿತ ಶಾಸಕರು, ಹೀಗಾಗಿ ಅವರನ್ನು ಸಚಿವರನ್ನಾಗಿ ಮಾಡಬೇಕೆ ಹೊರತು, ಪರಿಷತ್ ಸದಸ್ಯರನ್ನು ಸಚಿವರನ್ನಾಗಿ ಮಾಡಬಾರದು ಎಂದು ಮುಖ್ಯಸಚೇತಕರೂ ಆಗಿರುವ ಶಾಸಕ ಸುನೀಲ್ ಕುಮಾರ್ ಕೂಡ ದೂರಿದ್ದರು.

ಹೈಕಮಾಂಡ್ ಮಟ್ಟದಲ್ಲಿರುವ ರಾಜ್ಯದ ನಾಯಕರೂ ಈ ಎಲ್ಲಾ ಸಂಗತಿಯನ್ನು ವರಿಷ್ಠರ ಗಮನಕ್ಕೆ ತಂದಿದ್ದಾರೆ. ಇದೇ ಕಾರಣಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಬಿಎಸ್‍ವೈ ವಿರುದ್ದ ಅಸಮಾಧಾನವಿದೆ ಎನ್ನಲಾಗಿದೆ.

ಆದರೆ ಯಡಿಯೂರಪ್ಪ ಅವರನ್ನು ಬದಲಾಯಿಸಿ ಬೇರೊಬ್ಬರನ್ನು ಸಿಎಂ ಮಾಡಿದರೆ ಸರಕಾರ ಹೆಚ್ಚು ಬಾಳಿಕೆ ಇರದು ಎಂಬುದು ಹೈಕಮಾಂಡ್ ನಾಯಕರ ಆತಂಕವಾಗಿದೆ. ದೆಹಲಿ ವಲಯದಿಂದ ಯಡಿಯೂರಪ್ಪ ಪದೇ ಪದೇ ಹಿನ್ನಡೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಮೂರರಿಂದ ನಾಲ್ಕು ಬಾರಿ ಸಂಪುಟ ವಿಸ್ತರಣೆಗೆ ಅನುಮತಿ ಕೋರಿ ವರಿಷ್ಠರನ್ನು ಭೇಟಿಯಾದರೂ ಹಸಿರು ನಿಶಾನೆ ಮಾತ್ರ ಕೇಂದ್ರ ನಾಯಕರಿಂದ ಸಿಗುತ್ತಿಲ್ಲ.

ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಬಿಎಸ್ ಯಡಿಯೂರಪ್ಪ ಅಕಾರಕ್ಕೆ ತಂದರು. ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಕಡೆಗಳಲ್ಲಿ ಮತ್ತೆ ಕಮಲ ಅರಳಿಸಿದರು. ಸಾಲು ಸಾಲು ಉಪಚುನಾವಣೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹೀನಾಯವಾಗಿ ಸೋಲುವಂತೆ ಮಾಡಿದರೂ ಸಹ ಪದೇ ಪದೇ ತನ್ನ ನಾಯಕತ್ವದ ಬಗ್ಗೆ ಅಪಸ್ವರ ಕೇಳಿಬರುತ್ತಿರುವುದು ಸ್ವತಃ ಯಡಿಯೂರಪ್ಪ ಅವರಿಗೂ ಬೇಸರ ತರಿಸಿದೆ.

ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ತೊರೆದಾಗಲೂ ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಬಿಜೆಪಿ ಸೋತು ಸುಣ್ಣವಾಗಿತ್ತು.ಈ ಕಾರಣ ಅರಿತಿರುವ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಬದಲಾಯಿಸದೇ ಮೂಲ ಬಿಜೆಪಿಗರಿಗೆ ಸ್ಥಾನ ಮಾನ ನೀಡಿ ಜಾಣ ನಡೆಗೆ ಮುಂದಾಗಿದೆ ಎನ್ನಲಾಗಿದೆ.ಇಲ್ಲದಿದ್ದರೂ ಅನಾಯಾಸವಾಗಿ ವಿರೋಧ ಪಕ್ಷದವರಿಗೆ ಅವಕಾಶ ಮಾಡಿದಂತಾಗುತ್ತದೆ ಎಂಬ ವಾದವೂ ಇದೆ. ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin