ಬಾಯಿಬಿಡದಂತೆ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮೆಂಡ್ ಕಟ್ಟುನಿಟ್ಟಿನ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಯಾವುದೇ ಕಾರಣಕ್ಕೂ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ, ಸಂಪುಟಕ್ಕೆ ಸೇರ್ಪಡೆ, ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ಸೇರಿದಂತೆ ಪಕ್ಷ ಹಾಗೂ ಸರ್ಕಾರದ ಬೆಳವಣಿಗೆಗಳ ಕುರಿತಂತೆ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರನ್ನು ಹೊರತುಪಡಿಸಿದರೆ ಬೇರೆ ಯಾರೊಬ್ಬರೂ ಮಾತನಾಡಬಾರದು ಎಂದು ಕೇಂದ್ರ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೂ ಯಾರೊಬ್ಬರೂ ಸಂಬಂಧ ಪಡದೆ ಇರುವವರು ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿದರೆ ಅದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ನಮಗೆ ಇಂಚಿಂಚೂ ಮಾಹಿತಿ ಇದೆ. ನಾವು ಸುಮ್ಮನಿದ್ದೇವೆ ಭಾವಿಸಬೇಡಿ. ಯಾವ ಸಂದರ್ಭದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕೆಂಬುದು ನಮಗೂ ಗೊತ್ತಿದೆ. ಸಂಪುಟ ವಿಸ್ತರಣೆ, ಪುನಾರಚನೆ, ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ಕೈಬಿಡಬೇಕು ಎಂಬುದು ಪಕ್ಷದ ತೀರ್ಮಾನವಾಗಿರುತ್ತದೆ. ಹಾದಿಬೀದಿಯಲ್ಲಿ ಮಾತನಾಡಿದರೆ ಶಿಸ್ತು ಖಚಿತ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ಹಾಗೂ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ನಾವು ಗಮನ ಹರಿಸಿರಲಿಲ್ಲ. ಯಾವ ಸಂದರ್ಭದಲ್ಲಿ ವಿಸ್ತರಣೆ ಮಾಡಬೇಕು, ಪುನಾರಚನೆ ಯಾವಾಗ ಮಾಡಬೇಕು ಎಂಬುದು ನಮಗೆ ಗೊತ್ತಿದೆ. ಪಕ್ಷದ ಚೌಕಟ್ಟು ಮೀರಿ ವರ್ತಿಸಿದರೆ ನಾವು ಸಹಿಸುವುದಿಲ್ಲ ಎಂದು ರಾಷ್ಟ್ರೀಯ ನಾಯಕರು ಗುಡುಗಿದ್ದಾರೆಂದು ಗೊತ್ತಾಗಿದೆ.

ಕಳೆದ 10 ದಿನಗಳಿಂದ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಂಪುಟ ವಿಸ್ತರಣೆ ಈಗಲೇ ಆಗಬೇಕು, ಪುನಾರಚನೆ ಇಂತಹ ದಿನವೇ ನಡೆಯಬೇಕು, ಇಂತಹವರನ್ನೇ ಸಂಪುಟಕ್ಕೆ ತೆಗೆದುಕೊಳ್ಳಬೇಕು, ನಿಗಮ-ಮಂಡಳಿಗೆ ನಾವು ಹೇಳಿದವರನ್ನೇ ನೇಮಕ ಮಾಡಬೇಕು ಎಂದು ಹುಕುಂ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಪಕ್ಷಕ್ಕೆ ದುಡಿದವರಿಗೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವರಿಗೆ ಮಂತ್ರಿ ಸ್ಥಾನ ಕೊಡುವುದು ಅನಿವಾರ್ಯವಾಗಿದೆ. ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಉಳಿದವರು ಅನಗತ್ಯವಾಗಿ ಏಕೆ ಮಾತನಾಡುತ್ತಿದ್ದಾರೆ ಎಂದು ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟಿಲ್ ಅವರನ್ನು ವರಿಷ್ಠರು ಪ್ರಶ್ನಿಸಿದ್ದಾರೆ.

ಗುಜರಾತ್, ಉತ್ತರ ಪ್ರದೇಶ, ಅಸ್ಸೋಂ, ಮಣಿಪಾಲ್, ಬಿಹಾರ, ಮಧ್ಯ ಪ್ರದೇಶ ಸೇರಿದಂತೆ ಅನೇಕ ಕಡೆ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲಿ ಇಂತಹ ಬೆಳವಣಿಗೆಗಳು ನಡೆಯುವುದಿಲ್ಲ. ಕರ್ನಾಟಕದಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2008ರಲ್ಲಿ ಅಧಿಕಾರದಲ್ಲಿದ್ದಾಗಲೂ ಇಂತಹ ಗುಂಪುಗಾರಿಕೆ ನಡೆಸಿದ ಪರಿಣಾಮ 2013ರಲ್ಲಿ ಪಕ್ಷ ಪ್ರತಿಪಕ್ಷ ಸ್ಥಾನ ಪಡೆಯಲು ಬೇಕಾದ ಸಂಖ್ಯೆಯನ್ನು ಪಡೆಯಲಿಲ್ಲ ಎಂಬುದನ್ನು ಮರೆಯಬೇಡಿ. ಶಿಸ್ತು ಉಲ್ಲಂಘಿಸಿದವರ ಮೇಲೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂಬ ಎಚ್ಚರಿಕೆ ಸಂದೇಶವನ್ನು ನೀಡುವಂತೆ ಕಟೀಲ್‍ಗೆ ನಿರ್ದೇಶನ ನೀಡಿದ್ದಾರೆ.

ಮಾಧ್ಯಮಗಳ ಮುಂದೆ ಬಂದರೆ ನಮಗೆ ಪಕ್ಷದಲ್ಲಿ ಸ್ಥಾನಮಾನ ಸಿಗಬಹುದು ಎಂಬುದು ಕೆಲವರ ಆಲೋಚನೆಯಾಗಿದೆ. ನಮಗೆ ರಾಜ್ಯದ ಬೆಳವಣಿಗೆಗಳ ಕುರಿತಂತೆ ಪ್ರತಿ ಮಾಹಿತಿಯೂ ಲಭ್ಯವಾಗುತ್ತಿದೆ. ಸರಿಯಾದ ಸಮಯದಲ್ಲೇ ನಾವು ಮಧ್ಯ ಪ್ರವೇಶ ಮಾಡುವ ಮೊದಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಇನ್ನು ಮುಂದಾದರೂ ಯಾರೊಬ್ಬರೂ ಪ್ರತ್ಯೇಕ ಸಭೆ ನಡೆಸುವುದು, ಹೊಟೇಲ್‍ನಲ್ಲಿ ಮೀಟಿಂಗ್ ನಡೆಸುವುದನ್ನು ನಿಲ್ಲಿಸಬೇಕು. ಏನೇ ಬೆಳವಣಿಗೆಗಳಾದರೂ ಪಕ್ಷದ ಕಚೇರಿ ಇಲ್ಲವೆ ಮುಖ್ಯಮಂತ್ರಿ ನಿವಾಸದಲ್ಲಿ ನಡೆಯಬೇಕು. ಇದನ್ನು ಹೊರತುಪಡಿಸಿ ಬೇರೆ ಬೆಳವಣಿಗೆಗಳು ನಡೆದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Facebook Comments